Kerala Elections 2026: ಚುನಾವಣಾ ಕಣದಲ್ಲಿ ಗ್ಯಾರೆಂಟಿ ಕಾರುಬಾರು; ಯಾರ ಭರವಸೆ ನಂಬ್ತಾರೆ ಮತದಾರರು
ಕರ್ನಾಟಕ ಮತ್ತು ತೆಲಂಗಾಣದಲ್ಲಿ ಯಶಸ್ವಿಯಾದ 'ಗ್ಯಾರೆಂಟಿ' ರಾಜಕೀಯದ ಅಲೆ ಈಗ ಕೇರಳ ವಿಧಾನಸಭಾ ಚುನಾವಣೆಯಲ್ಲೂ ಬೀಸುತ್ತಿದೆ. 2026ರ ಕೇರಳ ವಿಧಾನಸಭಾ ಚುನಾವಣೆಯ ಕಣ ದಿನೇದಿನೇ ರಂಗೇರುತ್ತಿದ್ದು, ರಾಜ್ಯದ ಪ್ರಮುಖ ರಾಜಕೀಯ ಮೈತ್ರಿಕೂಟಗಳು ಮತದಾರರನ್ನು ಸೆಳೆಯಲು ಇದೇ ಗ್ಯಾರೆಂಟಿ ಅಸ್ತ್ರದ ಮೊರೆ ಹೋಗಿವೆ. ಸಾಕ್ಷರತೆ ಮತ್ತು ಜಾಗೃತಿಯಲ್ಲಿ ಮುಂದಿರುವ ಕೇರಳದ ಜನತೆಗೆ ಕೇವಲ ಭಾವನಾತ್ಮಕ ವಿಚಾರಗಳಿಗಿಂತ ದೈನಂದಿನ ಬದುಕಿನ ಆರ್ಥಿಕ ಭದ್ರತೆಯೇ ಮುಖ್ಯ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ 'ಸಾಮಾಜಿಕ ಭದ್ರತಾ ಪಿಂಚಣಿ' ಮತ್ತು ಗ್ಯಾರೆಂಟಿ ಯೋಜನೆಗಳು ಪ್ರಮುಖ ಚುನಾವಣಾ ಅಸ್ತ್ರವಾಗಿ ಬದಲಾಗಿವೆ.
ಪಿಂಚಣಿ ವಿಳಂಬ ಹಾಗೂ ಎಲ್‌ಡಿಎಫ್ ಮುಂದಿರುವ ಸವಾಲು
ಕೇರಳ ರಾಜಕೀಯದಲ್ಲಿ 'ಸಾಮಾಜಿಕ ಭದ್ರತಾ ಪಿಂಚಣಿ' ಬಹಳ ದೊಡ್ಡ ಪಾತ್ರ ವಹಿಸುತ್ತದೆ. ವೃದ್ಧಾಪ್ಯ, ವಿಧವಾ ವೇತನ ಹಾಗೂ ಕೃಷಿ ಕಾರ್ಮಿಕರ ಪಿಂಚಣಿ ಪಡೆಯುವ ಲಕ್ಷಾಂತರ ಫಲಾನುಭವಿಗಳಿದ್ದಾರೆ. ಕಳೆದ ಬಾರಿ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಸತತ ಎರಡನೇ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಲು ಈ ಪಿಂಚಣಿ ವ್ಯವಸ್ಥೆಯ ಸಮರ್ಪಕ ಕಾರ್ಯನಿರ್ವಹಣೆಯೇ ಮುಖ್ಯ ಕಾರಣವಾಗಿತ್ತು.

