Jharkhand Assembly Election 2024: ಎಐಸಿಸಿಯ ಸಮನ್ವಯಕಾರರಾಗಿ ಬಿ.ಕೆ.ಹರಿಪ್ರಸಾದ್ ನೇಮಕ
ಈಗಾಗಲೇ ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮುಗಿದಿದ್ದು, ಫಲಿತಾಂಶ ಕೂಡ ಹೊರಬಿದ್ದಿದೆ. ಇನ್ನೂ ಇದೀಗ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಐಸಿಸಿಯ ಸಮನ್ವಯಕಾರರಾಗಿ ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ನೇಮಿಸಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಆದೇಶಿಸಿದೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ನಿರ್ದೇಶನದಂತೆ ಬಿ.ಕೆ.ಹರಿಪ್ರಸಾದ್, ಗೌರವ್ ಗೊಗಾಯ್, ಮೋಹನ್ ಮರ್ಕಮ್ ಅವರನ್ನು ಸಮನ್ವಯಕಾರರಾಗಿ ನೇಮಕಗೊಳಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶಿಸಿದ್ದಾರೆ.

ಇಂಡಿಯಾ ಮೈತ್ರಿಕೂಟ ಆಕ್ರೋಶ: ಮಂಗಳವಾರ (ಅಕ್ಟೋಬರ್ 15) ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಭೆ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು, ಇದಕ್ಕೆ ಇಂಡಿಯಾ ಮೈತ್ರಿಕೂಟ ವಿರೋಧ ವ್ಯಕ್ತಪಡಿಸಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.
ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಕ್ಷೇತ್ರಗಳಿದ್ದರೂ ಯಾವುದೇ ಅಡೆತಡೆ ಇಲ್ಲದೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇನ್ನು ಜಾರ್ಖಂಡ್‌ನ 81 ಸ್ಥಾನಗಳಿಗೆ ನವೆಂಬರ್ 13 & ನವೆಂಬರ್ 20ರಂದು 2 ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಜೊತೆಗೆ ಜಾರ್ಖಂಡ್ ವಿಧಾನಸಭಾ ಚುನಾವಣೆಯನ್ನೂ ಘೋಷಿಸಿದ ಚುನಾವಣಾ ಆಯೋಗದ ಕ್ರಮವನ್ನು ಇಂಡಿಯಾ ಮೈತ್ರಿಕೂಟ ವಿರೋಧ ವ್ಯಕ್ತಪಡಿಸಿದೆ. ಇನ್ನು ಚುನಾವಣೆ ದಿನಾಂಕ ಘೋಷಣೆಯನ್ನು ಸ್ವಾಗತಿಸಿದ ಬಿಜೆಪಿ ನೇತೃತ್ವದ ಎಸ್‌ಡಿಎ ವಿರುದ್ಧದ ಹೋರಾಟಕ್ಕೆ ಸಿದ್ಧ ಎಂದು ಘೋಷಣೆ ಮಾಡಿದೆ.
ಮುಂದಿನ ವರ್ಷದ ಅಂದರೆ 2025ರ ಜನವರಿ ಕೊನೆಯವರೆಗೂ ರಾಜ್ಯ ವಿಧಾನಸಭೆಯ ಅಧಿಕಾರಾವಧಿ ಇದ್ದರೂ, ಚುನಾವಣಾ ದಿನಾಂಕವನ್ನು ಘೋಷಿಸಿದ ಕ್ರಮ ಆತುರದ ನಿರ್ಧಾರ ಎಂದು ಜೆಎಂಎಂ, ಕಾಂಗ್ರೆಸ್ ಮತ್ತು ಸಿಪಿಐ(ಎಂಎಲ್-ಎಲ್) ಟೀಕಿಸಿವೆ. ಸಿಇಸಿ ಮತ್ತು ಇತರ ಪ್ರತಿನಿಧಿಗಳ ಜತೆ ಸಭೆ ನಡೆಸಿ, ನವೆಂಬರ್ 15ರ ರಾಜ್ಯ ಸಂಸ್ಥಾಪನೆ ದಿನದ ಬಳಿಕ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದೆವು ಎಂದು ಹೇಳುವ ಮೂಲಕ ಆಕ್ರೊಶ ವ್ಯಕ್ತಪಡಿಸಿವೆ.
