Karnataka VS Tamil Nadu: ಹಲವು ನಗರಗಳ ಅಭಿವೃದ್ಧಿಯಿಂದ ಚೆನ್ನೈಗೆ ಕಡಿಮೆ ಒತ್ತಡ; ಬೆಂಗಳೂರಿನ ಮೇಲೇಕೆ ಹೆಚ್ಚು ಅವಲಂಬನೆ?
Karnataka VS Tamil Nadu: ಭಾರತದ ಪ್ರಮುಖ ನಗರ, ದೇಶದ ಸಿಲಿಕಾನ್ ರಾಜಧಾನಿ, ಸಿಲಿಕಾನ್ ಸಿಟಿ - ಐಟಿಬಿಟಿ ಸಿಟಿ ಎನ್ನುವ ಹಲವು ಬಿರುದುಗಳು ಬೆಂಗಳೂರಿಗೆ ಇದೆ. ದೇಶದಲ್ಲಿಯೇ ವೇಗವಾಗಿ ಹಾಗೂ ವಿಶ್ವದಾದ್ಯಂತ ಗಮನ ಸೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಬೆಂಗಳೂರು ಅಗ್ರ ಸಾಲಿನಲ್ಲಿದೆ. ಆದರೆ, ಬೆಂಗಳೂರು ಮಹಾನಗರದ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ನೆರೆಯ ತಮಿಳುನಾಡು ಏಕಕಾಲಕ್ಕೇ ರಾಜ್ಯದ ಹಲವು ನಗರಗಳನ್ನು ಅಭಿವೃದ್ಧಿಪಡಿಸುತ್ತಿರುವುದು ರಾಜಧಾನಿ ಚೆನ್ನೈ ಮೇಲಿನ ಒತ್ತಡ ತಗ್ಗಿಸುತ್ತಿದೆ.
ಇದೇ ಸಮಯದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಿಗೂ ತಮಿಳುನಾಡು ಪೈಪೋಟಿ ಕೊಡುತ್ತಿದೆ. ಸಿಲಿಕಾನ್ ಸಿಟಿ ಮೇಲೆ ಒತ್ತಡ ತಗ್ಗಿಸಲು ರಾಜ್ಯದ ಇತರೆ 2 ಟಯರ್ ಅಥವಾ 3 ಟಯರಿ ನಗರಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಶೇ.40ರಷ್ಟು ಕರುನಾಡು ಬೆಂಗಳೂರಿನ ಮೇಲೆಯೇ ಅವಲಂಬಿತವಾಗಿದ್ದು, ದಿನದಿಂದ ಟ್ರಾಫಿಕ್, ಬಾಡಿಗೆ ಹೆಚ್ಚಾಗುತ್ತಿರುವುದು, ಸ್ಟ್ಯಾಂಡರ್ಡ್ ಆಫ್ ಲಿವಿಂಗ್ ಹೆಚ್ಚಳದಿಂದ ಬದುಕು ಕಷ್ಟವಾಗುತ್ತಿದೆ. ಆದರೆ, ಮುಂದಾಲೋಚನೆಯಿಂದ ಹೆಜ್ಜೆ ಇಡುತ್ತಿರುವ ನಮ್ಮ ನೆರೆ ರಾಜ್ಯ ಮಾತ್ರ ಇದಕ್ಕೆ ತದ್ವರಿದ್ಧವಾಗಿ ಮುನ್ನಡಿ ಇಡುತ್ತಿದ್ದು, ಚೆನ್ನೈ ಒತ್ತಡ ಮುಕ್ತ ಆಗಿದ್ದಲ್ಲದೇ, ಕಾಸ್ಟ್ ಆಫ್ ಲಿವಿಂಗ್ ಬೆಂಗಳೂರಿಗೆ ಹೋಲಿಸಿದಲ್ಲಿ ಬಹಳವೇ ಕಡಿಮೆ ಎನ್ನಲಾಗುತ್ತಿದೆ. ಇಷ್ಟು ಟ್ರಾಫಿಕ್ ಜಂಜಾಟವೂ ಇಲ್ಲಿಲ್ಲ. ಎರಡೂ ರಾಜ್ಯಗಳ ನಡುವೆ ನಗರಗಳ ಅಭಿವೃದ್ಧಿ ಕಲ್ಪನೆ ಹೇಗಿದೆ ಎನ್ನುವ ವಿವರಣೆ - ವಿಶೇಷ ಲೇಖನ ಇಲ್ಲಿದೆ.

Karnataka vs Tamil Nadu: ತಮಿಳುನಾಡಿನ ನಗರಗಳ ವಿಶೇಷತೆ
ತಮಿಳುನಾಡಿನಲ್ಲಿ ಬಹು ನಗರ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತದಲ್ಲಿ ಅತ್ಯಂತ ಹೆಚ್ಚು ನಗರೀಕರಣಗೊಂಡ ದೊಡ್ಡ ರಾಜ್ಯ ತಮಿಳುನಾಡು ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ತಮಿಳುನಾಡಿನ ಆರ್ಥಿಕ ಬೆಳವಣಿಗೆಯು ಕೇವಲ ರಾಜಧಾನಿಗೆ ಸೀಮಿತವಾಗದೆ ಎರಡನೇ ಹಾಗೂ ಮೂರನೇ ಹಂತದ ನಗರಗಳನ್ನೂ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.
ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ವಾಹನ ತಯಾರಿಕೆ (ಆಟೋಮೊಬೈಲ್), ಐಟಿ ಸೇವೆ ಮತ್ತು ಪ್ರಮುಖ ಬಂದರು ಹಬ್ ಸೇರಿ ಹಲವು ಕೈಗಾರಿಕಾ ಕ್ಷೇತ್ರಗಳು ಕಾರ್ಯಗತವಾಗಿದ್ದು, ಉದ್ಯೋಗಗಳ ಸೃಷ್ಟಿಗೇನೂ ಕೊರತೆಯಾಗುತ್ತಿಲ್ಲ.
ಕೊಯಂಬತ್ತೂರು: ಚೆನ್ನೈ ನಂತರ ತಮಿಳುನಾಡಿನ ಮತ್ತೊಂದು ಪ್ರಮುಖ ನಗರವಾದ ಕೊಯಂಬತ್ತೂರು ಅನ್ನು ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎನ್ನುತ್ತಾರೆ. ಜವಳಿ (ಟೆಕ್ಸ್‌ಟೈಲ್ಸ್), ಎಂಜಿನಿಯರಿಂಗ್, ಮೋಟಾರ್ ಪಂಪ್‌ಗಳು ಹಾಗೂ ಟೆಕ್ ಹಬ್ ಈ ನಗರದಲ್ಲಿ ಪ್ರಸಿದ್ಧ. ದೇಶದ ಪ್ರತಿಷ್ಠ ಬ್ರ್ಯಾಂಡ್‌ನ ಬಹುತೇಕ ಉಡುಪುಗಳು ಇಲ್ಲಿಯೋ ತಯಾರಾಗುತ್ತವೆ.
ತಿರುಪುರ್: ಸಿದ್ಧ ಉಡುಪುಗಳು ಮತ್ತು ಜವಳಿ ರಫ್ತಿನ ಕಾರಣಕ್ಕೆ ಪ್ರಸಿದ್ಧವಾಗಿದೆ.
ತಿರುಚಿರಾಪಳ್ಳಿ / ತಿರುಚ್ಚಿ: ಇನ್ನು ತಮಿಳುನಾಡಿನ ಮತ್ತೊಂದು ಪ್ರಮುಖ ನಗರವೆಂದರೆ ಅದು ತಿರುಚ್ಚಿ. ಇಲ್ಲಿ ಎಂಜಿನಿಯರಿಂಗ್ ಮತ್ತು ತಯಾರಿಕಾ ವಲಯಗಳಿವೆ.
