Jharkhand Election: 21 ಅಭ್ಯರ್ಥಿಗಳ ಬಿಡುಗಡೆ ಮಾಡಿದ ಕಾಂಗ್ರೆಸ್
ಜಾರ್ಖಂಡ್ ವಿಧಾನಸಭಾ ಚುನಾವಣೆ ಅಖಾಡ ರಂಗೇರಿದೆ. ಹರಿಯಾಣದಲ್ಲಿ ಭರ್ಜರಿ ಗೆಲುವು ಸಾಧಿಸಿ ಮೂರನೇ ಬಾರಿ ಅಧಿಕಾರ ಹಿಡಿದಿರುವ ಬಿಜೆಪಿ ಜಾರ್ಖಂಡ್ ರಾಜ್ಯವನ್ನು ಗೆಲ್ಲಲು ರಣತಂತ್ರ ರೂಪಿಸಿದೆ. ಮತ್ತೊಂದೆಡೆ ಜಾರ್ಖಂಡ್ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಇಂಡಿಯಾ ಒಕ್ಕೂಟ ಕೂಡ ಕಸರತ್ತು ನಡೆಸುತ್ತಿದೆ. ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ 21 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಾಗಿರುವ ಲೋಹರ್ದಗಾ ಕ್ಷೇತ್ರದಲ್ಲಿ ಹಣಕಾಸು ಸಚಿವ ರಾಮೇಶ್ವರ್ ಓರಾನ್ ಅವರಿಗೆ ಸ್ಪರ್ಧಿಸಲು ಟಿಕೆಟ್ ನೀಡಿದೆ. ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ರಾಮೇಶ್ವರ್ ಓರಾನ್ ಅವರು ಜಾರ್ಖಂಡ್ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ.

ಮಾಜಿ ಪೊಲೀಸ್ ಅಧಿಕಾರಿ ಮತ್ತು ಜೆಮ್‌ಶೆಡ್‌ಪುರದ ಮಾಜಿ ಲೋಕಸಭಾ ಸಂಸದ ಅಜೋಯ್ ಕುಮಾರ್ ಅವರನ್ನು ಜೆಮ್‌ಶೆಡ್‌ಪುರ ಪೂರ್ವ ಕ್ಷೇತ್ರದಿಂದ ಟಿಕೆಟ್ ಪಡೆದುಕೊಂಡಿದ್ದಾರೆ. ಅಜೊಯ್ ಕುಮಾರ್ ತ್ರಿಪುರಾ, ಒಡಿಶಾ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕೂಡ ಆಗಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮಂದರ್ ಕ್ಷೇತ್ರದಲ್ಲಿ ಶಿಪ್ಲಿ ನೇಹಾ ಟಿರ್ಕಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಅವರು, ಎರಡನೇ ಬಾರಿಗೆ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಶಿಪ್ಲಿ ನೇಹಾ ಟಿರ್ಕಿ ಅವರ ತಂದೆ ಬಂಧು ಟಿರ್ಕಿ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
ಯಾವ ಕ್ಷೇತ್ರದಿಂದ ಯಾರು ಸ್ಪರ್ಧೆ?
ಜಮ್ತ್ರಾ ಕ್ಷೇತ್ರದಿಂದ ಇರ್ಫಾನ್ ಅನ್ದಾರಿ, ಜಾಮುಂಡಿ ಕ್ಷೇತ್ರದಿಂದ ಬಾದಲ್ ಪತ್ರಲೇಖ್, ಪೊರೆಯಾಹತ್‌ನಿಂದ ಪ್ರದೀಪ್ ಯಾದವ್, ಮಹಾಗಾಮ ಕ್ಷೇತ್ರದಿಂದ ದೀಪಿಕಾ ಪಾಂಡೆ ಸಿಂಗ್, ಬಾರ್ಕಗಾವ್‌ನಿಂದ ಅಂಬಾ ಪ್ರಸಾದ್ ಸಾಹು, ರಾಮಗಢದಿಂದ ಮಮತಾ ದೇವಿ ಅವರಿಗೆ ಟಿಕೆಟ್ ನೀಡಲಾಗಿದೆ.
ಮಂಡು ಕ್ಷೇತ್ರದಿಂದ ಜೈ ಪ್ರಕಾಶ್ ಪಟೇಲ್ ಸ್ಪರ್ಧಿಸಲಿದ್ದು, ಹಜಾರಿಬಾಗ್‌ನಿಂದ ಮುನ್ನಾ ಸಿಂಗ್, ಬೆರ್‍ಮೊದಿಂದ ಕುಮಾರ್ ಜೈ ಮಂಗಲ್ ಸ್ಪರ್ಧಿಸಲಿದ್ದಾರೆ. ಇನ್ನುಳಿದಂತೆ ಝರಿಯಾ ಕ್ಷೇತ್ರದಿಂದ ಪೂರ್ಣಿಮಾ ನೀರಜ್ ಸಿಂಗ್, ಬಾಗ್ಮಾರದಿಂದ ಜಲೇಶ್ವರೋ ಮೆಹತೋ ಅವರಿಗೆ ಟಿಕೆಟ್ ನೀಡಲಾಗಿದೆ.
ಜೆಮ್‌ಶೆಡ್‌ಪುರ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಬನ್ನಾ ಗುಪ್ರಾ, ಎಸ್‌ಟಿ ಮೀಸಲು ಕ್ಷೇತ್ರಗಳಾದ ಜಗನಾಥಪುರದಲ್ಲಿ ಸೋನಾ ರಾಮ್ ಸಿಂಕು, ಖಿಜ್ರಿಯಿಂದ ರಾಜೇಶ್ ಕಚ್ಚಪ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರು ಅಭ್ಯರ್ಥಿಗಳ ಹೆಸರನ್ನು ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಜಾರ್ಖಂಡ್‌ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಜಾರ್ಖಂಡ್ ವಿಧಾನಸಭಾ ಚುನಾವಣೆ ನವೆಂಬರ್ 13 ಮತ್ತು 20 ರಂದು ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications