ಡಿ.ಕೆ.ಶಿವಕುಮಾರ್‌ಗೆ ಬಡ್ಡಿ ಸಮೇತ 17 ಲಕ್ಷ ರೂಪಾಯಿ ಹಿಂದಿರುಗಿಸಲು...
ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಡಿಸಿಎಂಗೆ ಸಂಕಷ್ಟ ಎದುರಾಗಿದೆ. ಹಾಗಾದರೆ ಡಿಸಿಎಂ ಡಿಕೆಶಿ ಈಗ ಎದುರಿಸುತ್ತಿರುವ ಸಮಸ್ಯೆ ಏನು? ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.
ಅಷ್ಟಕ್ಕೂ ಫ್ಲ್ಯಾಟ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರೊಬ್ಬರ ಮುಂಗಡ ಮೊತ್ತ ಹಿಂದಿರುಗಿಸುವಾಗ ಕಡಿತ ಮಾಡಿದ್ದ, 17 ಲಕ್ಷ ರೂಪಾಯಿ ಹಣ ಬಡ್ಡಿ ಸಮೇತ ವಾಪಸ್ ಕೊಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಈ ಕುರಿತಾಗಿ ಎನ್‌ಟಿವೈ ಬಡಾವಣೆ ರಾಘವ ನಗರದ ನಿವಾಸಿ ಜೆ. ರಾಘವೇಂದ್ರ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ.

ದೂರಿನ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯೆ ಸುಮಾ ಅನಿಲ್ ಕುಮಾರ್ ಅವರಿದ್ದ ಪೀಠ, ಇದೇ 9ಕ್ಕೆ ಈ ಬಗ್ಗೆ ಆದೇಶವನ್ನು ನೀಡಿದೆ. ಈ ಮೂಲಕ 17 ಲಕ್ಷ ರೂಪಾಯಿ ಹಣ ಬಡ್ಡಿ ಸಮೇತ ವಾಪಸ್ ಕೊಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಆದೇಶ ನೀಡಿದೆ ಎನ್ನಲಾಗಿದೆ. ಹಾಗಾದ್ರೆ ಏನಿದು ಪ್ರಕರಣ? ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಹೇಳಿದ್ದೇನು?
ಗ್ರಾಹಕರ ಆಯೋಗದ ಆದೇಶ ಏನು?
ಅಂದಹಾಗೆ ಈಗ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಹೇಳಿದಂತೆ, 'ಮುಂಗಡ ಹಣದಲ್ಲಿ ಕಡಿತ ಮಾಡಿದ 17 ಲಕ್ಷ ಹಣವನ್ನು ವಾರ್ಷಿಕ ಶೇ 10ರ ಬಡ್ಡಿ ದರದಲ್ಲಿ ಹಿಂದಿರುಗಿಸಬೇಕು. ವ್ಯಾಜ್ಯ ವೆಚ್ಚವಾಗಿ 10 ಸಾವಿರ ಪರಿಹಾರ ಪಾವತಿ ಮಾಡಬೇಕು. ಈ ಆದೇಶವನ್ನು ಮುಂದಿನ 60 ದಿನದ ಒಳಗೆ ಪಾಲಿಸಬೇಕು. ಆದೇಶ ಪಾಲನೆ ಮಾಡುವಲ್ಲಿ ವಿಫಲವಾದಲ್ಲಿ ಒಪ್ಪಂದ ಮಾಡಿಕೊಂಡ ದಿನಕ್ಕೆ ಅನುಗುಣವಾಗಿ ಶೇ 12 ರಷ್ಟು ಬಡ್ಡಿ ಸೇರಿಸಿ ಕೊಡಬೇಕು' ಅಂತಾ ಪೀಠ ಡಿಸಿಎಂ ಡಿ.ಕೆ. ಶಿವಕುಮಾರ್, ಡಿ.ಕೆ. ಮಂಜುಳಾ, ಡಿ.ಕೆ.ಸುರೇಶ್, ಡಿ.ಕೆ.ಕೆಂಪೇಗೌಡ ಹಾಗೂ ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನಿರ್ದೇಶನ ನೀಡಿದೆ.