ಮಧುರೈ: ದಕ್ಷಿಣ ತಮಿಳುನಾಡಿನ ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಮಧುರೈ ಅಭಿವೃದ್ಧಿಯಾಗಿದೆ. ರಬ್ಬರ್ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಿ ಈ ನಗರ ಪ್ರಸಿದ್ಧಿ.
ಹೊಸೂರು: ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶವಾದ ಹೊಸೂರು ಸಹ ಹಲವು ಕಾರಣಗಳಿಗೆ ವಿಶೇಷವಾಗಿದೆ. ಈ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳು (EV), ಎಲೆಕ್ಟ್ರಾನಿಕ್ಸ್ ಮತ್ತು ಭಾರಿ ವಾಹನ ತಯಾರಿಕೆಯ ಜಾಗತಿಕ ಹಬ್ ಆಗಿ ಬದಲಾಗಿದೆ. ಬೆಂಗಳೂರಿನೊಂದಿಗೆ ಗಡಿ ಹಂಚಿ ಕೊಂಡಿದೆ ಎಂಬ ಕಾರಣಕ್ಕೇ ಇದನ್ನು ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಇದ್ದು, ಹಲವರು ಕರ್ನಾಟಕಕ್ಕೆ ಬಂದು ಕೆಲಸ ಮಾಡುತ್ತಾರೆ.
ಸೇಲಂ ಮತ್ತು ಈರೋಡ್: ಅವಳಿ ನಗರಗಳಂತೆ ಈ ಎರಡು ನಗರಗಳು ತಮಿಳುನಾಡಿನಲ್ಲಿ ಪ್ರಸಿದ್ಧ. ಉಕ್ಕು (ಸ್ಟೀಲ್) ಉತ್ಪಾದನೆ ಮತ್ತು ವಿದ್ಯುತ್ ಮಗ್ಗದ (ಪವರ್ ಲೂಮ್) ಜವಳಿ ಉದ್ಯಮಗಳೂ ಇಲ್ಲಿವೆ.
ತೂತುಕುಡಿ: ಬಂದರು ನಗರವಾಗಿರುವ ಇಲ್ಲಿ ಇಂಧನ ಮತ್ತು ಸಾಗಣೆ ಮತ್ತು ವಿತರಣಾ ಸೇವೆಗಳು ಅಭಿವೃದ್ಧಿ ಆಗಿದೆ. ಒಟ್ಟಿನಲ್ಲಿ ಆಯಾ ನಗರಗಳಲ್ಲಿ ಯಾವುದೇ ಉದ್ಯೋಗ ಕೊರತೆಯಾಗದಂತೆ ಸರಕಾರ ಎಚ್ಚರಿಕೆ ವಹಿಸಿದ್ದು, ಈ ಕ್ರಮದಿಂದ ಇಡೇ ತಮಿಳುನಾಡು ಅಭಿವೃದ್ಧಿಯಾಗಿದೆ.
ಕರ್ನಾಟಕದಲ್ಯಾಕೆ ಬೆಂಗಳೂರಿಗೇ ಮಹತ್ವ?
