ಪ್ರತಿಭಟನಾಕಾರರಿಗೆ ಗನ್ ತೋರಿಸಿದ ಕೇರಳ ಶಾಸಕ
ಕೋಟ್ಟಯಂ: ಕೇರಳದ ಪಕ್ಷೇತರ ಶಾಸಕರೊಬ್ಬರ ಕಾರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರಿಂದ ಆಕ್ರೋಶಗೊಂಡ ಶಾಸಕ ಗನ್ ತೋರಿಸಿ ದರ್ಪ ಮೆರೆದಿದ್ದಾರೆ.
ಶಾಸಕ ಪಿ,ಸಿ. ಜಾರ್ಜ್ ಅವರು ಮುಂಡಕ್ಕಯಂ ಬಳಿ ಎಸ್ಟೇಟ್ ವೊಂದಕ್ಕೆ ಭೇಟಿ ನೀಡಲು ಬಂದಾಗ ಪ್ರತಿಭಟನಾಕಾರರು ಘೋಷಣೆ ಕೂಗಿ ಶಾಸಕರಿಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸುವುದಕ್ಕಾಗಿ ಜಾರ್ಜ್ ಅವರು ಗನ್ ತೋರಿಸಿದ ಘಟನೆ ಗುರುವಾರ ನಡೆದಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.

ಮುಂಡಕ್ಕಯಂ ಎಸ್ಟೇಟ್ ಬಳಿ ವಾಸಿಸುತ್ತಿರುವ 52 ಬಡ ಕುಟುಂಬಗಳನ್ನು ಭೇಟಿ ಮಾಡುವುದಕ್ಕಾಗಿ ಪೂಂಜಾರ್ ಕ್ಷೇತ್ರದ ಶಾಸಕ ಪಿ,ಸಿ ಜಾರ್ಜ್ ಬಂದಿದ್ದರು. ಎಸ್ಟೇಟ್ ಬಳಿ ವಾಸಿಸುತ್ತಿರುವ ಬಡವರ ಕುಟುಂಬಗಳಿಗೆ ಕೆಲವು ಪುಂಡರು ತೊಂದರೆ ಕೊಡುತ್ತಿರುವುದಾಗಿ ಅಲ್ಲಿನ ನಿವಾಸಿಗಳು ದೂರಿದ್ದರು.
ಎಸ್ಟೇಟ್ ಬಳಿ ವಾಸಿಸುತ್ತಿರುವ ನಮ್ಮನ್ನು ಅಲ್ಲಿಂದ ಒಕ್ಕಲೆಬ್ಬಿಸಲು ರಾತ್ರಿ ಹೊತ್ತು ತೊಂದರೆ ನೀಡಲಾಗುತ್ತಿದೆ ಎಂದು ಅಲ್ಲಿ ವಾಸಿಸುತ್ತಿರುವ ಕುಟುಂಬಗಳು ಅಳಲು ತೋಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಜಾರ್ಜ್ ಆ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಜಾರ್ಜ್ ಅವರು ಅಲ್ಲಿಗೆ ಕಾಲಿಡುತ್ತಿದ್ದಂತೆ ಕೆಲವು ಪ್ರತಿಭಟನಾಕಾರರು ಜಾರ್ಜ್ ಅವರ ವಿರುದ್ಧ ಘೋಷಣೆ ಕೂಗಿ ಸುತ್ತುವರಿದಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸುವುದಕ್ಕಾಗಿ ಜಾರ್ಜ್ ಗನ್ ತೋರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜ್, "ನಾನು ಗನ್ ಹೊರ ತೆಗೆಯುವಂತೆ ಮಾಡಿದ್ದೇ ಆ ಪುಂಡರು. ನನ್ನ ಕೈಯಲ್ಲಿರುವುದು ಪರವಾನಗಿ ಇರುವ ಗನ್. ನನ್ನಲ್ಲಿಯೂ ಗನ್ ಇದೆ ಎಂದು ತೋರಿಸುವುದಕ್ಕಾಗಿಯೇ ಪಿಸ್ತೂಲ್ ಹೊರತೆಗೆದೆ ಎಂದು ಸಮರ್ಥಸಿಕೊಂಡರು.












Click it and Unblock the Notifications