Jharkhand Assembly Election 2024: ಜಾರ್ಖಂಡ್ ಚುನಾವಣೆ: ಎರಡನೇ ಹಂತದ ಮತದಾನ ಆರಂಭ
ರಾಂಚಿ ನವೆಂಬರ್ 20: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ಆರಂಭವಾಗಿದೆ. ಮೊದಲ ಹಂತದಲ್ಲಿ ನವೆಂಬರ್ 13ರಂದು ಜಾರ್ಖಂಡ್‌ನ 43 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಇಂದು (ನವೆಂಬರ್ 20) ಬುಧವಾರ ಒಟ್ಟು 38 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಜಾರ್ಖಂಡ್‌ನಲ್ಲಿ 81 ವಿಧಾನಸಭಾ ಕ್ಷೇತ್ರಗಳಿದ್ದು, ಇಂದಿನ ಚುನಾವಣೆ ಬಳಿಕ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಶಾಂತಿಯುತ ಮತದಾನದ ಮುನ್ನೆಚ್ಚರಿಕೆ ಕ್ರಮವಾಗಿ ಜಾರ್ಖಂಡ್‌ನ 38 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಜಾರ್ಖಂಡ್‌ನ ಎರಡನೇ ಮತದಾನ ಆರಂಭವಾಗಿದ್ದು, ಬೆಳ್ಳಂಬೆಳಗ್ಗೆಯೇ ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಇನ್ನು ಈ ಬಾರಿಯ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 2019 ರಲ್ಲಿ ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದರೆ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)-ಕಾಂಗ್ರೆಸ್ ಮೈತ್ರಿಕೂಟವು ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಒಟ್ಟಾರೆ ಜಾರ್ಖಂಡ್ ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷಗಳು ಈವೆರೆಗೆ ಶತಪ್ರಯತ್ನ ನಡೆಸಿವೆ.
ಮತದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ
ಜಾರ್ಖಂಡ್‌ನಲ್ಲಿ ಇಂದು ಎರಡನೇ ಮತ್ತು ಕೊನೆಯ ಹಂತದ ಮತದಾನವಾಗಿದ್ದು, ಎಲ್ಲಾ ಮತದಾರರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತದಾನದಲ್ಲಿ ಹೊಸ ದಾಖಲೆಯನ್ನು ರಚಿಸಬೇಕೆಂಬುದು ನನ್ನ ವಿನಂತಿ. ಈ ಸಂದರ್ಭದಲ್ಲಿ, ಮೊದಲ ಬಾರಿಗೆ ಮತ ಚಲಾಯಿಸಲು ಹೊರಟಿರುವ ನನ್ನ ಎಲ್ಲಾ ಯುವ ಸ್ನೇಹಿತರನ್ನು ನಾನು ಅಭಿನಂದಿಸುತ್ತೇನೆ. ನಿಮ್ಮ ಒಂದೊಂದು ಮತವೇ ರಾಜ್ಯದ ಶಕ್ತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತದಾರರಿಗೆ ಕರೆ ನೀಡಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿಯೂ ಇಂದು (ನವೆಂಬರ್ 20) ಬುಧವಾರ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 4,136 ಅಭ್ಯರ್ಥಿಗಳ ಭವಿಷ್ಯ ನವೆಂಬರ್ 23ರಂದು ಹೊರಬೀಳಲಿದೆ.












Click it and Unblock the Notifications