Inspiring: 27 ವರ್ಷಗಳ ಹೋರಾಟ, 26 ಬಾರಿ ಸೋಲು: 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆದ ವಿಜಯ್ ಕುಮಾರ್!

ವಿಜಯ್ ಕುಮಾರ್ ಶರ್ಮಾ ಅವರಿಗೆ ಸರ್ಕಾರಿ ಶಾಲೆಯ ಶಿಕ್ಷಕನಾಗಬೇಕು ಎಂಬುದು ಕೇವಲ ಒಂದು ಆಸೆಯಾಗಿರಲಿಲ್ಲ, ಅದೊಂದು ಅವರ ಜೀವಮಾನದ ಕನಸಾಗಿತ್ತು. ಬರೋಬ್ಬರಿ ನಾಲ್ಕು ದಶಕಗಳ ಕಾಲ ಖಾಸಗಿ ಶಾಲೆಗಳಲ್ಲಿಯೇ ಪಾಠ ಮಾಡಿ ಅವರು ಒಳ್ಳೆಯ ಅನುಭವವನ್ನ ಹೊಂದಿದ್ದರು. ಆದರೆ, ಸರ್ಕಾರಿ ಕೆಲಸದ ಮೇಲಿನ ಒಲವು ಹಾಗೂ ಗೌರವ ಮಾತ್ರ ಅವರಲ್ಲಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ.

ತಮ್ಮ 27 ವರ್ಷಗಳ ಸುದೀರ್ಘ ಪಯಣದಲ್ಲಿ ಅವರು ಅನುಭವಿಸಿದ ಕಷ್ಟಗಳು ಮಾತ್ರ ಅಷ್ಟಿಷ್ಟಲ್ಲ ನೋಡಿ. ಏಕೆಂದರೆ, ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದ ವಿಜಯ್ ಅವರ ಮೇಲೆ ಏಳು ಜನರ ದೊಡ್ಡ ಕುಟುಂಬದ ಜವಾಬ್ದಾರಿ ಇತ್ತು. ಐದು ಮಕ್ಕಳ ವಿದ್ಯಾಭ್ಯಾಸದ ಖರ್ಚು, ದೈನಂದಿನ ಜೀವನ ನಿರ್ವಹಣೆ ಮಾಡುವುದು ಸುಲಭದ ಮಾತಾಗಿರಲಿಲ್ಲ.

Inspiring Vijay Kumar Sharma Gets Government Teaching Job At 59 After 27 Years And 26 Attempts

ಎಷ್ಟೇ ಆರ್ಥಿಕ ಸಮಸ್ಯೆ ಎದುರಾದಾಗಲೂ ಅವರು ತಮ್ಮ ಕರ್ತವ್ಯದಿಂದ ಹಾಗೂ ಕನಸಿನಿಂದ ಹಿಂದೆ ಸರಿಯಲಿಲ್ಲ. ಇಂದಿಗೂ ಅವರು ತಮ್ಮ ವಿದ್ಯಾರ್ಥಿಗಳಿಗೆ ಸಂಸ್ಕೃತ ಹಾಗೂ ಹಿಂದಿ ಭಾಷೆಯನ್ನ ಬೋಧಿಸಲು ಪ್ರತಿದಿನ 10 ಕಿಲೋಮೀಟರ್ ಸೈಕಲ್ ತುಳಿದುಕೊಂಡೇ ಶಾಲೆಗೆ ಹೋಗುತ್ತಾರೆ. ಮಳೆ, ಚಳಿ, ಬಿಸಿಲು ಎನ್ನದೆ ಅವರು ತೋರಿದ ಈ ಬದ್ಧತೆ ಹಾಗೂ ಶ್ರದ್ಧೆ ನಿಜಕ್ಕೂ ಇಂದಿನ ಯುವಜನತೆಗೆ ಮಾದರಿ.

ಸಂದರ್ಶನದಲ್ಲಿ 26 ಬಾರಿ ಸೋಲು: ಆದರೂ ಕುಗ್ಗದ ಆತ್ಮವಿಶ್ವಾಸ

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವ ಹಾದಿ ವಿಜಯ್ ಅವರಿಗೆ ಎಂದಿಗೂ ಹೂವಿನ ಹಾಸಿಗೆಯಾಗಿರಲಿಲ್ಲ. ಅನೇಕ ಬಾರಿ ಅವರು ಪರೀಕ್ಷೆಯಲ್ಲಿ ಬರೆದಾಗ ಬಹಳ ಸುಲಭವಾಗಿ ತೇರ್ಗಡೆಯಾಗುತ್ತಿದ್ದರು. ಅವರ ಜ್ಞಾನ ಮತ್ತು ವಿಷಯದ ಮೇಲಿನ ಹಿಡಿತ ಅಷ್ಟು ಅದ್ಭುತವಾಗಿತ್ತು. ಆದರೆ, ಪ್ರತಿ ಬಾರಿಯೂ ಸಂದರ್ಶನದ ಹಂತದಲ್ಲಿ ಅವರಿಗೆ ನಿರಾಸೆ ಆಗುತ್ತಿತ್ತು.

