ಭಾರತದ ಪತ್ರಿಕಾ ಉದ್ಯಮಕ್ಕೆ ಹೊಸ ಸಂಕಷ್ಟ: ನ್ಯೂಸ್ ಪ್ರಿಂಟ್ ಕೊರತೆ, ಐಎನ್‌ಎಸ್ ಹೇಳಿದ್ದೇನು
ನವದೆಹಲಿ: ಭಾರತದ ಪತ್ರಿಕಾ ಉದ್ಯಮಕ್ಕೆ ಬೆನ್ನೆಲುಬಾಗಿರುವ ನ್ಯೂಸ್‌ಪ್ರಿಂಟ್ (ಸುದ್ದಿ ಕಾಗದ) ಪೂರೈಕೆಯಲ್ಲಿ ಉಂಟಾಗಿರುವ ನಿರಂತರ ಕೊರತೆಯ ಬಗ್ಗೆ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (INS) ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ದೇಶೀಯವಾಗಿ ನ್ಯೂಸ್‌ಪ್ರಿಂಟ್ ಉತ್ಪಾದನೆ ಬೇಡಿಕೆಗೆ ತಕ್ಕಂತೆ ಇಲ್ಲದಿರುವುದರಿಂದ, ಪತ್ರಿಕಾ ಪ್ರಕಾಶಕರು ಅನಿವಾರ್ಯವಾಗಿ ವಿದೇಶಿ ಆಮದಿನ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಜಗಜಾಂತರ ವ್ಯತ್ಯಾಸ
ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ ನೀಡಿರುವ ಅಂಕಿಅಂಶಗಳ ಪ್ರಕಾರ, ಭಾರತದ ವಾರ್ಷಿಕ ನ್ಯೂಸ್‌ಪ್ರಿಂಟ್ ಬಳಕೆ ಸುಮಾರು 1.2 ಮಿಲಿಯನ್ ಟನ್‌ಗಳಷ್ಟಿದೆ. ಆದರೆ, ದೇಶದೊಳಗಿನ ಒಟ್ಟು ಉತ್ಪಾದನಾ ಸಾಮರ್ಥ್ಯವು ಕೇವಲ 0.5 ಮಿಲಿಯನ್ ಟನ್‌ಗಳ ಆಸುಪಾಸಿನಲ್ಲಿದೆ. ಇದರರ್ಥ ಭಾರತೀಯ ಗಿರಣಿಗಳು ಒಟ್ಟು ಬೇಡಿಕೆಯ ಶೇಕಡಾ 40 ರಷ್ಟು ಮಾತ್ರ ಪೂರೈಸಲು ಶಕ್ತವಾಗಿವೆ. ಈ ಬೃಹತ್ ಅಂತರವು ದೇಶೀಯ ಪತ್ರಿಕಾ ಉದ್ದಿಮೆಯನ್ನು 'ಕುಂಟಿತʼಗೊಳಿಸುತ್ತಿದೆ ಎಂದು ಐಎನ್ಎಸ್ ಪ್ರಕಟಣೆಯಲ್ಲಿ ಎಚ್ಚರಿಸಿದೆ.

ಈ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ಎರಡು ದಶಕಗಳಿಂದ ನ್ಯೂಸ್‌ಪ್ರಿಂಟ್ ಬೇಡಿಕೆ ಮತ್ತು ಪೂರೈಕೆಯ ನಡುವೆ ದೊಡ್ಡ ಕಂದಕವಿದೆ ಎಂದು ಐಎನ್ಎಸ್ ಗಮನಿಸಿದೆ. ಈ ಅವಧಿಯಲ್ಲಿ ದೇಶದಲ್ಲಿ ನ್ಯೂಸ್‌ಪ್ರಿಂಟ್ ತಯಾರಿಕೆಗಾಗಿ ಯಾವುದೇ ಹೊಸ ಅಥವಾ ಬೃಹತ್ ಪ್ರಮಾಣದ ಕಾರ್ಖಾನೆಗಳು ಸ್ಥಾಪನೆಯಾಗಿಲ್ಲ ಅಥವಾ ಇರುವ ಸಾಮರ್ಥ್ಯವನ್ನು ಗಣನೀಯವಾಗಿ ವಿಸ್ತರಿಸಲಾಗಿಲ್ಲ. "ಈ ರಚನಾತ್ಮಕ ಅಡೆತಡೆಗಳಿಂದಾಗಿ, ಪತ್ರಿಕೆಗಳ ನಿರಂತರ ವಿತರಣೆ ಮತ್ತು ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಲು ಪ್ರಕಾಶಕರು ಆಮದಿನ ಮೇಲೆ ಅತಿಯಾಗಿ ಅವಲಂಬಿತರಾಗಿದ್ದಾರೆ," ಎಂದು ಸಂಸ್ಥೆ ವಿಷಾದಿಸಿದೆ.
ಆಮದಿನ ಅನಿವಾರ್ಯತೆ ಮತ್ತು ಸವಾಲುಗಳು:
ನ್ಯೂಸ್‌ಪ್ರಿಂಟ್ ಆಮದು ಮಾಡಿಕೊಳ್ಳುವುದು ಪ್ರಕಾಶಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಮತ್ತು ಕರೆನ್ಸಿ ಮೌಲ್ಯದ ಏರಿಳಿತಗಳು ಪತ್ರಿಕಾ ಪ್ರಕಾಶಕರ ಲಾಭಾಂಶವನ್ನು ಕುಗ್ಗಿಸುತ್ತಿವೆ. ಆದರೂ, ಜನಸಾಮಾನ್ಯರಿಗೆ ನಿಖರವಾದ ಮಾಹಿತಿ ತಲುಪಿಸಲು ಮತ್ತು ಸಾರ್ವಜನಿಕ ಚರ್ಚೆಗಳನ್ನು ಜೀವಂತವಾಗಿಡಲು ಪತ್ರಿಕೆಗಳ ವಿತರಣೆ ಅತ್ಯಗತ್ಯವಾಗಿದೆ. ಹೀಗಾಗಿ, ಹೆಚ್ಚಿನ ದರ ನೀಡಿಯಾದರೂ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಸರ್ಕಾರದ ಹಸ್ತಕ್ಷೇಪಕ್ಕೆ ಆಗ್ರಹ:
ಡಿಜಿಟಲ್ ಮಾಧ್ಯಮಗಳ ಪೈಪೋಟಿಯ ನಡುವೆಯೂ ಮುದ್ರಣ ಮಾಧ್ಯಮವು ತನ್ನದೇ ಆದ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಆದರೆ, ಇಂತಹ ಮೂಲಭೂತ ಅಗತ್ಯಗಳ ಕೊರತೆಯು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆ ತರಬಹುದು. ಆದ್ದರಿಂದ, ಸರ್ಕಾರವು ನ್ಯೂಸ್‌ಪ್ರಿಂಟ್ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಬೇಕು ಮತ್ತು ದೇಶೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಲು ವಿಶೇಷ ರಿಯಾಯಿತಿಗಳನ್ನು ಘೋಷಿಸಬೇಕು ಎಂಬ ಬೇಡಿಕೆಗಳು ಮತ್ತೆ ಮುನ್ನೆಲೆಗೆ ಬಂದಿವೆ.












Click it and Unblock the Notifications