ನೇವಿ ಅಧಿಕಾರಿಗಳಿಗೆ 'Thanks' ಹೇಳಿದ ಹಸಿ ಬಾಣಂತಿ ಸಜಿತಾ
ಬೆಂಗಳೂರು, ಆಗಸ್ಟ್ 20: ಮಹಾಮಳೆಗೆ ತತ್ತರಿಸಿರುವ ಕೇರಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಭಾರತೀಯ ವಾಯು, ಜಲ, ಸೇನೆ, ವಿಪತ್ತು ನಿರ್ವಹಣಾ ದಳ, ಸ್ಥಳೀಯ ಮೀನುಗಾರರಿಗೆ ಇದೀಗ ಧನ್ಯವಾದ ಅರ್ಪಿಸುವ ಸಮಯ ಬಂದಿದೆ. ಆಗಸ್ಟ್ 17ರಂದು ತುಂಬು ಗರ್ಭಿಣಿಯ ಜೀವ ಉಳಿಸಿದ ಭಾರತೀಯ ಜಲ ಸೇನೆ ಅಧಿಕಾರಿಗಳಿಗೆ ಹಸಿ ಬಾಣಂತಿ ಸಜಿತಾ ಅವರು 'ಥ್ಯಾಂಕ್ಸ್' ಹೇಳಿದ್ದಾರೆ.
25 ವರ್ಷ ವಯಸ್ಸಿನ ತುಂಬು ಗರ್ಭಿಣಿ ಸಜಿತಾ ಅವರನ್ನು ಅಂದು ಆಸ್ಪತ್ರೆಗೆ ದಾಖಲಿಸಲು ನೇವಿಯ ಪೈಲಟ್ ಕಮಾಂಡರ್ ವಿಜಯ್ ವರ್ಮ ಹಾಗೂ ತಂಡ ತೆಗೆದುಕೊಂಡಿದ್ದು 20 ನಿಮಿಷಗಳು ಮಾತ್ರ. ತ್ವರಿತಗತಿಯ ಈ ಕಾರ್ಯಾಚಾರಣೆಯಿಂದಾಗಿ ಸಜಿತಾ ಅವರು ಅಗತ್ಯ ವೈದ್ಯಕೀಯ ನೆರವು ಪಡೆದು ಗಂಡು ಮಗುವಿಗೆ ಜನ್ಮ ನೀಡುವಂತಾಯಿತು.
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಜಿತಾ ಅವರನ್ನು ರಕ್ಷಿಸಿದ ನೌಕಾಪಡೆ ತಂಡಕ್ಕೆ ಪೈಲಟ್ ಕಮಾಂಡರ್ ವಿಜಯ್ ಅವರಿಗೆ ಸಜಿತಾ ಅವರ ಕುಟುಂಬ ವಿಶೇಷವಾಗಿ ಧನ್ಯವಾದ ಆರ್ಪಿಸಿದೆ.
ಸಜಿತಾ ಅವರ ಕುಟುಂಬಸ್ಥರು ಮನೆಯ ಮಹಡಿ ಮೇಲೆ Thanks ಎಂದು ಬಿಳಿ ಬಣ್ಣದಲ್ಲಿ ದೊಡ್ಡದಾಗಿ ಬರೆದು ರಕ್ಷಣಾ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ನವಜಾತ ಶಿಶುವಿನೊಂದಿಗೆ ತಾಯಿ ಸಜಿತಾ
ಕೇರಳದ ಮಹಾಮಳೆ, ಪ್ರವಾಹಕ್ಕೆ ತುತ್ತಾಗಿ ತತ್ತರಿಸಿದ ಜಿಲ್ಲೆಗಳ ಪೈಕಿ ಎರ್ನಾಕುಲಂ ಕೂಡಾ ಒಂದು. ಈ ಜಿಲ್ಲೆಯ ಆಳುವ ಪ್ರದೇಶದ ಚೆಂಗಮನಾಡ್ ಎಂಬಲ್ಲಿ ವಾಸವಿರುವ 25 ವರ್ಷ ವಯಸ್ಸಿನ ಸಜಿತಾ ಅವರ ಮನೆಗೂ ನೀರು ನುಗ್ಗಿತ್ತು. ಸಜಿತಾ ಜಜಿಲ್ ಅವರು ಕಟ್ಟಡದ ಎರಡನೇ ಅಂತಸ್ತಿನಲ್ಲಿದ್ದರೆ, ಮೊದಲ ಅಂತಸ್ತು ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಎರಡನೇ ಅಂತಸ್ತಿಗೆ ನೀರು ನುಗ್ಗುವ ಸಂದರ್ಭದಲ್ಲಿ ಸಜಿತಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಇದು ಆಗಸ್ಟ್ 17ರಂದು ನಡೆದ ಘಟನೆ.