ಆದರೆ ಪ್ರಸ್ತುತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಕಳೆದ ಕೆಲವು ತಿಂಗಳುಗಳಿಂದ ಫಲಾನುಭವಿಗಳಿಗೆ ಸರಿಯಾಗಿ ಪಿಂಚಣಿ ವಿತರಣೆಯಾಗಿಲ್ಲ. ಕೇಂದ್ರ ಸರ್ಕಾರ ತಮಗೆ ಬರಬೇಕಾದ ಅನುದಾನ ತಡೆಹಿಡಿದಿರುವುದೇ ಈ ಸಮಸ್ಯೆಗೆ ಕಾರಣ ಎಂದು ಎಡಪಕ್ಷಗಳು ಆರೋಪಿಸುತ್ತಿದ್ದರೂ, ಜನರ ಆಕ್ರೋಶ ಮಾತ್ರ ಕಡಿಮೆಯಾದಂತಿಲ್ಲ. ಮತದಾರರನ್ನು ಶಾಂತಿಗೊಳಿಸಲು ಸರ್ಕಾರ ಹೊಸ ಘೋಷಣೆಗಳ ಮೊರೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಇದನ್ನೂ ಓದಿ: ಸಂಪ್ರದಾಯ ಮುರಿದ ಮಮತಾ ಬ್ಯಾನರ್ಜಿ: ಬೂತ್‌ಗಳಿಗೆ ದಿಢೀರ್ ಭೇಟಿ, ದೀದಿ ಸೋಲಲಿದ್ದಾರೆ ಎಂದ ಸುವೇಂದು ಅಧಿಕಾರಿ
ಯುಡಿಎಫ್ ಬತ್ತಳಿಕೆಯಲ್ಲಿ 'ಕರ್ನಾಟಕ ಮಾದರಿ'ಯ ಬ್ರಹ್ಮಾಸ್ತ್ರ
ಆಡಳಿತ ವಿರೋಧಿ ಅಲೆ ಹಾಗೂ ಪಿಂಚಣಿ ವಿಳಂಬವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF), 'ಕರ್ನಾಟಕ ಮಾದರಿ'ಯ ಗ್ಯಾರೆಂಟಿಗಳನ್ನು ಘೋಷಿಸುತ್ತಿದೆ. ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು, ನಿರುದ್ಯೋಗಿ ಯುವಕರಿಗೆ ಭತ್ಯೆ, ಉಚಿತ ಬಸ್ ಪ್ರಯಾಣ ಹಾಗೂ ಅಡುಗೆ ಅನಿಲ ಸಬ್ಸಿಡಿಯ ಜೊತೆಗೆ "ನಾವು ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ತಪ್ಪದೇ ಹೆಚ್ಚುವರಿ ಪಿಂಚಣಿ ನೀಡುತ್ತೇವೆ" ಎಂಬ ಭರವಸೆಗಳನ್ನು ಜನರ ಮುಂದಿಡುತ್ತಿದೆ. ವಿ.ಡಿ. ಸತೀಶನ್ ನೇತೃತ್ವದಲ್ಲಿ ಯುಡಿಎಫ್ ನಾಯಕರು ಇದೇ ಗ್ಯಾರೆಂಟಿ ಕಾರ್ಡ್‌ಗಳನ್ನು ಹಿಡಿದು ಮನೆಮನೆಗೆ ತೆರಳುತ್ತಿದ್ದಾರೆ.
ಎಲ್‌ಡಿಎಫ್ ತಿರುಗೇಟು
ಯುಡಿಎಫ್‌ನ ಈ ಭರವಸೆಗಳನ್ನು ಕೇವಲ ಚುನಾವಣಾ ಗಿಮಿಕ್ ಎಂದಿರುವ ಎಲ್‌ಡಿಎಫ್, "ನಮ್ಮ ಕಲ್ಯಾಣ ಯೋಜನೆಗಳು ಭರವಸೆಗಳಲ್ಲ, ಅವು ಈಗಾಗಲೇ ಜನರ ಕೈಸೇರಿವೆ" ಎಂದು ಸಮರ್ಥಿಸಿಕೊಳ್ಳುತ್ತಿದೆ. ಕೋವಿಡ್ ಕಾಲದ ಆಹಾರ ಕಿಟ್, ವಸತಿ ಕಲ್ಪಿಸುವ 'ಲೈಫ್ ಮಿಷನ್' ಹಾಗೂ ಉಚಿತ ಇಂಟರ್ನೆಟ್ ನೀಡುವ 'ಕೆ-ಫೋನ್' ಯೋಜನೆಗಳೇ ತಮ್ಮ ನೈಜ ಗ್ಯಾರೆಂಟಿಗಳು ಎಂದು ಬಿಂಬಿಸುತ್ತಾ, ಸತತ ಮೂರನೇ ಬಾರಿ ಅಧಿಕಾರ ಹಿಡಿಯುವ ಇರಾದೆ ಎಲ್‌ಡಿಎಫ್‌ನದ್ದಾಗಿದೆ.
