IAS ಎಂಬುದು ನನ್ನ ಬದುಕಿನ ಒಂದು ಅಧ್ಯಾಯವಷ್ಟೇ, ಪೂರ್ತಿ ಜೀವನವಲ್ಲ": ಹುದ್ದೆಗೆ ರಾಜೀನಾಮೆ ನೀಡಿದ ದಿವ್ಯಾ ಮಿತ್ತಲ್

ಐಎಎಸ್ ಹುದ್ದೆ ಎಂಬುದು ಭಾರತದಲ್ಲಿ ಕೋಟ್ಯಂತರ ಯುವಕರ ಬಹುದೊಡ್ಡ ಕನಸು. ಈ ಉನ್ನತ ಹುದ್ದೆ ಪಡೆಯಲು ಅಭ್ಯರ್ಥಿಗಳು ಹಗಲಿರುಳು ಕಷ್ಟಪಡುತ್ತಾರೆ. ಆದರೆ, ಬರೋಬ್ಬರಿ 13 ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ತಾವು ಯಾವುದೇ ರೀತಿಯ ರಾಜಕೀಯ ಒತ್ತಡ ಅಥವಾ ದಿಢೀರ್ ನಿರ್ಧಾರದಿಂದ ಈ ಹೆಜ್ಜೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, "ಐಎಎಸ್ ಎಂಬುದು ನನ್ನ ಜೀವನದ ಒಂದು ಅಧ್ಯಾಯವಷ್ಟೇ, ಅದುವೇ ನನ್ನ ಸಂಪೂರ್ಣ ಬದುಕಲ್ಲ" ಎಂಬ ಸಂದೇಶ ರವಾನಿಸಿದ್ದಾರೆ.

Just A Chapter Not My Entire Life UP Cadre IAS Officer Divya Mittal Explains Her Resignation

ಪ್ರಸ್ತುತ ಉತ್ತರ ಪ್ರದೇಶದ ಕಂದಾಯ ಮಂಡಳಿಯಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ 2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. "ಇದೊಂದು ಆತುರದ ನಿರ್ಧಾರವಲ್ಲ. ನನ್ನ ಆದ್ಯತೆಗಳು, ವೈಯಕ್ತಿಕ ಆಸಕ್ತಿಗಳು ಮತ್ತು ಕುಟುಂಬದ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ನಾನು ಈ ಹೆಜ್ಜೆ ಇಟ್ಟಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿರುವ ಅವರು, ಕುಟುಂಬದ ಜವಾಬ್ದಾರಿಯ ಜೊತೆಗೆ ತಮ್ಮ ಬಹುಕಾಲದ ಆಸಕ್ತಿಗಳಾದ ಬರವಣಿಗೆ, ಬೋಧನೆ ಅಥವಾ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಒಲವು ಹೊಂದಿದ್ದಾರೆ. 13 ವರ್ಷಗಳ ತಮ್ಮ ಐಎಎಸ್ ಪಯಣವನ್ನ ಮರೆಯಲಾಗದ ಪ್ರಯಾಣ ಎಂದ ಅವರು, ತಮ್ಮ ವೃತ್ತಿಜೀವನದಲ್ಲಿ ಬೆಂಬಲಿಸಿದ ಸಹೋದ್ಯೋಗಿಗಳಿಗೆ ಮತ್ತು ಜನಸಾಮಾನ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರು ಹಿನ್ನೆಲೆ

ದಿವ್ಯಾ ಮಿತ್ತಲ್ ಅವರ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದರು. ಶಿಕ್ಷಣದ ಬಳಿಕ ಲಂಡನ್‌ನ ಪ್ರತಿಷ್ಠಿತ ಜೆಪಿ ಮಾರ್ಗನ್ ಕಂಪನಿಯಲ್ಲಿ ಆಕರ್ಷಕ ಹುದ್ದೆ ಗಿಟ್ಟಿಸಿಕೊಂಡರು.