ಬೆಂಗಳೂರು ನಗರ: ಕರ್ನಾಟಕದ ರಾಜಧಾನಿ ಮತ್ತು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ಧ. ಇದು ದೇಶದ ಅತಿ ದೊಡ್ಡ ಐಟಿ (IT) ಮತ್ತು ಸ್ಟಾರ್ಟ್‌ಅಪ್ ಹಬ್ ಆಗಿದೆ. ಬೆಂಗಳೂರು ಮಹಾನಗರದಲ್ಲಿ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳು, ಬಾಹ್ಯಾಕಾಶ ಸಂಶೋಧನೆ (ISRO), ಮತ್ತು ಸುಧಾರಿತ ವೈಮಾನಿಕ ಉದ್ಯಮ ಸೇರಿ ಹಲವು ಕಾರಣಗಳಿಗೆ ವಿಶೇಷವಾಗಿದೆ. ಭಾರತದಲ್ಲೇ ಪ್ರಮುಖ ನಗರವಾಗಿ ಗುರಿತಿಸಿಕೊಂಡಿದೆ. ಇಲ್ಲಿ ಹವಾಮಾನವೇ ವಿಶ್ವದೆಲ್ಲೆಡೆಯಿಂದ ಜನರನ್ನು ಆಕರ್ಷಿಸುತ್ತಿದ್ದು, ಬೇಸಿಗೆಯಲ್ಲಿಯೂ ತಂಪಾಗಿರುವ ಬೆಂಗಳೂರು ಹಸಿರು ಉದ್ಯಾನವನಗಳಿಂದಲೂ ಕಂಗೊಳಿಸುತ್ತಿವೆ. ಅದರಿಂದಲೇ ನಗರದ ಮೇಲಿನ ಒತ್ತಡ ಹೆಚ್ಚುತ್ತಲೇ ಇದೆ.
ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಪ್ರವಾಸೋದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ಅಲ್ಲದೆ ಬೆಂಗಳೂರಿನ ನಂತರದ ಎರಡನೇ ದೊಡ್ಡ ಐಟಿ ಹಬ್ ಸಹ ಹೌದು. ಔಷಧಿ ಮತ್ತು ಎಲೆಕ್ಟ್ರಾನಿಕ್ಸ್ ಕೈಗಾರಿಕೆಗೆ ಪ್ರಸಿದ್ಧ.
ಮಂಗಳೂರು: ಕರಾವಳಿ ಪ್ರದೇಶವಾದ ಮಂಗಳೂರು ಕರ್ನಾಟಕದ ಪ್ರಮುಖ ಬಂದರು ನಗರ. ಪೆಟ್ರೋಕೆಮಿಕಲ್ಸ್, ತೈಲ ಸಂಸ್ಕರಣೆ, ಹಡಗು ಸಾಗಣೆ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಮುಂಚೂಣಿಯಲ್ಲಿದೆ. ಶಿಕ್ಷಣ ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೂ ಪ್ರಸಿದ್ಧ. ಆದರೆ ಉಳಿದ ರಾಜ್ಯಗಳ ಕರಾವಳಿ ಪ್ರದೇಶಗಳಂತೆ ಪ್ರಸಿದ್ಧಿ ಅಥವಾ ಆದಾಯ ಗಳಿಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ಹಿಂದುಳಿದಿದೆ. ಅಷ್ಟೇ ಅಲ್ಲ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತೆ ಬೀಚ್‌ಗಳಿದ್ದು, ಅಭಿವೃದ್ಧಿ ಕಡೆಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೇ ಶೈಕ್ಷಣಿಕವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದ್ದು, ಸಾಕಷ್ಟು ಪ್ರತಿಷ್ಠಿತ ಸಂಸ್ಥೆಗಳಿವೆ. ವರ್ಷಕ್ಕೆ ಎಂಟರಿಂದ ಹತ್ತು ಸಾವಿರ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದು, ಇವೇ ನಗರಗಳಲ್ಲಿ ಇವರಿಗೆ ಇನ್ನೂ ಹೆಚ್ಚಿನ ಉದ್ಯೋಗ ದೊರೆಯುವಂತೆ ಮಾಡಲು ಸರಕಾರ ಇತ್ತೀಚೆಗೆ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಾರ್ಯಗತವಾಗಿದೆ ಎಂಬುವುದು ಸಂತೋಷದ ಸಂಗತಿ. ಆದರೆ, ಈ ಕೆಲಸ ಕೆಲವು ದಶಕಗಳ ಮುಂಚೆಯೇ ಆಗಿದ್ದರೆ ಇಷ್ಟೊತ್ತಿಗೆ ಇಲ್ಲಿಯ ಜನರು ಬೆಂಗಳೂರಿಗೆ ವಲಸೆ ಬರುವುದು ಬಹುಶಃ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿತ್ತು.
