Breaking: ಸ್ವತಂತ್ರ ಮಾಧ್ಯಮಗಳಿಗೆ ಫಂಡಿಂಗ್ ಮಾಡುವ ಸಂಸ್ಥೆಗಳ ಮೇಲೆ ಐಟಿ ರೇಡ್
ನವದೆಹಲಿ, ಸೆ. 7: ಹಲವು ಮಾಧ್ಯಮಗಳಿಗೆ ದೇಣಿಗೆ ನೀಡುವ ವಿವಿಧ ಸಂಸ್ಥೆಗಳ ಮೇಲೆ ಅದಾಯ ತೆರಿಗೆ ಇಲಾಖೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುವ ಕೆಲಸ ಮಾಡಿದೆ. ಬೆಂಗಳೂರು ಮೂಲದ ಇಂಡಿಪೆಂಡೆಂಟ್ ಅಂಡ್ ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ (IPSMF), ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (CPR) ಮತ್ತು ಆಕ್ಸ್‌ಫ್ಯಾಮ್ ಇಂಡಿಯಾ (OxFam India) ಸಂಸ್ಥೆಗಳ ದೆಹಲಿ ಕಚೇರಿಯ ಮೇಲೆ ಐಟಿ ರೇಡ್ ನಡೆದ ಶೋಧ ಕಾರ್ಯವಾಗುತ್ತಿದೆ.
ಮಾಧ್ಯಮ ವರದಿ ಪ್ರಕಾರ ಸಿಪಿಆರ್ ಕಚೇರಿಯಲ್ಲಿ 10 ಐಟಿ ಅಧಿಕಾರಿಗಳಿಗೂ ಹೆಚ್ಚು ಮಂದಿಯ ತಂಡ ಕಾರ್ಯನಿರತವಾಗಿದೆ. ಬುಧವಾರ ರಾತ್ರಿ ಪೂರ್ತಿ ಸರ್ವೆ ನಡೆಯಲಿದ್ದು, ಅಲ್ಲಿನ ಯಾವ ಸಿಬ್ಬಂದಿಗೂ ಹೊರಗೆ ಹೋಗಲು ಅವಕಾಶ ನಿರಾಕರಿಸಲಾಗಿದೆ.
ಇದೇ ವೇಳೆ, ಹರಿಯಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲೂ ರೇಡ್‌ಗಳಾಗಿವೆ.
ಸರಕಾರದ ವಿರುದ್ಧ ಟೀಕೆ ಮಾಡಿ ಬರಹಗಳನ್ನು ಪ್ರಕಟಿಸುವ ದಿ ವೈರ್, ದಿ ಪ್ರಿಂಟ್, ದಿ ಕಾರವನ್, ಆಲ್ಟ್ ನ್ಯೂಸ್ ಮೊದಲಾದ ಮಾಧ್ಯಮಗಳಿಗೆ ಈ ಸಂಸ್ಥೆಗಳು ಫಂಡಿಂಗ್ ಮಾಡುತ್ತವೆ. ಆದಾಯ ತೆರಿಗೆ ವಂಚನೆ ಮಾಡಿರುವ ಶಂಕೆಯ ಮೇಲೆ ಐಟಿ ಅಧಿಕಾರಿಗಳು ಈ ದಾಳಿ ಮಾಡಿರುವುದು ತಿಳಿದುಬಂದಿದೆ. ಆದರೆ, ಈ ಸಂಸ್ಥೆಗಳಿಂದ ಈ ಬಗ್ಗೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲ.

ಅಮಾನ್ಯ ರಾಜಕೀಯ ಸಂಘಟನೆಗಳಿಗೆ ನೆರವು
ಪಿಟಿಐ ವರದಿ ಪ್ರಕಾರ ಈ ಸಂಸ್ಥೆಗಳಿಗೆ ವಿದೇಶಗಳಿಂದ ದೇಣಿಗೆ ಬಂದಿದ್ದು, ಅದು ಅಕ್ರಮ ಎಂಬುದು ಐಟಿ ಇಲಾಖೆಯ ಅನುಮಾನ. ಹಾಗೆಯೇ, ರಾಜಕೀಯವಾಗಿ ನೊಂದಾಯಿತವಾದ, ಆದರೆ ಮಾನ್ಯತೆ ಪಡೆಯದ ೨೦ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿಗೂ ಇವು ಫಂಡಿಂಗ್ ಮಾಡುತ್ತಿರುವ ಆರೋಪ ಇದೆ. ಅಜೀಮ್ ಪ್ರೇಮ್‌ಜಿ, ಎನ್ ಆರ್ ನಾರಾಯಣಮೂರ್ತಿ, ರತನ್ ಟಾಟಾ, ಗೋದ್ರೇಜ್, ನಂದನ್ ನಿಲೇಕಣಿ ಮೊದಲಾದ ಅನೇಕ ಉದ್ಯಮಪತಿಗಳು ಈ ಸಂಸ್ಥೆಗಳಿಗೆ ದೇಣಿಗೆ ನೀಡುತ್ತಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಸೇರಿದಂತೆ ಕೆಲ ಜಾಗತಿಕ ಉದ್ಯಮಪತಿಗಳು ವಿಶ್ವಾದ್ಯಂತ ವಿವಿಧ ಸ್ವತಂತ್ರ ಮಾಧ್ಯಮಗಳಿಗೆ ಪರೋಕ್ಷವಾಗಿ ದೇಣಿಗೆಗಳನ್ನು ನೀಡುತ್ತಿರುತ್ತಾರೆ.
