ಕೇರಳದಲ್ಲಿ ಹಣ್ಣಿನ ವ್ಯಾಪಾರಕ್ಕೂ ತಟ್ಟಿದ ನಿಪಾಹ್ ವೈರಸ್ ಭೀತಿ
ತಿರುವನಂತಪುರಂ, ಮೇ 28: ಕೇರಳದಲ್ಲಿ ಇದುವರೆಗೆ ಸುಮಾರು 12 ಜನರನ್ನು ಬಲಿತೆಗೆದುಕೊಂಡ ನಿಪಾಹ್ ವೈರಸ್ ಭೀತಿ ಇದೀಗ ಹಣ್ಣಿನ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ.
ಹಕ್ಕಿಗಳು ಕಚ್ಚಿದ ಹಣ್ಣನ್ನು ತಿಂದರೆ ನಿಪಾಹ್ ವೈರಸ್ ಬಂದೀತು ಎಂಬ ಭೀತಿಯಿಂದ ಜನರು ಹಣ್ಣು ತಿನ್ನುವುದನ್ನೇ ಬಿಟ್ಟಿದ್ದಾರೆ. ನಿಗದಿತ ಬೆಲೆಯ ಅರ್ಧದಷ್ಟು ಬೆಲೆಗೆ ಹಣ್ಣುಗಳನ್ನು ಮಾರಿದರೂ ಕೊಂಡುಕೊಳ್ಳುವವರಿಲ್ಲ!
ದೇಶದ ಇತರ ರಾಜ್ಯಗಳಲ್ಲಿ ಕೆಲಸದಲ್ಲಿರುವ ಕೇರಳ ಮೂಲದ ನರ್ಸ್ ಗಳಿಗೆ ತಮ್ಮ ತವರಿಗೆ ತೆರಳಲು ರಜೆಯನ್ನು ಸಹ ನೀಡಲಾಗುತ್ತಿಲ್ಲ. ಕೇರಳದಾದ್ಯಂತ ನಿಪಾಹ್ ವೈರಸ್ ಹೈ ಅಲರ್ಟ್ ಇರುವ ಕಾರಣ ನರ್ಸ್ ಗಳ ರಜೆಯನ್ನೂ ರದ್ದುಗೊಳಿಸಲಾಗಿದೆ.

ಕೇರಳದ ಕೋಞಕೊಡೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬಲಿತೆಗೆದುಕೊಂಡ ನಿಪಾಹ್ ವೈರಸ್ ಕುರಿತು ಸಂಶೋಧನೆ ಮಾಡಿದ ತಂಡವೊಂದು ಈ ಮನೆಯ ಬಾವಿಯಲ್ಲಿದ್ದ 15 ಕ್ಕೂ ಹೆಚ್ಚು ಬಾವಲಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿತ್ತು. ಆದರೆ ನಿಪಾಹ್ ವೈರಸ್ ಈ ಬ್ಯಾಟ್ ಗಳಿಂದ ಹರಡಿದ್ದಲ್ಲ ಎಂದು ಸಂಶೋಧನೆ ದೃಢಪಡಿಸಿತ್ತು. ಹಾಗಾದರೆ ಈ ಸೋಂಕು ತಗುಲಿದ್ದು ಹೇಗೆ ಎಂಬುದು ಈಗಲೂ ನಿಗೂಡವಾಗಿಯೇ ಇದೆ.
ಮಲೇಶಿಯಾದ ನಿಪಾಹ್ ಎಂಬ ಸ್ಥಳದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡ ಈ ಸೋಂಕಿಗೆ ಅದೇ ಊರಿನ ಹೆಸರಿಡಲಾಗಿದೆ. ಒಂದು ನಮೂನೆಯ ಫ್ರೂಟ್ ಬ್ಯಾಟ್ ನಿಂದ ಹರಡುವ ಈ ಮಾರಣಾಂತಿಕ ರೋಗಕ್ಕೆ ಇದುವರೆಗೂ ಯಾವುದೇ ರೀತಿಯ ಲಸಿಕೆ ಲಭ್ಯವಿಲ್ಲ.












Click it and Unblock the Notifications