NVS-03: ಉಡಾವಣೆಗೆ ಸಜ್ಜಾದ ಎನ್ವಿಎಸ್-03: ಅಕ್ಟೋಬರ್ 30ಕ್ಕೆ ಮರಳಲಿದೆ ಭಾರತದ ನಾವಿಕ!
ಅಕ್ಟೋಬರ್ 30ರಂದು, ಭಾರತದ ನೆಲದಿಂದ ಚಿಮ್ಮಲಿರುವ ರಾಕೆಟ್ ಒಂದು ಉಪಗ್ರಹಕ್ಕಿಂತ ಬಹಳಷ್ಟು ಹೆಚ್ಚಿನದೇನನ್ನೋ ಹೊತ್ತು ಸಾಗಲಿದೆ. ರಾಕೆಟ್ ಬೆನ್ನಲ್ಲಿ ಎನ್ವಿಎಸ್-03 ಎನ್ನುವ ಇಸ್ರೋದ ನೂತನ ತಲೆಮಾರಿನ ಮೂರನೇ ಸಂಚರಣಾ (ನ್ಯಾವಿಗೇಶನ್) ಉಪಗ್ರಹ ಬಾಹ್ಯಾಕಾಶಕ್ಕೆ ತೆರಳಲಿದ್ದು, ಈ ಮೂಲಕ ಭಾರತದ ಸ್ವಂತ ಪೊಸಿಷನಿಂಗ್ ವ್ಯವಸ್ಥೆಯಾದ ನಾವಿಕ್ ಮರಳಿ ಚಾಲನೆಗೊಳ್ಳುವ ನಿರೀಕ್ಷೆಗಳು ಗರಿಗೆದರಿವೆ. ಸದ್ಯದ ಮಟ್ಟಿಗೆ ನಾವಿಕ್ ವ್ಯವಸ್ಥೆ ಜನರಿಗೆ ಅವರು ಎಲ್ಲಿದ್ದಾರೆ ಎನ್ನುವುದನ್ನಷ್ಟೇ ಹೇಳಬಲ್ಲದು. ಆದರೆ, ಇನ್ನೊಂದು ಉಪಗ್ರಹದ ಯಶಸ್ವಿ ಉಡಾವಣೆಯಾದರೆ, ಈ ಪರಿಸ್ಥಿತಿ ಬದಲಾಗಲಿದೆ.
ಇದಕ್ಕಿರುವ ಕಾರಣ ಸರಳ ಅಂಕಗಣಿತದ್ದು. ಒಂದು ನ್ಯಾವಿಗೇಶನ್ ವ್ಯವಸ್ಥೆ ಭೂಮಿಯ ಮೇಲಿನ ಸರಿಯಾದ ಸ್ಥಾನವನ್ನು ಗುರುತಿಸಲು ಕನಿಷ್ಠ ನಾಲ್ಕು ಆರೋಗ್ಯಕರ ಉಪಗ್ರಹಗಳು ಬೇಕು. ಇಂದು ನಾವಿಕ್ ವ್ಯವಸ್ಥೆ ಐಆರ್ಎನ್ಎಸ್ಎಸ್-1ಬಿ, ಐಆರ್ಎನ್ಎಸ್ಎಸ್-1ಐ ಮತ್ತು ಎನ್ವಿಎಸ್-01 ಎನ್ನುವ ಕೇವಲ ಮೂರು ಉಪಗ್ರಹಗಳನ್ನು ಮಾತ್ರವೇ ಹೊಂದಿದೆ. ಈ ಉಪಗ್ರಹ ಪುಂಜ ಈಗ ಸ್ವಾವಲಂಬಿಯಾಗಿ ಸ್ಥಾನೀಯ ಸೇವೆಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಈ ವರ್ಷಾರಂಭದಲ್ಲಿ ಮಾಹಿತಿ ನೀಡಿತ್ತು. ಅತ್ಯಂತ ನಿಖರವಾದ ಕ್ಲಾಕ್ ರೀಡಿಂಗ್ ಒದಗಿಸುವ ಉಪಗ್ರಹದ ಟೈಮಿಂಗ್ ಸಂಕೇತ ಇಂದಿಗೂ ಕಾರ್ಯಾಚರಿಸುತ್ತಿದೆ. ಆದರೆ, ಜನರಿಗೆ ಹಾದಿ ತೋರಿಸಲು ನಿರ್ಮಿಸಿದ ವ್ಯವಸ್ಥೆ ಕೇವಲ ಅಷ್ಟನ್ನೇ ಒದಗಿಸಿದರೆ ಸಾಕಾಗುವುದಿಲ್ಲವಲ್ಲ? ಆದ್ದರಿಂದ, ಎನ್ವಿಎಸ್-03 ಕಾಣೆಯಾಗಿರುವ ನಾಲ್ಕನೇ ಉಪಗ್ರಹದ ಸ್ಥಾನವನ್ನು ತುಂಬಲಿದೆ. ಮೂಲತಃ ಇದರ ಉಡಾವಣೆಯನ್ನು 2025ರಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಒಂದರ ನಂತರ ಒಂದು ವಿಳಂಬ ಉಂಟಾಗಿ, ಅಂತಿಮ ದಿನಾಂಕ 2026ರಲ್ಲಿ ನಿಗದಿಯಾಯಿತು.

ಈ ವ್ಯವಸ್ಥೆಗೆ ಯಾಕೆ ಇಷ್ಟೊಂದು ಮಹತ್ವವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನಾವು 1999ರತ್ತ ಒಮ್ಮೆ ದೃಷ್ಟಿ ಹಾಯಿಸೋಣ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಆ ಅತ್ಯಂತ ಕಷ್ಟಕರ ಭೂ ಪ್ರದೇಶದಲ್ಲಿ ಹೋರಾಡುತ್ತಿದ್ದ ಭಾರತೀಯ ಯೋಧರಿಗೆ ಅತ್ಯಂತ ನಿಖರವಾದ ಸ್ಥಳದ ಮಾಹಿತಿ ಬೇಕಾಗಿತ್ತು. ಆದರೆ, ಆ ಸೇವೆ ನೀಡುತ್ತಿದ್ದ ಅಮೆರಿಕದ ಜಿಪಿಎಸ್ ಅವರಿಗೆ ಅಲಭ್ಯವಾಗಿತ್ತು. ಆ ಪರಿಸ್ಥಿತಿ ಭಾರತಕ್ಕೆ ತಾನು ಸ್ಥಾನವನ್ನು ಗುರುತಿಸುವಂತಹ ಮೂಲಭೂತ ಕಾರ್ಯಗಳಿಗೂ ವಿದೇಶಗಳ ಮೇಲೆ ಅವಲಂಬನೆ ಹೊಂದಬಾರದು ಎನ್ನುವ ಅರಿವು ಮೂಡಿಸಿತು. ಆ ನಿರ್ಧಾರದ ಪರಿಣಾಮವಾಗಿ, ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್ಸ್ಟಲೇಶನ್ ಅಥವಾ ನಾವಿಕ್, ಅಧಿಕೃತವಾಗಿ ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ ಅಥವಾ ಐಆರ್ಎನ್ಎಸ್ಎಸ್ ರೂಪು ತಳೆಯಿತು.
