Jharkhand Election 2024: ಬಿಜೆಪಿ ವಿರುದ್ಧ ಜಾರ್ಖಂಡ್ ಸಿಎಂ ಗಂಭೀರ ಆರೋಪ
Jharkhand Election 2024: ಈಗಾಗಲೇ ಜಾರ್ಖಂಡ್‌ನಲ್ಲಿ 81ರಲ್ಲಿ 43 ವಿಧಾನಸಭೆ ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಇನ್ನು ಎರಡನೇ ಹಂತ ಬಾಕಿಯಿದ್ದು, ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ಧಾರೆ. ಅಲ್ಲದೆ, ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡುತ್ತಾ ವಾಗ್ದಾಳಿ ನಡೆಸುತ್ತಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಉತ್ತರ ಪ್ರದೇಶದಲ್ಲಿ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮೂಲಕ ಗಳಿಸಿದ ಹಣವನ್ನು ಬಿಜೆಪಿಯು ಇತರ ರಾಜ್ಯಗಳಲ್ಲಿನ ಚುನಾವಣಾ ಪ್ರಚಾರಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

"ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಗಳಿಸಿದ ಹಣದಿಂದ ಜಾರ್ಖಂಡ್ ಚುನಾವಣೆ ವೇಳೆ ಬಿಜೆಪಿ ಆಡಂಬರ ಮುಂದುವರೆಸಿದೆ. ಇತ್ತೀಚಿನ ದಿನಗಳಲ್ಲಿ ಕೋಳಿ ಕಳ್ಳತನ ಪ್ರಕರಣಗಳನ್ನೂ ತನಿಖೆ ನಡೆಸುತ್ತಿರುವ ಇ.ಡಿ, ಸಿಬಿಐ, ಎನ್‌ಐಎ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತನಿಖೆ ಆರಂಭಿಸಿಲ್ಲ. ಯಾಕೆಂದರೆ, ಅದರ ಹಿಂದೆ ಇರುವುದೇ ಬಿಜೆಪಿ. ಚುನಾವಣೆ ಮುಗಿದ ಬಳಿಕ ಆ ಹಣದಿಂದಲೇ ಶಾಸಕರು, ಸಂಸದರನ್ನು ಖರೀದಿ ಮಾಡುತ್ತಿದೆ," ಎಂದು ಟ್ವೀಟ್ ಮೂಲಕ ಆರೋಪ ಮಾಡಿದ್ದಾರೆ.
ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗುತ್ತಿವೆ. ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣವು ಹಲವು ಜೀವಗಳನ್ನು ಬಲಿ ತೆಗದುಕೊಂಡಿದೆ. ಜಾರ್ಖಂಡ್‌ನಲ್ಲಿ ಒಂದು ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದಕ್ಕೆ ನಾವು ಕಠಿಣ ಕಾನೂನು ರೂಪಿಸಿದ್ದೇವೆ. ಆದರೆ, ಬಿಜೆಪಿ ಅದನ್ನು ಕರಾಳ ಕಾನೂನು ಎಂದು ಆರೋಪಿಸಿ ರಾಜಭವನಕ್ಕೆ ಹೋಗಿತ್ತು ಎಂದು ಹೇಳಿದರು.
ಇನ್ನು ಜಾರ್ಖಂಡ್‌ನಲ್ಲಿ 81 ವಿಧಾನಸಭೆ ಕ್ಷೇತ್ರಗಳಿದ್ದು, ಈ ಪೈಕಿ ಈಗಾಗಲೇ 43 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನವೆಂಬರ್ 13ರಂದು ನಡೆದಿದೆ. ಇನ್ನುಳಿದ ಸ್ಥಾನಗಳಿಹೆ ಎರಡನೇ ಹಂತದಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದ್ದು, ನವೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ.
ಪ್ರಧಾನಿ ಮೋದಿ ವಾಗ್ದಾಳಿ: ಕಾಂಗ್ರೆಸ್ ಕರ್ನಾಟಕದ ಜನರನ್ನು ಲೂಟಿ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ನವೆಂಬರ್ 12) ವಾಗ್ದಾಳಿ ನಡೆಸಿದ್ದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಹಣ ಬಳಕೆ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಇನ್ನು ಪುಣೆ ಕುರಿತು ಮಾತನಾಡಿದ ಅವರು, ಮುಂದಿನ 5 ವರ್ಷಗಳಲ್ಲಿ ನಗರವು ಪ್ರಗತಿಯತ್ತ ಸಾಗಲಿದೆ. ಪುಣೆಯ ಅಭಿವೃದ್ಧಿ ಕಾಣಲು ಹೂಡಿಕೆ, ಮೂಲಸೌಕರ್ಯ ಮತ್ತು ಉದ್ಯಮದ ಅಗತ್ಯವಿದೆ ಎಂದು ಹೇಳಿದರು.












Click it and Unblock the Notifications