Breaking: ಜಮ್ಮು ಮತ್ತು ಕಾಶ್ಮೀರ ಚುನಾವಣೆ, 6 ಅಭ್ಯರ್ಥಿ ಅಂತಿಮಗೊಳಿಸಿದ ಕಾಂಗ್ರೆಸ್
ನವದೆಹಲಿ, ಆಗಸ್ಟ್ 24: ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ 2024ಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾತುಕತೆಯನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಸೀಟು ಹಂಚಿಕೆಯ ಲೆಕ್ಕಾಚಾರದ ಬಳಿಕ ಮೊದಲ ಹಂತದ ಚುನಾವಣೆಗೆ ಕಾಂಗ್ರೆಸ್ 6 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ, ಒಟ್ಟು 8 ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿತ್ತು.
ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು, 2019ರ ಆಗಸ್ಟ್ 5ರಂದು ರದ್ದುಪಡಿಸಿದೆ. ಈ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದ್ದು, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಚುನಾವಣಾ ಪೂರ್ವ ಮೈತ್ರಿಗೆ ಮಾಡಿಕೊಂಡಿವೆ.

ಬುಧವಾರ ಮತ್ತು ಗುರುವಾರ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜಮ್ಮು & ಕಾಶ್ಮೀರ ಪ್ರವಾಸದಲ್ಲಿದ್ದರು. ಗುರುವಾರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾತುಕತೆ ಮುಕ್ತಾಯಗೊಂಡಿದೆ. ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ 6 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಜಮ್ಮು & ಕಾಶ್ಮೀರದಲ್ಲಿ 90 ವಿಧಾನಸಭಾ ಕ್ಷೇತ್ರಗಳಿವೆ. ಮೊದಲ ಹಂತದಲ್ಲಿ 24 ಕ್ಷೇತ್ರಗಳಿಗೆ 18/9/2024ರಂದು ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ 13ರಲ್ಲಿ ನ್ಯಾಷನಲ್ ಕಾನ್ಫರೆನ್ಸ್, 10ರಲ್ಲಿ ಕಾಂಗ್ರೆಸ್ ಮತ್ತು ಒಂದು ಕ್ಷೇತ್ರದಲ್ಲಿ ಸಿಪಿಎಂ ಸ್ಪರ್ಧೆ ಮಾಡುವುದಾಗಿ ಸೀಟು ಹಂಚಿಕೆಯಾಗಿದೆ.
ರಾಜ್ಯದಲ್ಲಿ 26 ಕ್ಷೇತ್ರಗಳಿಗೆ 25/9/2024 ಮತ್ತು 40 ಕ್ಷೇತ್ರಗಳಿಗೆ 1/10/2024ರಂದು ಮತದಾನ ನಡೆಯಲಿದೆ. ಮೂರು ಹಂತದ ಮತಗಳ ಎಣಿಕೆ 4/10/2024ರ ಶುಕ್ರವಾರ ನಡೆಯಲಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಂಡಿಲ್ಲ, ಏಕಾಂಗಿಯಾಗಿ ಚುನಾವಣೆ ಎದುರಿಸಲಿದ್ದು, ಪಕ್ಷೇತರರು ಬಯಸಿದರೆ ಮೈತ್ರಿಗೆ ಸಿದ್ಧ ಎಂದು ಪಕ್ಷ ಹೇಳಿದೆ.
ಲೋಕಸಭೆ ಚುನಾವಣೆ 2024ಕ್ಕೆ ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾಗಿದ್ದ 'ಇಂಡಿಯಾ' ಮೈತ್ರಿಕೂಟದಲ್ಲಿ ಕಾಂಗ್ರೆಸ್, ಸಿಪಿಎಂ, ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಪಕ್ಷಗಳಾಗಿದ್ದವು. ಲೋಕಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಸಿ ಸೀಟು ಹಂಚಿಕೆ ಮಾಡಿಕೊಂಡು ಎದುರಿಸಿದ್ದವು. ಈಗ ವಿಧಾನಸಭೆ ಚುನಾವಣೆಯಲ್ಲಿಯೂ ಈ ಮೈತ್ರಿ ಮುಂದುವರೆದಿದೆ.
ಮುಂದಿನ ವಾರ ಬಿಜೆಪಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಕಾವು ಹೆಚ್ಚಿಸಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ರಾಜ್ಯದಲ್ಲಿ ಸರಣಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ 'ಇಂಡಿಯಾ' ಮೈತ್ರಿಕೂಟ ಚುನಾವಣೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ. ಆದ್ದರಿಂದ ಚುನಾವಣಾ ಪೂರ್ವ ಮೈತ್ರಿಮಾಡಿಕೊಂಡು ಸೀಟು ಹಂಚಿಕೆ ಮಾಡಿಕೊಂಡಿದೆ.












Click it and Unblock the Notifications