ಹುಬ್ಬಳ್ಳಿ - ಧಾರವಾಡ: ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಅವಳಿ ನಗರಗಳು. ನೈಋತ್ಯ ರೈಲ್ವೆಯ ಪ್ರಧಾನ ಕಚೇರಿ ಇಲ್ಲಿದೆ. ಕೃಷಿ ಆಧಾರಿತ ವ್ಯಾಪಾರ, ಲಾಜಿಸ್ಟಿಕ್ಸ್ ಹಾಗೂ ಜವಳಿ ಸೇರಿ ಪ್ರಮುಖ ವ್ಯಾಪಾರ ಕೇಂದ್ರವೂ ಹೌದು. ಈ ನಗರವನ್ನು ಚೋಟಾ ಮುಂಬೈ ಅಂತಲೂ ಖ್ಯಾತಿ ಗಳಿಸಿದೆ.
ಬೆಳಗಾವಿ ಮತ್ತು ಕಲಬುರಗಿ: ಬೆಳಗಾವಿಯು ಗಡಿಭಾಗದ ಪ್ರಮುಖ ವಾಣಿಜ್ಯ ಕೇಂದ್ರ. ಜಲವಿದ್ಯುತ್ ಉಪಕರಣಗಳು ಮತ್ತು ಕೃಷಿ ಯಂತ್ರೋಪಕರಣ ಸೇರಿ ಹಲವು ಕಾರಣಕ್ಕೆ ಹೆಸರಾಗಿದೆ. ಇನ್ನು ಕಲಬುರಗಿ ಉತ್ತರ ಕರ್ನಾಟಕದ ಪ್ರಮುಖ ಸಿಮೆಂಟ್ ಉತ್ಪಾದನಾ ಹಬ್ ಆಗಿ ಅಭಿವೃದ್ಧಿ ಆಗುತ್ತಿದೆ. ಆದರೆ, ಇನ್ನಷ್ಟು ಗಮನ ಹರಿಸಿ ಈ ನಗರಗಳನ್ನು ಅಭಿವೃದ್ಧಿಗೊಳಿಸಿದರೆ ಜನರ ವಲಸೆಯನ್ನು ಸುಲುಭವಾಗಿ ತಡೆಗಟ್ಟಬಹುದು.
ಅಭಿವೃದ್ಧಿ ಹಂತದಲ್ಲಿರುವ ಇನ್ನಿತರ ಪ್ರಮುಖ ನಗರಗಳು
ಇನ್ನು ಈ ನಗರಗಳೊಂದಿಗೆ ಹೊಸಪೇಟೆ, ಬಳ್ಳಾರಿ, ತುಮಕೂರು, ಶಿವಮೊಗ್ಗ, ಕಾರವಾರ, ಉಡುಪಿ, ದಾವಣಗೆರೆ, ರಾಯಚೂರು ಹಾಗೂ ವಿಜಯಪುರ ಸೇರಿದಂತೆ ಹಲವು ಪ್ರದೇಶಗಳು ಅಭಿವೃದ್ಧಿಯ ಹಂತದಲ್ಲಿವೆ.
2,3ನೇ ಹಂತದ ನಗರಗಳ ಅಭಿವೃದ್ಧಿಗೆ ಕರ್ನಾಟಕಕ್ಕೆ ಬೇಕಿನ್ನೂ ಟೈಮ್!