ಒಂದಲ್ಲ, ಎರಡಲ್ಲ, ಬರೋಬ್ಬರಿ 26 ಬಾರಿ ಅವರು ಸಂದರ್ಶನದಲ್ಲಿ ಫೇಲ್‌ ಆದರು. ಸತತ ಸೋಲುಗಳಿಂದಾಗಿ ಸಾಮಾನ್ಯ ಮನುಷ್ಯನಾಗಿದ್ದರೆ ಎಂದೋ ಹತಾಶನಾಗಿ ಕುಳಿತುಬಿಡುತ್ತಿದ್ದ. ಅವರ ಕುಟುಂಬದವರೇ ಒಂದು ಹಂತದಲ್ಲಿ ಈ ನಿರಂತರ ಹೋರಾಟವನ್ನ ನೋಡಿ ಬೇಸತ್ತು, "ಇನ್ನು ಈ ಪ್ರಯತ್ನವನ್ನು ಕೈಬಿಡು, ವಯಸ್ಸಾಗುತ್ತಿದೆ, ಇರುವ ಕೆಲಸವನ್ನೇ ನೆಮ್ಮದಿಯಾಗಿ ಮಾಡಿಕೊಂಡಿರು" ಎಂದು ಹೇಳಿದ್ದರು.

ಆದರೆ, ಸೋಲನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಛಲಗಾರ ವಿಜಯ್ ಕುಮಾರ್ ಶರ್ಮಾ, ಪ್ರತಿ ವರ್ಷವೂ ಹೊಸ ಭರವಸೆಯೊಂದಿಗೆ ಸರ್ಕಾರಿ ಹುದ್ದೆಗಾಗಿ ಅರ್ಜಿ ಫಾರ್ಮ್ ತುಂಬುತ್ತಲೇ ಇದ್ದರು. ಯಾರೇ ಏನೇ ಅಂದರೂ, ತಮ್ಮ ಮೇಲಿನ ನಂಬಿಕೆಯನ್ನ ಅವರು ಎಂದಿಗೂ ಕಳೆದುಕೊಳ್ಳಲಿಲ್ಲ.

59ನೇ ವಯಸ್ಸಿನಲ್ಲಿ ಒಲಿದ ಸರ್ಕಾರಿ ಶಿಕ್ಷಕ ಹುದ್ದೆ

ಕೊನೆಗೂ ಅವರ 27 ವರ್ಷಗಳ ಸತತ ಪ್ರಯತ್ನ, ಛಲ ಹಾಗೂ ಕಠಿಣ ತಪಸ್ಸಿಗೆ ಪ್ರತಿಫಲ ದೊರೆತೇ ಬಿಟ್ಟಿತು. ಉತ್ತರ ಪ್ರದೇಶದ ಯುಪಿ ಟಿಜಿಟಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗುವ ಮೂಲಕ ವಿಜಯ್ ಕುಮಾರ್ ಶರ್ಮಾ ಅವರು ತಮ್ಮ 59ನೇ ವಯಸ್ಸಿನಲ್ಲಿ ಅದ್ರಲ್ಲೂ ನಿಖರವಾಗಿ ಹೇಳಬೇಕೆಂದರೆ 59 ವರ್ಷ ಮತ್ತು 7 ತಿಂಗಳಲ್ಲಿ ಸರ್ಕಾರಿ ಶಿಕ್ಷಕ ಹುದ್ದೆಯನ್ನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಕಾರಿ ನಿಯಮಾವಳಿಗಳ ಪ್ರಕಾರ, ಅವರಿಗೆ ನಿವೃತ್ತಿಯಾಗಲು ಇನ್ನು ಕೇವಲ ಎರಡು ವರ್ಷಗಳಿಗಿಂತ ಸ್ವಲ್ಪ ಹೆಚ್ಚು ಸಮಯವಷ್ಟೇ ಬಾಕಿ ಉಳಿದಿದೆ. ಅನೇಕರು 'ಕೇವಲ ಎರಡು ವರ್ಷಕ್ಕಾಗಿ ಇಷ್ಟೊಂದು ಕಷ್ಟಪಡಬೇಕಿತ್ತಾ?' ಎಂದು ಆಶ್ಚರ್ಯಪಡಬಹುದು.

ಆದರೆ ವಿಜಯ್ ಅವರಿಗೆ ಈ ಎರಡು ವರ್ಷಗಳ ಸೇವಾವಧಿಯೇ ಇಡೀ ಜೀವನದ ಸಂಪೂರ್ಣ ತೃಪ್ತಿಯನ್ನ ತಂದುಕೊಟ್ಟಿದೆ. ಏಕೆಂದರೆ, ಇಡೀ ಜೀವನವನ್ನು ಇತರರಿಗೆ ವಿದ್ಯೆ ದಾನ ಮಾಡಲು ಮುಡಿಪಾಗಿಟ್ಟ ಅವರಿಗೆ, ತಾವು ಜೀವಮಾನವಿಡೀ ಬೆನ್ನಟ್ಟಿದ್ದ ಕನಸಿನ ಹುದ್ದೆಯಲ್ಲಿ ಒಂದು ದಿನವಾದರೂ ಕೆಲಸ ಮಾಡಬೇಕು ಎಂಬ ಬಯಕೆ ಇತ್ತು. ಅದು ಈಗ ನನಸಾಗಿದೆ.

ನಿರಂತರ ಪ್ರಯತ್ನವಿದ್ದರೆ, ಛಲವಿದ್ದರೆ ಯಾವುದೇ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ವಿಜಯ್ ಕುಮಾರ್ ಶರ್ಮಾ ಅವರ ಈ ಬದುಕೇ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+