ಮುಂದಿನ ಅಟಾರ್ನಿ ಜನರಲ್ ಆಗಿ ಕೆಕೆ ವೇಣುಗೋಪಾಲ್
ನವದೆಹಲಿ, ಜೂನ್ 27: ಹಿರಿಯ ನ್ಯಾಯವಾದಿ ಮತ್ತು ಸಂವಿಧಾನ ತಜ್ಞ ಕೆಕೆ ವೇಣುಗೋಪಾಲ್ ಮುಂದಿನ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದಾರೆ.
ಹಾಲಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ತಮ್ಮ ಅವಧಿ ಮುಂದುವರಿಸಲು ನಿರಾಕರಿಸಿರುವುದರಿಂದ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳನ್ನು ಕೇಂದ್ರ ಸರಕಾರ ಹುಡುಕಾಟ ನಡೆಸುತ್ತಿತ್ತು. ಇದೀಗ ಅವರ ಸ್ಥಾನಕ್ಕೆ ಕೆಕೆ ವೇಣುಗೋಪಾಲ್ ನೇಮಿಸಲಾಗಿದೆ.

ಹಲವು ಸುತ್ತಿನ ಮಾತುಕತೆಗಳ ನಂತರ ಹಿರಿಯರಾದ 86 ವರ್ಷ ವಯಸ್ಸಿನ ವೇಣುಗೋಪಾಲ್ ರ ನೇಮಕಕ್ಕೆ ಸರಕಾರ ಚಿಂತನೆ ನಡೆಸಿತ್ತು. ವಿವಿಧ ವಿಷಯಗಳ ಮೇಲೆ ವೇಣುಗೋಪಾಲ್ ರಿಗೆ ಇರುವ ಜ್ಞಾನವನ್ನು ಗಮನಕ್ಕೆ ತೆಗೆದುಕೊಂಡು ಅವರ ನೇಮಕಕ್ಕೆ ಕಾನೂನು ಇಲಾಖೆ ಮುಂದಾಗಿತ್ತು. ಇದೀಗ ನೇಮಕವನ್ನೂ ಮಾಡಿದೆ.
1960ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲು ಆರಂಭಿಸಿದ ವೇಣುಗೋಪಾಲ್ 50ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. 1972ರಲ್ಲಿ ಅವರು ಹಿರಿಯ ವಕೀಲರಾಗಿ ಪದೋನ್ನತಿ ಹೊಂದಿದ್ದರು.
ಚೆನ್ನೈನಲ್ಲಿ ವಾಸವಿದ್ದ ವೇಣುಗೋಪಾಲ್ ಮೊರಾರ್ಜಿ ದೇಸಾಯಿ ಸರಕಾರದ ಅವಧಿಯಲ್ಲಿ ಅವರ ಆಹ್ವಾನವನ್ನು ಒಪ್ಪಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದರು. ಈ ವೇಳೆ ತಮ್ಮ ನೆಲೆಯನ್ನು ದೆಹಲಿಗೆ ವರ್ಗಾಯಿಸಿದ್ದರು.












Click it and Unblock the Notifications