ತಮಿಳುನಾಡಿನಲ್ಲಿ ಚೆನ್ನೈನ ಮೇಲಿನ ಒತ್ತಡ ಕಡಿಮೆಯಾಗುವಂತೆ ಮಾಡಿದಂತೆ, ನಮ್ಮಲ್ಲಿ ಬೆಂಗಳೂರಿನ ಮೇಲಿನ ಪ್ರೆಷರ್ ಕಡಿಮೆ ಮಾಡಲು ಇನ್ನೂ ಹಲವು ದಶಕಗಳು ಬೇಕೆ. ಈಗೀಗ ಸರ್ಕಾರಗಳು ಉತ್ತರ ಕರ್ನಾಟಕ ಹಾಗೂ ಕರಾವಳಿ ಅಭಿವೃದ್ಧಿ ಕಡೆಗೆ ಸ್ವಲ್ಪ ಸ್ವಲ್ಪವೇ ಗಮನ ಹರಿಸುತ್ತಿದ್ದು, ಇನ್ನು ಹಲವು ವರ್ಷಗಳ ನಂತರವಾದರೂ ಪರಿಸ್ಥಿತಿ ಬದಲಾಗಬಹುದೆಂಬ ನಿರೀಕ್ಷೆ ಇದೆ. ಬ್ರಿಟೀಷರ ಕಾಲದಿಂದಲೂ ಮದ್ರಾಸ್ ಪ್ರೆಸಿಡೆನ್ಸಿಗೆ ಹೆಚ್ಚಿನ ಪ್ರಾಶಸ್ತ್ಯತೆ ಸಿಕ್ಕಿದ್ದು, ಕರ್ನಾಟಕದ ಮೊದಲಿಂದಲೂ ತುಸು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಅದೇ ಚಾಳಿ ಇಂದಿಗೂ ಮುಂದುವರಿದಿರುವುದನ್ನು ಗಮನಿಸಬಹುದು.
'ಮೈಸೂರು ಸಂಸ್ಥಾನವು ಅಭಿವೃದ್ಧಿ ಆಯಿತಾದರೂ, ಮದ್ರಾಸ್ ಪ್ರೆಸಿಡೆನ್ಸಿಗೆ ಸಿಕ್ಕಷ್ಟು ಅವಕಾಶಗಳು ನಮಗೆ ಸಿಗಲಿಲ್ಲ. ಆದರೆ ತಮಿಳುನಾಡಿನಲ್ಲಿ ಕಳೆದ ಕೆಲವು ದಶಕಗಳಿಂದ ಹಲವು ಪ್ರಮುಖ ನಗರಗಳನ್ನು ಅಭಿವೃದ್ಧಿಪಡಿಸಿಕೊಂಡು ಬರಲಾಗಿದೆ. ಆದರೆ ಇದು ಒಂದು ದಿನದ ಪ್ರಯತ್ನವಲ್ಲ. ಕರ್ನಾಟಕದಲ್ಲೂ ಈ ರೀತಿ ವಿವಿಧ ನಗರಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಾಧ್ಯವಿದೆ. ಆದರೆ, ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಬಿಡದಿಯಂತಹ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದರಿಂದ ಲಾಭವಿಲ್ಲ,' ಎನ್ನುವುದು ನಗರಾಭಿವೃದ್ಧಿ ತಜ್ಞ (Urban Expert) ಹಾಗೂ ಸಿವಿಕ್ ಇವಾಂಜೆಲಿಸ್ಟ್ (Civic Evangelist) ವಿ. ರವಿಚಂದ್ರನ್.
ಕರ್ನಾಟಕದ ಇನ್ನುಳಿದ ನಗರಗಳನ್ನು ಅಭಿವೃದ್ಧಿಪಡಿಸಲು ಈಗ ಪ್ರಾರಂಭಿಸಿದರೂ ಆ ಗುರಿ ತಲುಪಲು ಇನ್ನೂ ಹಲವು ದಶಕಗಳು ಹಿಡಿಯಬಹುದು. ಬಿಯಾಂಡ್ ಬೆಂಗಳೂರು ಎನ್ನುವುದು ಕೇವಲ ಘೋಷಣೆಯಾಗಿ ಉಳಿಯದೇ ಕಾರ್ಯರೂಪಕ್ಕೆ ಬರಬೇಕು. ಇದೀಗ ಮಂಗಳೂರು ನಗರದ ಬಂದರು ಅವಕಾಶದೊಂದಿಗೆ ಸರ್ಕಾರ ಈ ಭಾಗದ ಪ್ರವಾಸೋದ್ಯಮ ಹಾಗೂ ಇದರಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಕ್ಷೇತ್ರದ ಅಭಿವೃದ್ಧಿಗೆ ಕರ್ನಾಟಕ ಸರ್ಕಾರವು ಮುಂದಾಗಿರುವುದು ಭರವಸೆ ಮೂಡಿಸಿದೆ.
