ಆಂಧ್ರಕ್ಕೆ ಕರ್ನಾಟಕದ ನಾಲ್ಕು ಆನೆಗಳು ಗಿಫ್ಟ್, ಯಾವ ಕಾರಣಕ್ಕೆ ಗೊತ್ತಾ?
ಕರ್ನಾಟಕದ ಗಜಪಡೆ ಅಂದ್ರೆ ಎಲ್ಲರೂ ಹುಬ್ಬೇರಿಸಿ ನೋಡ್ತಾರೆ. ದಸರಾ ಜಂಬೂಸವಾರಿ ಹೊರುವ ಆನೆಗಳಂತೂ ಒಂದು ರೀತಿಯಲ್ಲಿ ಸೆಲೆಬ್ರಿಟಿಗಳೇ ಎನ್ನಬಹುದು. ಹಾಗಾಗಿ ನಮ್ಮ ಕರ್ನಾಟಕದ ಆನೆಗಳಿಗೆ ಎಲ್ಲೆಡೆಯೂ ಭಾರಿ ಡಿಮ್ಯಾಂಡ್ ಇದೆ. ಸದ್ಯ ಪಕ್ಕದ ಆಂಧ್ರಪ್ರದೇಶದಿಂದಲೂ ಕರ್ನಾಟಕದ ಆನೆಗಳಿಗೆ ಬೇಡಿಕೆ ಬಂದಿದ್ದು, ನಾಲ್ಕು ಆನೆಗಳನ್ನು ಉಡುಗೊರೆಯಾಗಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಆಂಧ್ರಪ್ರದೇಶದಲ್ಲಿ ದೊಡ್ಡ ತಲೆನೋವಾಗಿರುವ ಮಾನವ ಮತ್ತು ಆನೆಗಳ ನಡುವಿನ ಸಂಘರ್ಷವನ್ನು ತಡೆಯುವ ಉದ್ದೇಶದಿಂದ ನಮ್ಮಲ್ಲಿರುವ ನಾಲ್ಕು ಪಳಗಿರುವ ಆನೆಗಳನ್ನು ಕರ್ನಾಟಕ ಉಡುಗೊರೆಯಾಗಿ ನೀಡಲಿದೆ ಎಂದು ವರದಿಯಾಗಿದೆ. ಇವು ಸದ್ಯ ಈಗಾಗಲೇ ಮುಂಚೂಣಿಯಲ್ಲಿರುವ ಆನೆಗಳಲ್ಲ ಹಾಗೂ ಭವಿಷ್ಯದಲ್ಲಿ ಮೈಸೂರಿನ ದಸರಾ ಕರ್ತವ್ಯಕ್ಕೂ ನಿಯೋಜಿಸುವುದಿಲ್ಲ ಎಂದು ಹೇಳಲಾಗಿದೆ.

ಈ ಸಂಬಂಧ ನಿನ್ನೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಅರಣ್ಯ ಇಲಾಖೆಗಳ ಸಮನ್ವಯ ಸಮಿತಿ ಸಭೆ ನಡೆಯಿತು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಸಭೆಯಲ್ಲಿ ಭಾಗಿಯಾಗಿ ಆನೆಗಳನ್ನು ಉಡುಗೊರೆ ನೀಡುವ ಸಂಬಂಧ ಚರ್ಚೆ ನಡೆಸಿದ್ದಾರೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೊಂದಿಗೆ ಚರ್ಚಿಸಿರುವ ಖಂಡ್ರೆ, ಮಾನವೀಯ ನೆಲೆಯಲ್ಲಿ ಕರ್ನಾಟಕವು ನಾಲ್ಕು ಪಳಗಿಸಿದ ಆನೆಗಳನ್ನು ಆಂಧ್ರಕ್ಕೆ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ದಸರಾ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳಿಸಿಕೊಡುವುದಿಲ್ಲ. ಏಕೆಂದರೆ ದಸರಾ ಉತ್ಸವ ನಡೆಸಿಕೊಡುವ ಆನೆಗಳೊಂದಿಗೆ ರಾಜ್ಯದ ಜನ ಭಾವನಾತ್ಮಕವಾಗಿ ಇದ್ದಾರೆ. ಹಾಗಾಗಿ ದಸರಾದಲ್ಲಿ ಇಲ್ಲಿವರೆಗೆ ಭಾಗವಹಿಸಿರುವ, ಮುಂದೆ ದಸರಾಗಾಗಿ ಸಜ್ಜಾಗುತ್ತಿರುವ ಯಾವುದೇ ಆನೆಗಳನ್ನು ಎಲ್ಲಿಗೂ ಕಳಿಸಿಕೊಡುವುದಿಲ್ಲ ಎಂದು ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಿಂದ ನಾಲ್ಕು ಆನೆಗಳನ್ನು ಕಳುಹಿಸಿಕೊಡುವ ಜೊತೆಗೆ ಮಾವುತರು ಮತ್ತು ಪಶುವೈದ್ಯರಿಗೆ ಆನೆ ಕಾರ್ಯಾಚರಣೆಗಾಗಿ ಜಂಬೋಗಳನ್ನು ಹೇಗೆ ಸೆರೆಹಿಡಿಯುವುದು, ಪಳಗಿಸುವುದು ಮತ್ತು ಬಳಸುವುದು ಎಂಬುದರ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ತರಬೇತಿ ನೀಡಲಿದ್ದಾರೆ ಎಂದೂ ಖಂಡ್ರೆ ಹೇಳಿದ್ದಾರೆ.
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಈ ಹಿಂದೆ ಬೆಂಗಳೂರಿಗೆ ಭೇಟಿ ನೀಡಿದಾಗ, ತಮ್ಮ ರಾಜ್ಯದ ಮಾನವ-ಆನೆ ಸಂಘರ್ಷ ತಡೆಯಲು ತರಬೇತಿ ಪಡೆದಿರುವ ಆನೆಗಳನ್ನು ಒದಗಿಸುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ, ರಾಜ್ಯದಲ್ಲಿ ರಕ್ಷಣಾ ಕಾರ್ಯಾಚರಣೆಗೆ ತರಬೇತಿ ಪಡೆದ ಆನೆಗಳ ಕೊರತೆ ಇತ್ತು. ಹಾಗಾಗಿ ಆಂಧ್ರ ಸರ್ಕಾರದ ಈ ಮನವಿಗೆ ಕರ್ನಾಟಕದ ವನ್ಯಜೀವಿ ಕಾರ್ಯಕರ್ತರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಈಗ ಆನೆಗಳನ್ನು ಕೊಡಲು ಸರ್ಕಾರ ಸಮ್ಮತಿಸಿದೆ.

ಈ ಬಗ್ಗೆ ಡಿಸಿಎಂ ಪವನ್ ಕಲ್ಯಾಣ್ ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ವಿಜಯವಾಡದಲ್ಲಿ ನಡೆದ ಸಮನ್ವಯ ಸಮಿತಿ ಸಭೆ ಅತ್ಯಂತ ಯಶಸ್ವಿಯಾಗಿದೆ. ಮಾನವ ವನ್ಯಜೀವಿ ಸಂಘರ್ಷ ನಿಗ್ರಹಿಸಲು ನಾಲ್ಕು ಆನೆಗಳನ್ನು ಕೊಡಲು ಕರ್ನಾಟಕ ಸಮ್ಮತಿಸಿದೆ, ಇದಕ್ಕಾಗಿ ನಾನು ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಮುಂಬರುವ ದಿನಗಳಲ್ಲಿ ಈ ಎರಡು ರಾಜ್ಯಗಳ ಸಹಕಾರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications