ಐಎಸ್‌ಐಎಸ್‌ಗೆ ಯುವಕರ ನೇಮಕಕ್ಕೆ ಕೆಲಸದ ಆಮಿಷ!
ಬೆಂಗಳೂರು, ಜನವರಿ 25 : ಇಸ್ಲಾಮಿಕ್ ಸ್ಟೇಟ್ ಆಫ್-ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಉಗ್ರ ಸಂಘಟನೆಗೆ ಕಾರ್ಪೊರೇಟ್ ಶೈಲಿಯಲ್ಲಿಯೇ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಯುವಕರಿಗೆ ಕೆಲಸ ಮತ್ತು ಉತ್ತಮ ವೇತನದ ಆಮಿಷ ವೊಡ್ಡಲಾಗುತ್ತಿತ್ತು ಎಂಬುದು ಎನ್‌ಐಎ ತನಿಖೆಯಿಂದ ಬಹಿರಂಗವಾಗಿದೆ.
ದೇಶದ ವಿವಿಧ ನಗರಗಳಲ್ಲಿ ದಾಳಿ ನಡೆಸಿ, ಶಂಕಿತ ಉಗ್ರರನ್ನು ವಶಕ್ಕೆ ಪಡೆದಿರುವ ರಾಷ್ಟ್ರೀಯ ತನಿಖಾ ದಳ ಉಗ್ರರ ವಿಚಾರಣೆ ನಡೆಸಿ ಹಲವಾರು ಮಾಹಿತಿಗಳನ್ನು ಸಂಗ್ರಹಣೆ ಮಾಡಿದೆ. ವಿವಿಧ ವೆಬ್‌ಸೈಟ್‌ಗಳಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕುವ ಯುವಕರನ್ನು ಶಂಕಿತ ಉಗ್ರರು ಸೆಳೆಯುತ್ತಿದ್ದರು. [ಉಗ್ರರಿಗೆ ಮುಂಬೈನಿಂದ ಸೂಚನೆ ಸಿಗುತ್ತಿತ್ತು]

ಕಾರ್ಪೊರೇಟ್ ಶೈಲಿಯಲ್ಲಿಯೇ ಯುವಕರನ್ನು ಸಂಘಟನೆಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆನ್‌ಲೈನ್ ಮೂಲಕ ಯುವಕರನ್ನು ಸಂಪರ್ಕಿಸುತ್ತಿದ್ದ ಉಗ್ರರು, ಕೆಲಸದ ಆಮಿಷ ಮತ್ತು ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಎರಡು ತಂತ್ರಗಳ ಮೂಲಕ ಯುವಕರನ್ನು ಸಂಘಟನೆಯತ್ತ ಸೆಳೆಯುತ್ತಿದ್ದರು. [ಉಗ್ರರ ಬಳಿ ಸುಧಾರಿತ ಸ್ಫೋಟಕ ಪತ್ತೆ]
ವಿವಿಧ ಉದ್ಯೋಗದ ವೆಬ್‌ಸೈಟ್‌ಗಳ ಮೂಲಕ ಯುವಕರ ವಿವರಗಳನ್ನು ಸಂಗ್ರಹಿಸುತ್ತಿದ್ದ ಉಗ್ರರು ಟರ್ಕಿ, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿ ಉತ್ತಮ ವೇತನದ ಕೆಲಸ ಕೊಡಿಸುವ ಆಮಿಷವೊಡುತ್ತಿದ್ದರು. ಯುವಕರು ವಿದೇಶಕ್ಕೆ ಹೋಗಲು ಅವರೇ ನೆರವು ನೀಡುತ್ತಿದ್ದರು. [ನನ್ನ ಮಗ ಉಗ್ರನಲ್ಲ, ಅಮಾಯಕ : ತಾಯಿಯ ಕರುಳು]
ಒಮ್ಮೆ ಯುವಕರು ಸೌದಿ ಅರೇಬಿಯಾ ಅಥವ ಟರ್ಕಿ ತಲುಪಿದರೆ ಅಲ್ಲಿಂದ ಅವರನ್ನು ಇರಾಕ್ ಮತ್ತು ಸಿರಿಯಾಕ್ಕೆ ಕಳುಹಿಸಲಾಗುತ್ತಿತ್ತು. ವಿದೇಶಕ್ಕೆ ತೆರಳಿದ ಬಳಿಕ ಕೆಲವು ಯುವಕರನ್ನು ಒತ್ತಾಯ ಪೂರ್ವಕವಾಗಿಯೂ ಸಂಘಟನೆಗೆ ಸೇರಿಸಲಾಗುತ್ತಿತ್ತು.
ದೇಶಾದ್ಯಂತ ಶುಕ್ರವಾರ ಎನ್‌ಐಎ ನಡೆಸಿದ ಕಾರ್ಯಾಚರಣೆಯಲ್ಲಿ ಐಎಸ್‍ಐಎಸ್ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿದ್ದ 14ಕ್ಕೂ ಹೆಚ್ಚು ಶಂಕಿತ ಉಗ್ರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇವರಲ್ಲಿ 5 ಉಗ್ರರನ್ನು ಬಂಧಿಸಲಾಗಿದೆ. ಕರ್ನಾಟಕದ ಮಂಗಳೂರು ಮತ್ತು ತುಮಕೂರಿನಲ್ಲಿಯೂ ಶಂಕಿತ ಉಗ್ರರನ್ನು ಎನ್‌ಐಎ ಬಂಧಿಸಿದೆ.












Click it and Unblock the Notifications