Nipah virus: ನಿಪಾ ವೈರಸ್ ಎಂಟ್ರಿ ತಡೆಗೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ತಪಾಸಣೆ, ಕಟ್ಟೆಚ್ಚರ- ಯಾವ ಜಿಲ್ಲೆಗಳು ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 13: ಕೇರಳದಲ್ಲಿ ನಿಪಾ ವೈರಸ್ ಸೋಂಕು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೇರಳ ಹಾಗೂ ಕರ್ನಾಟಕದ ಗಡಿಭಾಗದ ಪ್ರದೇಶಗಳು ಮತ್ತು ಪ್ರಯಾಣಿಸುವ ಜನರನ್ನು ತಪಾಸಣೆ ಮಾಡಲು ಕರ್ನಾಟಕ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ನಿಪಾ ವೈರಸ್ ಸೋಂಕಿನಿಂದ ಕಲ್ಲಿಕೋಟೆಯಲ್ಲಿ ಇಬ್ಬರು ಸಾವನ್ನಪ್ಪಿದ ನಂತರ ಕರ್ನಾಟಕ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇರಳದ ಗಡಿಯಲ್ಲಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಕರ್ನಾಟಕ ಆರೋಗ್ಯ ಇಲಾಖೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದೆ ಎಂದು ತಿಳಿದುಬಂದಿದೆ. ಈ ಜಿಲ್ಲೆಗಳಲ್ಲಿ ಕೊಡಗು, ಚಾಮರಾಜನಗರ, ಮೈಸೂರು ಮತ್ತು ದಕ್ಷಿಣ ಕನ್ನಡ ಸೇರಿವೆ.

ಈ ವಿಚಾರವಾಗಿ ಮಾತನಾಡಿರುವ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ ರಂದೀಪ್ ಅವರು, 'ನಿಪಾ ವೈರಸ್‌ನ ಲಕ್ಷಣಗಳೊಂದಿಗೆ ವರದಿಯಾಗಿರುವ ಯಾವುದೇ ಪ್ರಕರಣಗಳನ್ನು ತ್ವರಿತವಾಗಿ ಪರಿಶೀಲಿಸಲಾಗುವುದು. ಈ ಕುರಿತು ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್‌ಸಿ) ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಆದೇಶಿಸಲಾಗಿದೆ. ಕ್ರಿಯಾ ಯೋಜನೆ ರೂಪಿಸಿ ಸಲಹೆ ಸೂಚನೆಯನ್ನೂ ನೀಡಲಾಗುವುದು' ಎಂದು ತಿಳಿಸಿದ್ದಾರೆ.
ಕ್ರಿಯಾ ಯೋಜನೆ ಕೇವಲ ಗಡಿ ಜಿಲ್ಲೆಗಳಿಗೆ ಸೀಮಿತವಾಗಿರದೆ, ಇಡೀ ರಾಜ್ಯಕ್ಕೆ ವಿಸ್ತರಿಸಲಿದೆ. ವಿಶೇಷವಾಗಿ ಸಾರಿಗೆ ಕೇಂದ್ರಗಳಲ್ಲಿ ಇದು ಹೆಚ್ಚು ಕ್ರಿಯಾಶೀಲವಾಗಿರಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2021ರಲ್ಲಿ ಕಲ್ಲಿಕೋಟೆಯಲ್ಲಿ ಕೊನೆಯ ಬಾರಿಗೆ ನಿಪಾ ವೈರಸ್ ಕಾಣಿಸಿಕೊಂಡಿತ್ತು. ಆಗ ಮೈಸೂರು, ಮಂಗಳೂರು, ಚಾಮರಾಜನಗರ ಮತ್ತು ಕೊಡಗಿಗೆ ರಾಜ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆ ಸಮಯದಲ್ಲಿ ರಾಜ್ಯ ಆರೋಗ್ಯ ಇಲಾಖೆ ಕೆಲ ಪ್ರಕರಣಗಳ ಬಗ್ಗೆ ಶಂಕೆ ವ್ಯಕ್ತಪಡಿಸಿತ್ತು. ಆದರೆ, ಯಾವುದೇ ಪ್ರಕರಣ ಪೊಸಿಟಿವ್ ಆಗಿರಲಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಿಪಾ ವೈರಸ್ ಆಗ್ನೇಯ ಏಷ್ಯಾದಲ್ಲಿ ಕಂಡುಬಂದಿದೆ. ಚಳಿಗಾಲ ಹಾಗೂ ಮಳೆಗಾಲದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಇದು ಬಾವಲಿಗಳ ಸಂತಾನೋತ್ಪತ್ತಿಯ ಕಾಲಘಟ್ಟದಲ್ಲಿ ಉತ್ಪತ್ತಿಯಾಗುತ್ತದೆ.
ಕೇರಳದಲ್ಲಿ ಸಾವು
ಕೇರಳದಲ್ಲಿ ಕಾಣಿಸಿಕೊಂಡ ನಿಪಾ ವೈರಸ್ ಸೋಂಕಿಗೆ ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಕಲ್ಲಿಕೋಟೆಯ ಮಾರುತೋಂಕರ ಪಂಚಾಯತ್‌ನ 47 ವರ್ಷದ ವ್ಯಕ್ತಿ ಮತ್ತು ವಡಕರದ ಆಯಂಚೇರಿಯ 40 ವರ್ಷದ ವ್ಯಕ್ತಿ ನಿಪಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇಬ್ಬರೂ ಪರಸ್ಪರ ಯಾವುದೇ ಸಂಪರ್ಕ ಹೊಂದಿಲ್ಲ. ಇವೆರಡು ಪ್ರತ್ಯೇಕ ಘಟನೆಗಳೆಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಇವರಿಬ್ಬರು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಗೊತ್ತಾಗಿದೆ. ಮೊದಲನೆಯವರು ಆಗಸ್ಟ್ 30 ರಂದು ಮತ್ತು ನಂತರದವರು ಸೆಪ್ಟೆಂಬರ್ 11 ರಂದು ಸಾವನ್ನಪ್ಪಿದ್ದಾರೆ.
ಉತ್ತಮ ಆರೋಗ್ಯ ವ್ಯವಸ್ಥೆಯ ಹೊರತಾಗಿಯೂ, ನಿಪಾ ವೈರಸ್ ತಜ್ಞರನ್ನು ಗೊಂದಲಗೊಳಿಸುತ್ತಲೇ ಇದೆ. ಇದು ಬಾವುಲಿಗಳಿಂದ ಹರಡುತ್ತದೆ ಎಂದು ಗೊತ್ತಾಗಿದ್ದರೂ, ಪ್ರಾಯೋಗಿಕವಾಗಿ ಇದು ಮನುಷ್ಯರಿಗೆ ಹೇಗೆ ಸಂಪರ್ಕಕ್ಕೆ ಬರುತ್ತದೆಂದು ತಿಳಿದುಬಂದಿಲ್ಲ.












Click it and Unblock the Notifications