ಇದೇ ಮಾದರಿಯಲ್ಲಿ ಇನ್ನುಳಿದ ಕರ್ನಾಟಕದ ನಗರಗಳನ್ನು ಅಲ್ಲಿನ ಅವಕಾಶ ಹಾಗೂ ಸೇವೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಿದರೆ, ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಆಗಲಿದೆ ಎನ್ನುವ ರವಿಚಂದ್ರನ್ ಅವರು, ಆಯಾ ನಗರಗಳಲ್ಲೇ ಜನ ಕೆಲಸ ಹುಡುಕಿಕೊಳ್ಳುವ ಅವಕಾಶವನ್ನು ಸೃಷ್ಟಿಸಬೇಕು ಎಂದರು.
ಬೆಂಗಳೂರಿನ ಅರ್ಧ ಜನ ಇರುವಂಥ ಕರ್ನಾಟಕದ ಮತ್ತೊಂದು ನಗರ ಬೇಕು
ಸಾಮಾನ್ಯವಾಗಿ ಒಂದು ರಾಜ್ಯದ ರಾಜಧಾನಿ ಅಥವಾ ಅಭಿವೃದ್ಧಿ ಹೊಂದಿರುವ ನಗರದ ಅರ್ಧದಷ್ಟು ವಿಸ್ತೀರ್ಣವಾದ ಎರಡನೇ ನಗರ ಆ ರಾಜ್ಯದಲ್ಲಿ ಇರಬೇಕು. ಮೂರನೇ ನಗರವು ಆ ರಾಜ್ಯದ ಮೂರನೇ ಒಂದು ಭಾಗದಷ್ಟು ಇರಬೇಕು. ಅಲ್ಲದೆ ಬೆಂಗಳೂರಿನಲ್ಲಿ 1.4 ಕೋಟಿ ಜನಸಂಖ್ಯೆ ಇದೆ ಎಂದಾದರೆ, ಎರಡನೇ ನಗರದಲ್ಲಿ ಕನಿಷ್ಠ ಅದರ ಅರ್ಧಷ್ಟು ಜನರು ಇರಬೇಕು.
ಇದನ್ನು ಜಿಪ್ಸ್ ನಿಯಮ (Zipf's Law) ಎಂದು ಕರೆಯುತ್ತಾರೆ. ಆದರೆ, ಬೆಂಗಳೂರಲ್ಲ () ಕರ್ನಾಟಕದಲ್ಲಿಯೇ ಅತೀ ಹೆಚ್ಚು ಜನರಿರುವುದು ಮಾತ್ರವಲ್ಲ, ವರ್ಷ ವರ್ಷ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಕರ್ನಾಟಕದ ಇನ್ನುಳಿದ ನಗರಗಳಾದ ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ - ಧಾರವಾಡದಂತಹ ನಗರಗಳಲ್ಲಿ ಬೆಂಗಳೂರಿಗೆ ಹೋಲಿಸಿದಲ್ಲಿ, ಕೇವಲ ಶೇ 10ರಷ್ಟು ಜನಸಂಖ್ಯೆ ಮಾತ್ರ ಇದೆ, ಈ ಕಡೆ ಗಮನಿಸಬೇಕು ಎನ್ನುತ್ತಾರೆ ರವಿಚಂದ್ರನ್.