ಈ ಪ್ರಕರಣದ ಹಿನ್ನೆಲೆ ಏನು?
ಅಂದಹಾಗೆ ಡಿಸಿಎಂ ಡಿ.ಕೆ. ಶಿವಕುಮಾರ್, ಡಿ.ಕೆ. ಮಂಜುಳಾ, ಡಿ.ಕೆ. ಸುರೇಶ್ ಮತ್ತು ಡಿ.ಕೆ. ಕೆಂಪೇಗೌಡ ಅವ್ರು ಸೇರಿದಂತೆ ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಜತೆ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದ "ಡಿವಿನಿಟಿ ಪ್ರಾಜೆಕ್ಟ್"ನ ಫ್ಲ್ಯಾಟ್ ಒಂದನ್ನ ಒಟ್ಟು 86,06,800 ಮೊತ್ತಕ್ಕೆ ಖರೀದಿಸಲು ರಾಘವೇಂದ್ರ ಅವರು 2017ರ ಏಪ್ರಿಲ್ 10ರಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಅಲ್ಲದೆ ಮುಂಗಡವಾಗಿ 30,81,352 ರೂಪಾಯಿ ದುಡ್ಡನ್ನ ಪಾವತಿ ಮಾಡಿದ್ದರು. ಆದರೆ ಕೊರೊನಾ ಕಾರಣ ನೀಡಿ 56,25,458 ಮೊತ್ತವನ್ನ ನಿಗದಿತ ಸಮಯಕ್ಕೆ ಪಾವತಿ ಮಾಡಿರಲಿಲ್ಲ ಎಂದು ಆರೋಪಿಸಲಾಗಿತ್ತು.
ಆದರೆ ರಾಘವೇಂದ್ರ ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದ ಫ್ಲ್ಯಾಟ್ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರು ಎನ್ನಲಾಗಿತ್ತು. ನಂತರ, ರಾಘವೇಂದ್ರ ಅವರಿಗೆ ಮುಂಗಡ ಹಣದಲ್ಲಿ 17,77,422 ಮೊತ್ತ ಕಡಿತಗೊಳಿಸಿ ಬಾಕಿ 13,03,930 ಮೊತ್ತದ ಹಣವನ್ನು ಚೆಕ್ ಮೂಲಕ ಮರಳಿಸಿದ್ದರಂತೆ.
ಹೀಗಾಗಿ 'ಡಿ.ಕೆ.ಶಿವಕುಮಾರ್ ಮತ್ತು ಎದುರುದಾರರಾದ ಅವರ ಕುಟುಂಬದ ಸದಸ್ಯರು ನನ್ನ ಜೊತೆ ಒಪ್ಪಂದ ಮಾಡಿಕೊಂಡು ಫ್ಲ್ಯಾಟ್ ಅನ್ನು ಮತ್ತೊಬ್ಬರಿಗೆ ಲಾಭಕ್ಕೆ ಮಾರಿಕೊಂಡಿದ್ದಾರೆ. ಆದರೂ, ನಮ್ಮಿಂದ 17,77,422 ಮೊತ್ತವನ್ನು ಕಡಿತಗೊಳಿಸಿದ್ದಾರೆ. ಇದು ದೊಡ್ಡಮಟ್ಟದ ಲಾಭ ಗಳಿಸುವ ಮತ್ತು ಖರೀದಿದಾರರನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕ್ರಿಯೆಯಾಗಿದೆ' ಎಂದು ರಾಘವೇಂದ್ರ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಇದೀಗ ಆ ಬಗ್ಗೆ ಆದೇಶ ಪ್ರಕಟವಾಗಿದೆ.












Click it and Unblock the Notifications