ನವರಾತ್ರಿ ಈಗಷ್ಟೇ ಮುಗಿದಿದ್ದು, ದೀಪಾವಳಿ ಮತ್ತು ಛತ್ ಹೀಗೆ ಎರಡು ಅತೀ ದೊಡ್ಡ ಹಬ್ಬಗಳು ಈ ಚುನಾವಣೆಗೆ ಮುನ್ನ ನಡೆಯಲಿವೆ. ಮತದಾರರಿಗೆ ಇದು ತೀವ್ರ ಸಮಸ್ಯೆಯಾಗಲಿದೆ ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ವಿನೋದ್ ಕುಮಾರ್ ಪಾಂಡೆ ಹೇಳಿದ್ದಾರೆ. ಆದರೂ ಮತ ಸಮರಕ್ಕೆ ನಾವು ಸಿದ್ಧರಿದ್ದೇವೆ ಎಂದು ತಿಳಸಿದ್ದಾರೆ.
ದಿಢೀರ್ ಚುನಾವಣಾ ಘೋಷಣೆ ಎರಡೂ ಮಿತ್ರಕೂಟಗಳಿಗೆ ಸವಾಲು ತಂದೊಡ್ಡಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯ ಮಿತ್ರಪಕ್ಷ ಆಗಿರುವ ಎಜೆಎಸ್‌ಯು ಒಂಬತ್ತು ಸ್ಥಾನಗಳಿಗೆ ಬೇಡಿಕೆ ಮುಂದಿಟ್ಟಿದೆ. ಅದರಂತೆಯೇ ಎಲ್‌ಜಿಪಿ ಮತ್ತು ಜಿತಾನ್ ರಾಮ್ ಮಾಂಝಿಯವರ ಎಚ್‌ಎಎಂ ಸಹ ಸ್ಥಾನಗಳಿಗೆ ಬೇಡಿಕೆ ಇಟ್ಟಿವೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಜೆಮ್ಶೇಡ್ಪುರ ಮತ್ತು ತಮರ್ ಸ್ಥಾನಗಳಿಂದ ಕಣಕ್ಕಿಳಿಯಲು ಉತ್ಸುಕವಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಮತ್ತೊಂದೆಡೆ ಇಂಡಿಯಾ ಮೈತ್ರಿಕೂಟದಲ್ಲೂ ಸ್ಥಾನ ಹೊಂದಾಣಿಕೆ ದೊಡ್ಡ ಸವಾಲಾಗಿದ್ದು, 2019ರ ಚುನಾವಣೆಯಲ್ಲಿ 81 ಸ್ಥಾನಗಳ ಪೈಕಿ ಜೆಎಂಎಂ 43ರಲ್ಲಿ ಸ್ಪರ್ಧಿಸಿತ್ತು. ಇದೀಗ ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ನಿರೀಕ್ಷೆಯಲ್ಲಿದೆ. ಎರಡನೇ ಅತಿದೊಡ್ಡ ಘಟಕ ಪಕ್ಷ ಆಗಿರುವ ಕಾಂಗ್ರೆಸ್ ತನ್ನ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಆಗ್ರಹಿಸಿದೆ. 2019ರಲ್ಲಿ 31 ಸ್ಥಾನಗಳಲ್ಲಿ ಸ್ಪರ್ಧಿಸಿದ್ದೆವು. ಈ ಬಾರಿ ಪೊರಿಯಾಹಾತ್ ಮತ್ತು ಮಂಡು ನಮ್ಮ ಬುಟ್ಟಿಗೆ ಬಂದಿರುವುದರಿಂದ 33 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಕಾಂಗ್ರೆಸ್ ನಾಯಕರೊಬ್ಬರಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಏಳು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆರ್‌ಜೆಡಿ ಪಕ್ಷವು ಕೂಡ 10 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. 2019ರಲ್ಲಿ ಮಹಾಘಟಬಂಧನದ ಭಾಗವಾಗಿ ಇರದ ಎಡಪಕ್ಷಗಳು ಕನಿಷ್ಠ 6 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ ಎನ್ನುವ ಮಾಹಿತಿ ತಿಳಿದುವಬಂದಿದೆ.












Click it and Unblock the Notifications