Chandrayaan-3: ‘ಚಂದ್ರಯಾನ-3’ ರೋವರ್ ಕಥೆ ಏನಾಯ್ತು?
ಚಂದ್ರನ ಮೇಲೆ ಸುಮಾರು -120ರಿಂದ -200 ಡಿಗ್ರಿ ಮೈಕೊರೆಯುವ ಚಳಿ ನಡುವೆ ನಿದ್ದೆಗೆ ಜಾರಿದ ಭಾರತದ 'ವಿಕ್ರಮ್' ಲ್ಯಾಂಡರ್ ಹಾಗೂ 'ಪ್ರಜ್ಞಾನ್' ರೋವರ್ ಬಗ್ಗೆ ಇದೀಗ ಮಹತ್ವದ ಮಾಹಿತಿ ಹೊರಬಿದ್ದಿದೆ. ಇಸ್ರೋ ವಿಜ್ಞಾನಿಗಳು ಇಂದು ಈ ಉಪಕರಣಗಳನ್ನು ನಿದ್ದೆಯಿಂದ ಎದ್ದೇಳಿಸಲು ಸಜ್ಜಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಪ್ಲ್ಯಾನ್ ಬದಲಾಗಿದೆ. ಹಾಗಾದರೆ ಮುಂದೆ ಏನಾಯ್ತು? ಬನ್ನಿ ತಿಳಿಯೋಣ.
ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್‌ನ ಮತ್ತೆ ಅಧ್ಯಯನಕ್ಕೆ ಸಜ್ಜುಗೊಳಿಸುವ ಪ್ರಯತ್ನ ಒಂದು ದಿನ ತಡವಾಗಿದೆ. ಇಂದು ಇಸ್ರೋ ವಿಜ್ಞಾನಿಗಳು ಈ ಯೋಜನೆ ನಡೆಸಲು ತಯಾರಿ ಕೈಗೊಂಡಿದ್ದರು. ಆದರೆ ಅಂತಿಮ ಹಂತದಲ್ಲಿ ಯೋಜನೆ ನಾಳೆ ಅಂದ್ರೆ ಶನಿವಾರಕ್ಕೆ ಮುಂದೂಡಿಕೆ ಆಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಹಾಗೂ ರೋವರ್ ಇರುವ ಸ್ಥಳದ ಮೇಲೆ ಇಂದು ಸೂರ್ಯ ರಶ್ಮಿ ಮತ್ತೆ ಬೀಳುವುದರಿಂದ ಪುನಃ ಸಕ್ರಿಯಗೊಳಿಸಲು ಇಸ್ರೋ ಸಿದ್ಧವಾಗಿತ್ತು.

ಇಸ್ರೋ ವಿಜ್ಞಾನಿಗಳು ಹೇಳಿದ್ದು ಏನು?
ಅಂದಹಾಗೆ ಭಾರತದ ಇಸ್ರೋ ಸಂಸ್ಥೆಗೆ ಇದು ದೊಡ್ಡ ಕಾರ್ಯವಾಗಿತ್ತು. ಆದರೆ ಈಗ ದಿಢೀರ್ ಯೋಜನೆ ಮುಂದೂಡಿರುವ ಬಗ್ಗೆ ಸ್ಪೇಸ್ ಅಪ್ಲಿಕೇಷನ್ ಸೆಂಟರ್ ನಿರ್ದೇಶಕ ನೀಲೇಶ್ ದೇಸಾಯಿ ಮಾಹಿತಿ ನೀಡಿದ್ದಾರೆ. ನೀಲೇಶ್ ದೇಸಾಯಿ ಅವರು ತಿಳಿಸಿರುವಂತೆ, ಸೆಪ್ಟೆಂಬರ್ 22ರ ಸಂಜೆ ಪ್ರಜ್ಞಾನ್ ರೋವರ್ & ವಿಕ್ರಮ್ ಲ್ಯಾಂಡರ್ ಉಪಕರಣಗಳನ್ನು ಮರು ಸಕ್ರಿಯಗೊಳಿಸಲು ಈ ಮೊದಲು ಯೋಜಿಸಿದ್ದೆವು. ಆದರೆ ಕೆಲವು ಕಾರಣಗಳಿಂದ ನಾವು ಅದನ್ನು ನಾಳೆಗೆ, ಅಂದರೆ ಸೆಪ್ಟೆಂಬರ್ 23ಕ್ಕೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
#WATCH | Anand, Gujarat: On Chandrayaan-3, Director of Space Applications Centre, Nilesh Desai says, "...Earlier we planned to reactivate the (Pragyan) rover and (Vikram) lander on the evening of 22nd September, but due to some reasons we will now do it tomorrow on 23rd… pic.twitter.com/bvFTkXpNjZ
— ANI (@ANI) September 22, 2023
ಅಲ್ಲದೆ ಇದೀಗ ನಿದ್ದೆಯಲ್ಲಿರುವ ಲ್ಯಾಂಡರ್ ಮತ್ತು ರೋವರ್ ಅನ್ನು ಎಚ್ಚರಗೊಳಿಸಿ, ಆ ಬಳಿಕ ಚಂದ್ರನ ಮೇಲಿನ ಅಧ್ಯಯನ ಮತ್ತೆ ಆರಂಭಿಸುವ ಕುರಿತಾಗಿ ನೀಲೇಶ್ ದೇಸಾಯಿ ಅವರು ಮಾಹಿತಿ ನೀಡಿದ್ದಾರೆ. ಈ ಮೂಲಕ ತಾಂತ್ರಿಕ ಕಾರಣಕ್ಕೆ ಇಸ್ರೋ ಸಂಸ್ಥೆ ಇಂದು ನಡೆಸಬೇಕಿದ್ದ ಕಾರ್ಯಕ್ರಮ ನಾಳೆಗೆ ಮುಂದೂಡಿಕೆ ಮಾಡಿದೆ. ಆದರೆ ನಾಳೆ ಎಷ್ಟೊತ್ತಿಗೆ ಯೋಜನೆ ಕೈಗೊಳ್ಳಲಿದೆ ಇಸ್ರೋ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಏನಿದು ಚಂದ್ರನ ಮೇಲೆ ಲೆಕ್ಕಾಚಾರ?
ಅಷ್ಟಕ್ಕೂ ಚಂದ್ರನ ಅಂಗಳದಲ್ಲಿ ವಿಕ್ರಮ್ ಇಳಿದ ನಂತರ ರೋವರ್ ಚಂದ್ರನ 1 ಪೂರ್ತಿ ದಿನ ಅಂದರೆ ಭೂಮಿ ಲೆಕ್ಕದಲ್ಲಿ 14 ದಿನ ಕೆಲಸ ಮಾಡಿತ್ತು. ಆದ್ರೆ ಅಲ್ಲಿ ಮತ್ತೆ ಸೂರ್ಯ ಮುಳುಗಿ 14 ದಿನದ ಹಿಂದೆ ಕಗ್ಗತ್ತಲು ಆವರಿಸಿದೆ. ಆಗ ಇಸ್ರೋ ವಿಜ್ಞಾನಿಗಳು ವೈಜ್ಞಾನಿಕ ಮಾಹಿತಿ ಸಂಗ್ರಹದ ಕಾರ್ಯ ನಿಲ್ಲಿಸಿದ್ದರು. ಈ ಮೂಲಕ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಲ್ಯಾಂಡರ್ ಮತ್ತು ರೋವರ್ ನಿದ್ರಾವಸ್ಥೆಗೆ ಕಳುಹಿಸಿದ್ದರು. ಆದರೆ ಈಗ ಮತ್ತೊಮ್ಮೆ ಆ ಉಪಕರಣಗಳನ್ನ ನಿದ್ದೆ ಮೂಡ್‌ನಿಂದ ಎಬ್ಬಿಸಬೇಕಿದೆ. ಇಂದು ನಡೆಯಬೇಕಿದ್ದ ಕೆಲಸ ನಾಳೆಗೆ ಮುಂದೂಡಿದೆ ಇಸ್ರೋ.
ಲ್ಯಾಂಡರ್ & ರೋವರ್‌ಗೆ ಹೀಟರ್!
ಭೂಮಿಯ ರೀತಿ ಚಂದ್ರನ ಮೇಲೆ ವಾತಾವರಣ ಇಲ್ಲ, ಹೀಗಾಗಿ ಅಲ್ಲಿ ಸೂರ್ಯನ ಬೆಳಕು ಬಿದ್ದಾಗ ಅತಿಯಾದ ಬಿಸಿ. ಸೂರ್ಯ ಮುಳುಗಿದಾಗ ಅತಿಯಾದ ಚಳಿ ಇರುತ್ತದೆ. ಚಳಿಯ ಪರಿಸ್ಥಿತಿ ಹೇಗಿರುತ್ತೆ ಎಂದರೆ ಮೈಕೊರೆಯುವುದು ಪಕ್ಕಾ. ಹೀಗೆ ಚಂದ್ರನಲ್ಲಿ ರಾತ್ರಿ ವೇಳೆ ಹೆಪ್ಪುಗಟ್ಟುವ ವಾತಾವರಣ ಇರುವ ಕಾರಣಕ್ಕೆ ಲ್ಯಾಂಡರ್ & ರೋವರ್ ಬೆಚ್ಚಗಿರಲು ಹೀಟರ್ ಅಗತ್ಯ. ಹೀಟರ್‌ಗೆ 14 ದಿನ ಕತ್ತಲಿನಲ್ಲಿ ಶಕ್ತಿ ಪೂರೈಸುವ ಬ್ಯಾಟರಿ ಅಗತ್ಯ. ಆಗ ಮಾತ್ರ ಅವು ಬದುಕುತ್ತವೆ. ಈ ಕಾರಣಕ್ಕೆ ಬೇರೆ ಎಲ್ಲಾ ಕೆಲಸ ನಿಲ್ಲಿಸಿ ಬ್ಯಾಟರಿ ಶಕ್ತಿ ಮೂಲಕ ರೋವರ್ & ಲ್ಯಾಂಡರ್‌ಗೆ ನಿದ್ದೆ ಮಾಡಿಸಿ ಹೀಟರ್ ಸೌಲಭ್ಯ ನೀಡಲಾಗಿತ್ತು.












Click it and Unblock the Notifications