ಇದರ ವಿನ್ಯಾಸ ನಿಜಕ್ಕೂ ಮಹತ್ವಾಕಾಂಕ್ಷಿಯಾಗಿತ್ತು. ಏಳು ಉಪಗ್ರಹಗಳು ಭಾರತದ ಸಂಪೂರ್ಣ ಭೂ ಪ್ರದೇಶವನ್ನು, ಅದಲ್ಲದೆ, ಭಾರತದ ಗಡಿಗಳಾಚೆಗೆ 1,500 ಕಿಲೋಮೀಟರ್ ತನಕ ಬಳಕೆದಾರರ ಸ್ಥಾನವನ್ನು ಗರಿಷ್ಠ 10 ಮೀಟರ್ ಒಳಗೆ ಗುರುತಿಸುವ ಉದ್ದೇಶ ಹೊಂದಿತ್ತು. ಈ ಸಾರ್ವಜನಿಕ ಬಳಕೆ ಉಚಿತವಾಗಿದ್ದರೆ, ಹೆಚ್ಚು ನಿಖರವಾದ, ಶುಲ್ಕ ಆಧಾರಿತ ಪದರವನ್ನು ಭಾರತದ ಸಶಸ್ತ್ರ ಪಡೆಗಳಿಗೆ ಮತ್ತು ಪ್ರಮುಖ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸುವವರಿಗೆ ಮೀಸಲಿಡಲಾಯಿತು. ನಾವಿಕ್ ಉಪಗ್ರಹಗಳು ನೇರವಾಗಿ ನಮ್ಮ ಮೇಲೆ, ಸಾಕಷ್ಟು ಎತ್ತರದಲ್ಲಿರುವುದರಿಂದ, ಅವುಗಳ ಸಂಕೇತಗಳು ಆಳವಾದ ಕಣಿವೆಗಳು, ದಟ್ಟ ಕಾಡುಗಳನ್ನೂ ತಲುಪಬಲ್ಲವು. ಆದರೆ, ಕೊಂಚ ಓರೆಯಾಗಿ ಬರುವ ಜಿಪಿಎಸ್ ಸಂಕೇತಗಳು ಅಲ್ಲಿಗೆ ಸುಲಭವಾಗಿ ತಲುಪಲಾರವು. ವರದಿಗಳ ಪ್ರಕಾರ, ಭಾರತೀಯ ರೈಲ್ವೇ ತನ್ನ ಎಲ್ಲ 12,000 ರೈಲುಗಳನ್ನೂ ನೈಜ ಸಮಯದಲ್ಲಿ ಗಮನಿಸಲು ಯೋಜಿಸಿದ್ದು, 8,700 ರೈಲುಗಳು ಈಗಾಗಲೇ ಈ ವ್ಯವಸ್ಥೆಯನ್ನು ಹೊಂದಿವೆ.
2,250 ಕೋಟಿ ರೂ. ವೆಚ್ಚ
ಹಾಗಾದರೆ ಸಮಸ್ಯೆ ಆಗಿರುವುದು ಎಲ್ಲಿ? ಜುಲೈ 2013ರ ಬಳಿಕ, ಇಸ್ರೋ ಬಹುತೇಕ 2,250 ಕೋಟಿ ರೂಪಾಯಿ ವೆಚ್ಚದಲ್ಲಿ 11 ಸಂಚರಣಾ ಉಪಗ್ರಹಗಳನ್ನು ಉಡಾವಣೆಗೊಳಿಸಿದೆ. ಆದರೆ, ಅವುಗಳ ಪೈಕಿ ಆರು ವಿಫಲವಾಗಿವೆ. ಇದಕ್ಕೆ ಮುಖ್ಯ ಕಾರಣ ಅಟಾಮಿಕ್ ಕ್ಲಾಕ್. ಅಟಾಮಿಕ್ ಕ್ಲಾಕ್ ಎಂದರೆ ಅತ್ಯಂತ ನಿಖರವಾದ ಸ್ಟಾಪ್ ವಾಚ್ ಎಂದು ಭಾವಿಸಿ. ಅದು ರೇಡಿಯೋ ಸಂಕೇತಗಳು ಬಾಹ್ಯಾಕಾಶದಿಂದ ಭೂಮಿಗೆ ತಲುಪಲು ತೆಗೆದುಕೊಳ್ಳುವ ಸಣ್ಣ ಸಮಯವನ್ನೂ ಲೆಕ್ಕ ಹಾಕಿ, ಅದನ್ನು ಬೆಳಕಿನ ವೇಗದೊಡನೆ ಗುಣಾಕಾರ ಮಾಡಿ, ನಿಮಗೆ ಸಿಗಬೇಕಾದ ಅಂತರವನ್ನು ಒದಗಿಸುತ್ತದೆ. ಆದರೆ, ಆರಂಭಿಕ ಉಪಗ್ರಹಗಳಲ್ಲಿ ಅಳವಡಿಸಿದ್ದ ವಿದೇಶೀ ಆಮದು ಅಟಾಮಿಕ್ ಕ್ಲಾಕ್ಗಳು ವಿಫಲವಾದಾಗ, ಆ ಉಪಗ್ರಹಗಳೇ ಕುರುಡಾದವು. ಇನ್ನುಳಿದವು ಸರಿಯಾದ ಕಕ್ಷೆಯಲ್ಲಿ ಅಳವಡಿಕೆಯಾಗಲಿಲ್ಲ. ಇನ್ನು ಮೊದಲ ಹಂತದ ಬಹುತೇಕ ಉಪಗ್ರಹಗಳು ತಮ್ಮ ಹತ್ತು ವರ್ಷಗಳ ಕಾರ್ಯಾಚರಣಾ ಆಯುಷ್ಯವನ್ನು ಪೂರ್ಣಗೊಳಿಸಿವೆ.