ಕಾರವಾನ್ ಮ್ಯಾಗಝಿನ್
ಬೆಂಗಳೂರು ಮೂಲದ ಐಪಿಎಸ್‌ಎಂಎಫ್ ಹಲವು ಪ್ರಮುಖ ಸ್ವತಂತ್ರ ಮಾಧ್ಯಮಗಳಿಗೆ ಹಣದ ನೆರವು ಒದಗಿಸುತ್ತದೆ. ದಿ ಕಾರವನ್ ಮ್ಯಾಗಝಿನ್ ಪ್ರಮುಖವಾದುದು. ಸರಕಾರದ ವಿರುದ್ಧ ಇದು ಕಟುವಾಗಿ ಟೀಕಿಸುವ ಲೇಖನಗಳನ್ನು ಪ್ರಕಟಿಸುತ್ತದೆ. ಪತ್ರಕರ್ತ ಟಿಎಸ್ ನಿನಾನ್ ಅವರು ಐಪಿಎಸ್‌ಎಎಂಫ್‌ನ ಅಧ್ಯಕ್ಷರು. ಈ ಸಂಸ್ಥೆಗೆ ಅಜೀಮ್ ಪ್ರೇಮ್‌ಜಜಿ, ಗೋದ್ರೇಜ್, ನಿಲೇಕಣಿ ಕುಟುಂಬದವರು ಫಂಡಿಂಗ್ ಮಾಡುತ್ತಾರೆ.
ಸಿಪಿಆರ್ ಮತ್ತು ಆಕ್ಸ್‌ಫಾಮ್
ಸ್ವತಂತ್ರ ಥಿಂಕ್ ಟ್ಯಾಂಕ್ ಸಂಸ್ಥೆ ಎನಿಸಿದ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಸರಕಾರದ ನೀತಿ ಮೇಲೆ ನಿಗಾ ಇಡುವ ಸಂಸ್ಥೆ ಎನಿಸಿದೆ. ಬಿಜೆಪಿ ಸರಕಾರದ ಕಟು ಟೀಕಾಕಾರರೆನಿಸಿದ ಪ್ರತಾಪ್ ಭಾನು ಮೆಹತಾ ಅವರು ಈ ಹಿಂದೆ ಸಿಪಿಆರ್‌ನ ಅಧ್ಯಕ್ಷರಾಗಿದ್ದರು. ದೆಹಲಿಯ ಜೆಎನ್‌ಯುನಲ್ಲಿ ಬೋಧನೆ ಮಾಡುವ ಮತ್ತು ಹಿಂದೆ ಶ್ರೀರಾಮ ಕಾಲೇಜಿನಲ್ಲಿ ಪ್ರಾಂಶುಪಾಲೆಯಾಗಿದ್ದ ಮೀನಾಕ್ಷಿ ಗೋಪಿನಾಥ್ ಸದ್ಯ ಸಿಪಿಎಆರ್‌ನ ಅಧ್ಯಕ್ಷರಾಗಿದ್ದಾರೆ.

ಇನ್ನು, ಆಕ್ಸ್‌ಫಾಮ್ ಇಂಡಿಯಾ ಸಂಸ್ಥೆ ಜಾಗತಿಕವಾಗಿ ವಿವಿಧ ಎನ್‌ಜಿಒಗಳ ಗುಂಪಿನ ಒಂದು ಭಾಗವಾಗಿದೆ. ಭಾರತೀಯ ಸಂವಿಧಾನದ ಆಶಯದಂತೆ ನೀತಿಗಳು ರೂಪಿತವಾಗಲು ಸರಕಾರದ ಮೇಲೆ ಒತ್ತಡ ಹೇರುವ ಅಭಿಯಾನಗಳಿಗೆ ಈ ಸಂಸ್ಥೆ ಬೆಂಬಲ ನೀಡುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications