Terror Attack: ಉಗ್ರರ ದಾಳಿಯಲ್ಲಿ ಶಿವಮೊಗ್ಗದ ಉದ್ಯಮಿ ಸಾವು; ಕಾಶ್ಮೀರದತ್ತ ಕರ್ನಾಟಕ ಅಧಿಕಾರಿಗಳ ತಂಡ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಪ್ರವಾಸಿಗರ ಗುಂಪಿನ ಮೇಲೆ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಯಲ್ಲಿ ಸುಮಾರು 27 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಹಲವು ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಇನ್ನೂ ನಿಖರವಾಗಿ ತಿಳಿದುಬರಬೇಕಿದೆ. ಈ ಪೈಶಾಚಿಕ ದಾಳಿಯಲ್ಲಿ ಶಿವಮೊಗ್ಗ ಜಿಲ್ಲೆಯ ಉದ್ಯಮಿ ಮಂಜುನಾಥ್ ಎನ್ನುವವರು ಮೃತಪಟ್ಟಿದ್ದಾರೆ.
ದಾಳಿಯ ವೇಳೆ ಕರ್ನಾಟಕದ ಎಷ್ಟು ಮಂದಿ ಇದ್ದರು ಎನ್ನುವ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಓರ್ವ ಕನ್ನಡಿಗ ಮೃತಪಟ್ಟಿರುವ ಸುದ್ದಿ ತಿಳಿದ ಬಳಿಕ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ವಿಶೇಷ ಸಭೆ ನಡೆಸಿದ್ದು ಕನ್ನಡಿಗರ ನೆರವಿಗೆ ವಿಶೇಷ ತಂಡವನ್ನು ಕಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಾಹಿತಿ
ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, " ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿದ ತಕ್ಷಣ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡು, ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದೇನೆ. ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಅಧಿಕಾರಿಗಳ ಒಂದು ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂತೆ ದೆಹಲಿಯ ರೆಸಿಡೆಂಟ್ ಕಮಿಷನರ್ ಅವರಿಗೆ ಸೂಚನೆ ಕೂಡ ನೀಡಿದ್ದೇನೆ. ಇಡೀ ಘಟನೆಯ ಮೇಲೆ ನಾವು ತೀವ್ರನಿಗಾ ವಹಿಸಿದ್ದು, ದಾಳಿಯ ಸಂತ್ರಸ್ತರಾಗಿರುವ ನಮ್ಮವರ ನೆರವಿಗೆ ನಿಂತಿದ್ದೇವೆ. ಎಂದು ಹೇಳಿದ್ದಾರೆ.
ಸಚಿವ ವಿ ಸೋಮಣ್ಣ ಖಂಡನೆ
ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದಾರೆ. "ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ದೇಶದ ನಾಗರಿಕರ ಮೇಲೆ ನಡೆದ ಈ ದಾಳಿ ದುಃಖಕರ ಹಾಗೂ ಅಮಾನವೀಯವಾದುದು." ಎಂದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಉಗ್ರರನ್ನು ಮಟ್ಟಹಾಕಲು ಅಗತ್ಯ ಕ್ರಮಕೈಗೊಂಡಿದ್ದು, ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ದೇಶದ ಅಮಾಯಕ ಪ್ರಜೆಗಳ ಸಾವಿಗೆ ತಕ್ಕ ಪ್ರತೀಕಾರ ನೀಡಲು ಸರ್ಕಾರ ಹಾಗೂ ಸೇನೆ ಸನ್ನದ್ಧವಾಗಿದೆ.
ಈ ಭಯೋತ್ಪಾದಕ ದಾಳಿಯಲ್ಲಿ ಮೃತರಾಗಿರುವ ಕರ್ನಾಟಕದ ಮಂಜುನಾಥ್ ರಾವ್ ಅವರಿಗೆ ಸಂತಾಪ ಸೂಚಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತರಾದ ಮಂಜುನಾಥ್ ಅವರ ಪಾರ್ಥೀವ ಶರೀರವನ್ನು ಅವರ ತವರಿಗೆ ರವಾನಿಸುವ ಕಾರ್ಯ ಮತ್ತು ಗಾಯಾಳುಗಳ ಜೊತೆಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.












Click it and Unblock the Notifications