ಮೋದಿ ಗ್ಯಾರೆಂಟಿ ಅಸ್ತ್ರ ಪ್ರಯೋಗಿಸಿದ ಎನ್‌ಡಿಎ
ಕೇರಳದಲ್ಲಿ ನೆಲೆ ಕಂಡುಕೊಳ್ಳಲು ದಶಕಗಳಿಂದ ಹೋರಾಡುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ (NDA), 'ಮೋದಿ ಗ್ಯಾರೆಂಟಿ' ಘೋಷವಾಕ್ಯದ ಮೇಲೆ ಮತಯಾಚಿಸುತ್ತಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ, ಉಚಿತ ಯೋಜನೆಗಳ ಹೆಸರಿನಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಎರಡೂ ಮೈತ್ರಿಕೂಟಗಳು ರಾಜ್ಯವನ್ನು ಸಾಲದ ಸುಳಿಗೆ ತಳ್ಳುತ್ತಿವೆ ಎಂದು ಆರೋಪಿಸುತ್ತಿರುವ ಎನ್‌ಡಿಎ, ಭ್ರಷ್ಟಾಚಾರ ರಹಿತ ಆಡಳಿತ, ಸುಭದ್ರ ಆರ್ಥಿಕತೆ ಹಾಗೂ ಕೇಂದ್ರದ ಯೋಜನೆಗಳನ್ನು ನೇರವಾಗಿ ಜನರ ಖಾತೆಗೆ ತಲುಪಿಸುವ ಭರವಸೆ ನೀಡುತ್ತಿದೆ.
ಇದನ್ನೂ ಓದಿ: West Bengal Election: ಪಶ್ಚಿಮ ಬಂಗಾಳ ಎರಡನೇ ಹಂತದ ಚುನಾವಣೆ: ಬೆಳಿಗ್ಗೆ 11ರವರೆಗೆ ಶೇ.39.97ರಷ್ಟು ಮತದಾನ ದಾಖಲು
ಆರ್ಥಿಕತೆಯ ವಾಸ್ತವ
ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ರಾಜಕೀಯ ಪಕ್ಷಗಳು ನೂರಾರು ಕೋಟಿ ರೂಪಾಯಿಗಳ ಹೊಸ ಗ್ಯಾರೆಂಟಿಗಳನ್ನು ಘೋಷಿಸುತ್ತಿವೆ. ಆದರೆ, ಸರ್ಕಾರಿ ನೌಕರರ ವೇತನ ಪಾವತಿಸಲೂ ಪರದಾಡುತ್ತಿರುವ, ಭಾರಿ ಸಾಲದ ಹೊರೆಯಿಂದ ನಲುಗಿರುವ ಕೇರಳದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಈ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ? ಎಂಬುದು ಎಲ್ಲರನ್ನೂ ಕಾಡುತ್ತಿರುವ ದೊಡ್ಡ ಪ್ರಶ್ನೆ. ಅಕ್ಷರಸ್ಥ ಮತದಾರರು ಕೇವಲ ಜನಪ್ರಿಯ 'ಗ್ಯಾರೆಂಟಿ'ಗಳಿಗೆ ಮರುಳಾಗುತ್ತಾರೋ ಅಥವಾ ಅಭಿವೃದ್ಧಿ ಹಾಗೂ ವಾಸ್ತವದ ಕಡೆ ಒಲವು ತೋರುತ್ತಾರೋ ಎಂಬುದರ ಮೇಲೆಯೇ ಕೇರಳ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.












Click it and Unblock the Notifications