2018ರಲ್ಲಿ ಸಾರ್ವಜನಿಕ ಹಣದ ವೆಚ್ಚವನ್ನು ಲೆಕ್ಕ ಹಾಕುವ ಲೆಕ್ಕ ಪರಿಶೋಧಕರಾದ ಸಿಎಜಿ ವರದಿಯೊಂದು ನೋವಿನ ವಿಚಾರವನ್ನು ದಾಖಲಿಸಿತ್ತು. ಐಆರ್ಎನ್ಎಸ್ಎಸ್-1ಎ ಉಪಗ್ರಹ 2013ರಲ್ಲೇ ಬಾಹ್ಯಾಕಾಶಕ್ಕೆ ತಲುಪಿ, ಕಾರ್ಯಾಚರಿಸಲು ಬೇಕಾದ ಕನಿಷ್ಠ ನಾಲ್ಕು ಉಪಗ್ರಹಗಳನ್ನು 2015ರಲ್ಲೇ ಸಾಧಿಸಿದರೂ, ಫೋನ್ಗಳಲ್ಲಿ ನಾವಿಕ್ ಸಂಕೇತಗಳನ್ನು ಸ್ವೀಕರಿಸುವ ರಿಸೀವ್ ಚಿಪ್ಗಳೆನ್ನುವ ಹಾರ್ಡ್ವೇರ್ಗಳ ಕಾರ್ಯ 2017ರಲ್ಲಷ್ಟೇ ಆರಂಭಗೊಂಡಿತು. ಉಪಗ್ರಹಗಳ ಜೀವನದ ಮೌಲ್ಯಯುತ ಅವಧಿ ಕೇಳುವ ಉಪಕರಣಗಳಿಲ್ಲದೆಯೇ ಪ್ರಸಾರ ನಡೆಸುವುದರಲ್ಲಿ ಕಳೆದಿತ್ತು.
