ಜನವರಿ 3ರಂದು ಚಂದಿರನ ಅಂಗಳಕ್ಕೆ ಹಾರಲಿದೆ ಇಸ್ರೋ ಚಂದ್ರಯಾನ-2
ಶ್ರೀಹರಿಕೋಟಾ (ಆಂಧ್ರಪ್ರದೇಶ), ಸೆಪ್ಟೆಂಬರ್ 17: ಚಂದಿರನ ಅಂಗಳಕ್ಕೆ ತಲುಪುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-2 ಯೋಜನೆಗೆ 2019ರ ಜನವರಿ 3ರಂದು ಚಾಲನೆ ದೊರಕುವ ನಿರೀಕ್ಷೆಯಿದೆ. ಚಂದ್ರನ ದಕ್ಷಿಣ ಧ್ರುವದ ಸಮೀಪ ತೆರಳುವ ಜಗತ್ತಿನ ಮೊದಲ ಯೋಜನೆ ಇದಾಗಲಿದೆ.
ಪಿಎಸ್‌ಎಲ್‌ವಿ ಸಿ-42 ಯಶಸ್ವಿ ಉಡಾವಣೆ ಬಳಿಕ ಮುಂದಿನ ಕೆಲವು ತಿಂಗಳಲ್ಲಿ ನಡೆಯಲಿರುವ ವಿವಿಧ ಉಡಾವಣಾ ಯೋಜನೆಗಳ ಬಗ್ಗೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಮಾತನಾಡಿದರು.
2019ರ ಜನವರಿ 3 ರಿಂದ ಫೆಬ್ರುವರಿ 16ರ ಅವಧಿಯಲ್ಲಿ ಚಂದ್ರಯಾನ -2 ಯೋಜನೆಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಆ ಕಾಲಾವಧಿಯಲ್ಲಿ ಯಾವಾಗ ಬೇಕಾದರೂ ಉಡಾವಣೆ ನಡೆಯಬಹುದು. ಆದರೆ, ನಾವು ಜನವರಿ 3ರಂದೇ ನಡೆಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದರು.

ಇಂಗ್ಲೆಂಡ್‌ನ ನೋವಾಸರ್ ಮತ್ತು ಎಸ್1-4 ಭೂ ವೀಕ್ಷಣಾ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದರ ಕುರಿತು ಮಾತನಾಡಿದ ಅವರು, 'ನೋವಾಸರ್ ಮತ್ತು ಎಸ್1-4 ಗ್ರಾಹಕ ಉಪಗ್ರಹಗಳನ್ನು ಹೊಸತ್ತ ಪಿಎಸ್‌ಎಲ್‌ವಿ ಸಿ42 ಯಶಸ್ವಿಯಾಗಿ ಅವುಗಳನ್ನು ಕಕ್ಷೆಗೆ ಸೇರಿಸಿವೆ ಎಂಬುದನ್ನು ಪ್ರಕಟಿಸಲು ಹರ್ಷಿಸುತ್ತೇವೆ.
ಮುಂದಿನ ಆರು ತಿಂಗಳಲ್ಲಿ 10 ಉಪಗ್ರಹ ಯೋಜನೆಗಳು ಮತ್ತು ಎಂಟು ಉಡಾವಣಾ ವಾಹನ ಯೋಜನೆಗಳಿಗೆ ಎರಡು ವಾರಕ್ಕೆ ಒಂದರಂತೆ ಚಾಲನೆ ನೀಡಲಾಗುವುದು ಎಂದರು.
ಗೂಢಚರ್ಯೆ ನಡೆಸಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೊಂದಿಗೆ ಪ್ರತಿಕ್ರಿಯಿಸಿದ ಶಿವನ್, ಇದು ಇಸ್ರೋಗೆ ಸಂಬಂಧಿಸಿದ್ದಲ್ಲ. ಈ ಪ್ರಕರಣ ಕೇರಳ ಸರ್ಕಾರದ ವಿರುದ್ಧ ಮಾತ್ರ ಇದ್ದದ್ದು. ನಂಬಿ ನಾರಾಯಣ್ ಅವರನ್ನು ತಪ್ಪಾಗಿ ಬಂಧಿಸಲಾಗಿದೆ ಎಂಬುದು ನಿರ್ಧಾರವಾದ ಬಳಿಕ ಇಸ್ರೋದೆಡೆಗೆ ತಿರುಗಿತು ಎಂದರು.












Click it and Unblock the Notifications