ವಲಸೆಯೂ ಪ್ರಮುಖ ಕಾರಣ
ವರ್ಷ ವರ್ಷವೂ ಹೆಚ್ಚುತ್ತಿರುವ ವಲಸೆ, ಹೆಚ್ಚುತ್ತಿರುವ ಜನಸಂಖ್ಯೆ ಅದರಿಂದ ಹೆಚ್ಚಾಗುತ್ತಿರುವ ಜನ ಸಂದಣೆ ಜೊತೆ ವಾಹನ ದಟ್ಟಣೆ ಇವೆಲ್ಲವಕ್ಕೂ ಏಕ ಕಾಲಕ್ಕೆ ಪರಿಹಾರ ಕಂಡು ಕೊಳ್ಳಲು ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ.
ಬೆಂಗಳೂರು VS ತಮಿಳುನಾಡು ಮಾದರಿ: ಪ್ರಮುಖ ಮುಖ್ಯಾಂಶಗಳು
ತಮಿಳುನಾಡಿನ ವಿಕೇಂದ್ರೀಕೃತ ಮಾದರಿ: ತಮಿಳುನಾಡು ಚೆನ್ನೈ ಒಂದಕ್ಕೇ ಸೀಮಿತವಾಗದೆ ಕೊಯಂಬತ್ತೂರು, ಹೊಸೂರು, ತಿರುಪ್ಪೂರು, ಮಧುರೈನಂತಹ ಹಲವು ನಗರಗಳನ್ನು ಅಭಿವೃದ್ಧಿಪಡಿಸಿದೆ.
ಪರಿಹಾರ: 'ಬಿಯಾಂಡ್ ಬೆಂಗಳೂರು' ಕೇವಲ ಘೋಷಣೆಯಾಗದೇ, 2ನೇ ಹಂತದ ನಗರಗಳಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಕೆಲಸ ಆಗಬೇಕಿದೆ.
ಜಿಪ್ಸ್ ನಿಯಮ (Zipf's Law) ಮತ್ತು ಕರ್ನಾಟಕದ ಅಸಮತೋಲನ
| ಜಿಪ್ಸ್ ನಿಯಮದ ಸೂತ್ರ | ಕರ್ನಾಟಕದ ಸದ್ಯದ ವಾಸ್ತವ ಸ್ಥಿತಿ |
|---|
1ನೇ ಪ್ರಮುಖ ನಗರ: ಶೇ 100ರಷ್ಟು ಜನಸಂಖ್ಯೆ
ಬೆಂಗಳೂರು: 1.4 ಕೋಟಿ ಜನಸಂಖ್ಯೆ
2ನೇ ಹಂತದ ನಗರ: 1ನೇ ನಗರದ ಕನಿಷ್ಠ 50%
ಮೈಸೂರು/ಮಂಗಳೂರು/ಹುಬ್ಬಳ್ಳಿ: ಬೆಂಗಳೂರಿನ ಕೇವಲ 10% ಮಾತ್ರ!
3ನೇ ಹಂತದ ನಗರ: 1ನೇ ನಗರದ 33%
ಇತರ ನಗರಗಳು: ಕಡಿಮೆ ಜನಸಂಖ್ಯೆ ಹಾಗೂ ಮೂಲಸೌಕರ್ಯ
ಸವಾಲು: 2ನೇ ಹಂತದ ನಗರಗಳಲ್ಲಿ ಸೂಕ್ತ ಬೆಳವಣಿಗೆ ಇಲ್ಲದಿರುವುದರಿಂದ ದಕ್ಷಿಣ, ಉತ್ತರ ಭಾರತ ಹಾಗೂ ವಿದೇಶಗಳಿಂದ ಲಕ್ಷಾಂತರ ಜನರು ಬೆಂಗಳೂರಿಗೆ ವಲಸೆ ಬರುತ್ತಿದ್ದು, ಮಹಾನಗರದ ಮೇಲೆ ಒತ್ತಡ ಹೆಚ್ಚಾಗಿದೆ.


Click it and Unblock the Notifications