ಬಳಿಕ ಎರಡು ಪರ್ಯಾಯ ಉಪಗ್ರಹ ಯೋಜನೆಗಳು ವಿಫಲವಾದವು. ಒಂದರಲ್ಲಿ, ಇಸ್ರೋದ ನಂಬಿಕಾರ್ಹ ಪಿಎಸ್ಎಲ್ವಿ ರಾಕೆಟ್ ಆದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಹೊಂದಿದ್ದ ಉಷ್ಣತಾ ಕವಚದ ತೊಂದರೆಯ ಕಾರಣದಿಂದ ಐಆರ್ಎನ್ಎಸ್ಎಸ್-1ಎಚ್ ಉಪಗ್ರಹವನ್ನು ಬಿಡುಗಡೆಗೊಳಿಸಲು ಸಾಧ್ಯವಾಗಲಿಲ್ಲ. ಈ ಕವಚ ಮೇಲೇರುವ ಹಂತದಲ್ಲಿ ಅಪಾರ ಉಷ್ಣತೆಯಿಂದ ಉಪಗ್ರಹವನ್ನು ರಕ್ಷಿಸುವ ಸಲುವಾಗಿದ್ದು, ಅದು ತೆರೆದುಕೊಳ್ಳಲು ವಿಫಲವಾಯಿತು. ಇನ್ನೊಂದು ಯೋಜನೆಯಲ್ಲಿ, ಎನ್ವಿಎಸ್-02 ಉಪಗ್ರಹ ಅದರ ದೀರ್ಘವಾದ ಟ್ರಾನ್ಸ್ಫರ್ ಕಕ್ಷೆಯನ್ನು ತಲುಪಿತ್ತು. ಟ್ರಾನ್ಸ್ಫರ್ ಕಕ್ಷೆ ಎನ್ನುವುದು ಅಂಡಾಕಾರದ ತಾತ್ಕಾಲಿಕ ಪಥವಾಗಿದ್ದು, ಅಲ್ಲಿಂದ ಉಪಗ್ರಹ ತನ್ನ ಅಂತಿಮ ಸ್ಥಾನಕ್ಕೆ ಸ್ವತಃ ತೆರಳುತ್ತದೆ. ಆದರೆ, ಇಲ್ಲಿ ಉಪಗ್ರಹದ ಇಂಜಿನ್ ಚಾಲನೆಗೊಳ್ಳಲಿಲ್ಲ. ತನಿಖಾದಾರರು ಇಂಧನ ಉರಿಸಲು ಆಕ್ಸಿಡೈಸರ್ ಪೂರೈಕೆಯನ್ನು ಒದಗಿಸುವ ಪೈರೋ ವಾಲ್ವ್ ಎನ್ನುವ ಸಣ್ಣ ಉಪಕರಣದ ವೈಫಲ್ಯದಿಂದ ಹೀಗಾಯಿತು ಎಂದಿದ್ದಾರೆ. ಒಂದು ಇಲೆಕ್ಟ್ರಿಕಲ್ ಸಂಕೇತ ಪೈರೋ ವಾಲ್ವ್ ಅನ್ನು ತಲುಪಲೇ ಇಲ್ಲ. ಇದಕ್ಕೆ ಕನೆಕ್ಟರ್ ಹೊಂದಿದ್ದ ಏಕೈಕ ಸಂಪರ್ಕ ಸಡಿಲವಾಗಿದ್ದು ಕಾರಣವಾಗಿದ್ದಿರಬಹುದು ಎನ್ನಲಾಗಿದೆ. ಒಂದು ಸಡಿಲವಾದ ಪಿನ್ಗೆ ಸಂಪೂರ್ಣ ಯೋಜನೆಯನ್ನೇ ಕಳೆದುಕೊಳ್ಳುವುದು ಬಹಳ ಕಠಿಣ ಪಾಠವಾಗಿದ್ದು, ಇಂಜಿನಿಯರ್ಗಳು ಅಂದಿನಿಂದ ಪ್ರೊಪಲ್ಷನ್ ವ್ಯವಸ್ಥೆಯನ್ನು ಸಾಕಷ್ಟು ಸಮರ್ಪಕವಾಗಿ ಪರಿಶೀಲನೆಗೆ ಒಳಪಡಿಸುತ್ತಾರೆ.