20 ನಿಮಿಷಗಳ ಕಾರ್ಯಾಚರಣೆ
ಪೈಲಟ್ ಕಮಾಂಡರ್ ವಿಜಯ್ ಅವರ ತಂಡಕ್ಕೆ ಈ ಬಗ್ಗೆ ಸುದ್ದಿ ಸಿಕ್ಕ ಕೆಲ ನಿಮಿಷಗಳಲ್ಲೇ ಸ್ಥಳಕ್ಕೆ ಆಗಮಿಸಿತು. 20 ನಿಮಿಷಗಳಲ್ಲಿ ಸಜಿತಾರನ್ನು ಏರ್ ಲಿಫ್ಟ್ ಮಾಡಿ ಕರೆದುಕೊಂಡು ಹೋಗುವುದು ತುಸು ಕಷ್ಟದ ಕೆಲಸವಾಗಿತ್ತು, ಆದರೆ, ನಾಜೂಕಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ನೌಕಾ ಪಡೆ, ಸಜಿತಾರನ್ನು ಕೊಚ್ಚಿಯ ಐಎನ್ ಎಚ್ಎಸ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿತು.
ಭಾರಿ ಥಂಡಿ ವಾತಾವರಣದಲ್ಲಿದ್ದ ಗರ್ಭಿಣಿ ಅವರ ರಕ್ಷಣೆ ಹಾಗೂ ಮಗುವಿನ ಜನನ ಆಸ್ಪತ್ರೆಯ ವೈದ್ಯರಿಗೆ ಸವಾಲಾಗಿತ್ತು. ಚಿತ್ರದಲ್ಲಿ ಸಜಿತಾ ಅವರ ಮನೆ ಮೇಲೆ ಥ್ಯಾಂಕ್ಸ್ ಎಂದು ಬರೆದಿರುವುದನ್ನು ಕಾಣಬಹುದು.
|
ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ
ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ನವಜಾತ ಶಿಶುವಿನ ಜತೆ ಇರುವ ತಾಯಿ ಸಜಿತಾ ಹಾಗೂ ಆಸ್ಪತ್ರೆ ಸಿಬ್ಬಂದಿಯ ಚಿತ್ರವನ್ನು ಟ್ವೀಟ್ ಮಾಡಿದ ಭಾರತೀಯ ನೌಕಾಪಡೆ.
| Array |
ರಕ್ಷಣಾ ಕಾರ್ಯಾಚರಣೆ ಬಗ್ಗೆ ಟ್ವೀಟ್
ರಕ್ಷಣಾ ಕಾರ್ಯಾಚರಣೆ ಬಗ್ಗೆ ಸತತವಾಗಿ ಟ್ವೀಟ್ ಮಾಡುವ ಮೂಲಕ ಅಪ್ಡೇಟ್ ನೀಡುತ್ತಿರುವ ನೌಕಾಪಡೆ. ಸಂಕಷ್ಟದಲ್ಲಿ ಸಿಲುಕಿರುವವರು ಟ್ವೀಟ್ ಮಾಡಿ ಕೂಡಾ ನೆರವು ಕೋರಬಹುದಾಗಿದೆ.












Click it and Unblock the Notifications