ಅವರ ಪತಿ, ಮಾಜಿ ಐಎಎಸ್ ಅಧಿಕಾರಿ ಗಗನ್‌ದೀಪ್ ಸಿಂಗ್ ಧಿಲ್ಲೋನ್ ಕೂಡ ಅಲ್ಲಿಯೇ ಸಿಟಿ ಗ್ರೂಪ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಿದೇಶದಲ್ಲಿ ಲಕ್ಷಾಂತರ ರೂಪಾಯಿ ಸಂಬಳ, ಐಷಾರಾಮಿ ಜೀವನವಿದ್ದರೂ, ತಾಯ್ನಾಡಿನ ಋಣ ತೀರಿಸಬೇಕೆಂಬ ಅದಮ್ಯ ಕಾಳಜಿಯಿಂದ ಇಬ್ಬರೂ ತಮ್ಮ ಕೆಲಸ ಬಿಟ್ಟು ಭಾರತಕ್ಕೆ ಮರಳಿದರು.

ದಿವ್ಯಾ ಅವರು 2012ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 68ನೇ ರ್‍ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರೆ, ಅವರ ಪತಿ ಗಗನ್‌ದೀಪ್ ಮೊದಲ ಪ್ರಯತ್ನದಲ್ಲೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.

ಉತ್ತರ ಪ್ರದೇಶದಲ್ಲಿ ಐಎಎಸ್ ಸೇವೆ

ತಮ್ಮ ಸೇವಾ ಅವಧಿಯಲ್ಲಿ ದಿವ್ಯಾ ಅವರು ದಿಯೋರಿಯಾ, ಮಿರ್ಜಾಪುರ ಮತ್ತು ಸಂತ ಕಬೀರ್ ನಗರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ದಕ್ಷ ಆಡಳಿತ ನೀಡಿದ್ದರು. ಈ ಜಿಲ್ಲೆಗಳಲ್ಲಿನ ಕಾರ್ಯನಿರ್ವಹಣೆ ಆಡಳಿತವನ್ನು ಮೀರಿದ ಅನೇಕ ಜೀವನ ಪಾಠಗಳನ್ನು ಕಲಿಸಿದೆ ಎಂದು ಅವರು ಹೇಳಿದ್ದಾರೆ. "ಸರಿಯಾದದ್ದರ ಪರವಾಗಿ ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ದಿಯೋರಿಯಾ ಕಲಿಸಿದರೆ, ಅಸಾಧ್ಯ ಎಂಬುದು ಕೇವಲ ಒಂದು ಅಭಿಪ್ರಾಯವಷ್ಟೇ ಹೊರತು ಅದೊಂದು ಸತ್ಯವಲ್ಲ ಎಂಬುದನ್ನು ಮಿರ್ಜಾಪುರ ಕಲಿಸಿತು" ಎಂದು ಅವರು ಸ್ಮರಿಸಿದ್ದಾರೆ.

ಮಿರ್ಜಾಪುರದ ಪ್ರಸಿದ್ಧ ವಿಂಧ್ಯವಾಸಿನಿ ದೇವಿಯ ಸನ್ನಿಧಿಯಲ್ಲಿ ಪಡೆದ ಅನುಭವಗಳನ್ನ ಹಂಚಿಕೊಂಡಿರುವ ಅವರು, ನಿಜವಾದ ಶಕ್ತಿಯು ಅಧಿಕಾರದ ಸ್ಥಾನದಿಂದ ಬರುವುದಿಲ್ಲ, ಬದಲಾಗಿ ಜನರ ನಂಬಿಕೆ ಮತ್ತು ದೈವಿಕ ಕೃಪೆಯಿಂದ ಬರುತ್ತದೆ ಎಂದಿದ್ದಾರೆ.

ದಿವ್ಯಾ ಮಿತ್ತಲ್ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ

ದಿವ್ಯಾ ಮಿತ್ತಲ್ ಸಲ್ಲಿಸಿರುವ ರಾಜೀನಾಮೆ ಪತ್ರ ಪ್ರಸ್ತುತ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿದೆ. ಉತ್ತರ ಪ್ರದೇಶ ಸರ್ಕಾರದ ಶಿಫಾರಸಿನ ನಂತರ ಕೇಂದ್ರ ಗೃಹ ಸಚಿವಾಲಯ ಇದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ಗಮನಾರ್ಹ ಸಂಗತಿಯೆಂದರೆ, ಇವರ ಪತಿ ಗಗನ್‌ದೀಪ್ ಸಿಂಗ್ ಧಿಲ್ಲೋನ್ ಕೂಡ 2022ರಲ್ಲೇ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಜಂಟಿ ಮಹಾನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+