ನೂತನ ಎನ್ವಿಎಸ್ ಉಪಗ್ರಹಗಳು ಒಂದಷ್ಟು ಗೆಲುವನ್ನು ಹೊತ್ತು ಸಾಗಲಿವೆ. ಅವುಗಳ ಅಟಾಮಿಕ್ ಕ್ಲಾಕ್ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬದಲು, ಭಾರತದಲ್ಲೇ ನಿರ್ಮಿಸಲಾಗಿದೆ. ಅವುಗಳು ಹತ್ತು ವರ್ಷಗಳ ಬದಲಿಗೆ, 12 ವರ್ಷಗಳ ಕಾಲ ಕಾರ್ಯಾಚರಿಸಲಿವೆ. ಅವು ಎಲ್1, ಎಲ್5, ಮತ್ತು ಎಸ್ ಬ್ಯಾಂಡ್ಗಳೆನ್ನುವ ಮೂರು ರೇಡಿಯೋ ಫ್ರೀಕ್ವೆನ್ಸಿಗಳಲ್ಲಿ ಮಾಹಿತಿ ನೀಡಲಿವೆ. ಆದರೆ, ಹಳೆಯವು ಕೇವಲ ಎಲ್5 ಮತ್ತು ಎಸ್ ಬ್ಯಾಂಡ್ಗಳನ್ನು ಬಳಸುತ್ತಿದ್ದವು. ಎಲ್1 ಬ್ಯಾಂಡನ್ನು ಜಿಪಿಎಸ್ ಈಗ ಜಾಗತಿಕವಾಗಿ ಬಳಸುತ್ತಿದ್ದು, ನಾವಿಕ್ ಸೇವೆ ಈಗ ಸ್ಮಾರ್ಟ್ ವಾಚ್ಗಳು ಮತ್ತು ಸಾಧಾರಣ ಹ್ಯಾಂಡ್ಸೆಟ್ಗಳಲ್ಲಿ ಬಳಕೆಯಾಗುವ ಚಿಪ್ಗಳಲ್ಲೂ ಕಾರ್ಯಾಚರಿಸಲಿದೆ.
ಕಾರ್ಯಾಚರಣೆ ಹೇಗೆ?
ಜಾಗತಿಕವಾಗಿ, ಭಾರತವೂ ಗಮನಾರ್ಹ ಸ್ಥಾನದಲ್ಲಿದೆ. ಜಿಪಿಎಸ್ 32 ಉಪಗ್ರಹಗಳನ್ನು ಬಳಸುತ್ತಿದ್ದರೆ, ರಷ್ಯಾದ ಗ್ಲೊನಾಸ್ 24, ಯುರೋಪಿನ ಗೆಲಿಲಿಯೋ 27, ಹಾಗೂ ಚೀನಾದ ಬೈದು 30 ಉಪಗ್ರಹಗಳನ್ನು ಬಳಸುತ್ತಿವೆ. ಬೈದು ಹೊರತುಪಡಿಸಿ, ಮಿಕ್ಕೆಲ್ಲವೂ 19,000ದಿಂದ 24,000 ಕಿಲೋಮೀಟರ್ ಎತ್ತರದಲ್ಲಿರುವ ಮೀಡಿಯಂ ಅರ್ತ್ ಕಕ್ಷೆಯಲ್ಲಿ ಕಾರ್ಯಾಚರಿಸುತ್ತಿವೆ. ಬೈದು ಹೆಚ್ಚು ಎತ್ತರದ ಕಕ್ಷೆಗಳಲ್ಲಿ ಕಾರ್ಯಾಚರಿಸುತ್ತಿದೆ. ಜಪಾನಿನ ನಾಲ್ಕು ಉಪಗ್ರಹಗಳ ಕ್ಯುಜೆ಼ಡ್ಎಸ್ಎಸ್ ವ್ಯವಸ್ಥೆಯೂ ಎತ್ತರದ ಕಕ್ಷೆಗಳಲ್ಲಿ ಕಾರ್ಯಾಚರಿಸುತ್ತಿದ್ದು, ಏಷ್ಯಾ ಮತ್ತು ಓಶಾನಿಯಾಗಳಲ್ಲಿ ಜಿಪಿಎಸ್ ಅನ್ನು ಬಲಪಡಿಸುತ್ತಿದೆ. ನಾವಿಕ್ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುವ ಕುರಿತು ಇನ್ನೂ ಮಾತುಕತೆಗಳಾಗಿಲ್ಲ. ಸದ್ಯದ ಮಟ್ಟಿಗೆ ಸಮಸ್ತ ಭಾರತ ಅಕ್ಟೋಬರ್ 30ರಂದು ಒಂದು ಯಶಸ್ವಿ ಉಡಾವಣೆಯನ್ನು ನಿರೀಕ್ಷಿಸುತ್ತಿದೆ.
ಗಿರೀಶ್ ಲಿಂಗಣ್ಣ..
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])


Click it and Unblock the Notifications
