ಪಿಂಚಣಿ ಯೋಜನೆಗಳಲ್ಲಿ ಇಂದಿರಾ ಗಾಂಧಿ ಹೆಸರು ಔಟ್: ಹೊಸ ಹೆಸರೇನು? ಕೇಂದ್ರ ಸಂಪುಟದ ಮಹತ್ವದ ತೀರ್ಮಾನ
ನವದೆಹಲಿ: ಕೇಂದ್ರ ಸರ್ಕಾರವು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಹೆಸರು ಬದಲಾವಣೆ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP) ಸೇರಿದಂತೆ ಅದರ ಅಡಿಯಲ್ಲಿ ಬರುವ ಹಲವು ಯೋಜನೆಗಳ ಹೆಸರು ಬದಲಾವಣೆಗೆ ಅನುಮೋದನೆ ನೀಡಲಾಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿದ್ದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲಬರ ಪಿಂಚಣಿ ಯೋಜನೆಗಳಿಗೂ ಹೊಸ ಹೆಸರುಗಳನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ, 2026-27ರಿಂದ 2030-31ರವರೆಗೆ ಮುಂದಿನ ಐದು ವರ್ಷಗಳ ಕಾಲ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು ಮುಂದುವರಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಈ ಅವಧಿಯಲ್ಲಿ ಯೋಜನೆಗಾಗಿ ಒಟ್ಟು ₹53,428 ಕೋಟಿ ಅನುದಾನ ಮೀಸಲಿಡಲು ಅನುಮೋದನೆ ನೀಡಲಾಗಿದೆ.

ಯಾವ ಯೋಜನೆಗೆ ಯಾವ ಹೊಸ ಹೆಸರು?
ಕೇಂದ್ರ ಸರ್ಕಾರದ ನಿರ್ಧಾರದಂತೆ, ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ ಹಾಗೂ ಅದರ ಪ್ರಮುಖ ಉಪಯೋಜನೆಗಳಿಗೆ ಹೊಸ ಹೆಸರುಗಳನ್ನು ನಿಗದಿಪಡಿಸಲಾಗಿದೆ.
1. ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP): ಈ ಯೋಜನೆಯನ್ನು ಇನ್ನು ಮುಂದೆ 'ಪ್ರಧಾನ ಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ' (Pradhan Mantri Samajik Sahayata Yojana) ಎಂದು ಕರೆಯಲಾಗುತ್ತದೆ. 1995ರ ಆಗಸ್ಟ್ 15ರಂದು ಆರಂಭವಾದ ಈ ಕಾರ್ಯಕ್ರಮವು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ.
2. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS): ಈ ಯೋಜನೆಯ ಹೆಸರು 'ಪ್ರಧಾನ ಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆ' (Pradhan Mantri Vridhavastha Pension Yojana) ಎಂದು ಬದಲಾಗಲಿದೆ. ಬಡತನ ರೇಖೆಗಿಂತ ಕೆಳಗಿರುವ (BPL) ಅರ್ಹ ಕುಟುಂಬಗಳ ಹಿರಿಯ ನಾಗರಿಕರಿಗೆ ಮಾಸಿಕ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶ.
3. ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ (IGNWPS): ಈ ಯೋಜನೆಗೆ 'ಪ್ರಧಾನ ಮಂತ್ರಿ ವಿಧವಾ ಪಿಂಚಣಿ ಯೋಜನೆ' (Pradhan Mantri Vidhawa Pension Yojana) ಎಂದು ಹೊಸ ಹೆಸರು ನೀಡಲಾಗಿದೆ. ಅರ್ಹ ಬಿಪಿಎಲ್ ಕುಟುಂಬಗಳ ವಿಧವೆಯರಿಗೆ ಆರ್ಥಿಕ ನೆರವು ಒದಗಿಸುವ ಯೋಜನೆ ಇದಾಗಿದೆ.
4. ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆ (IGNDPS): ಈ ಯೋಜನೆಯು 'ಪ್ರಧಾನ ಮಂತ್ರಿ ದಿವ್ಯಾಂಗಜನ್ ಪಿಂಚಣಿ ಯೋಜನೆ' (Pradhan Mantri Divyangjan Pension Yojana) ಎಂದು ಮರುನಾಮಕರಣಗೊಳ್ಳಲಿದೆ. ಅರ್ಹ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಮಾಸಿಕ ಪಿಂಚಣಿ ನೆರವು ನೀಡುವ ಯೋಜನೆ ಇದಾಗಿದೆ.
5. ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ (NFBS): ಈ ಯೋಜನೆಯ ಹೆಸರು 'ಪ್ರಧಾನ ಮಂತ್ರಿ ಪರಿವಾರ್ ಲಾಭ್ ಯೋಜನೆ' (Pradhan Mantri Parivar Labh Yojana) ಎಂದು ಬದಲಾಗಲಿದೆ. ಕುಟುಂಬದ ಪ್ರಮುಖ ಆದಾಯ ಗಳಿಸುವ ವ್ಯಕ್ತಿ ಮೃತಪಟ್ಟಾಗ ಅರ್ಹ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ.
ಅಂಗವಿಕಲರ ಪಿಂಚಣಿಯಲ್ಲಿ ಮಹತ್ವದ ಬದಲಾವಣೆ
ಯೋಜನೆಗಳ ಹೆಸರು ಬದಲಾವಣೆಯ ಜೊತೆಗೆ ಅಂಗವಿಕಲರ ಪಿಂಚಣಿ ಯೋಜನೆಯಲ್ಲಿಯೂ ಕೆಲವು ಪ್ರಮುಖ ಬದಲಾವಣೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಅಂಗವೈಕಲ್ಯ ಹೊಂದಿರುವ ಅರ್ಹ ಫಲಾನುಭವಿಗಳಿಗೆ ನೀಡುವ ಮಾಸಿಕ ನೆರವಿನ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಹೊಸ ನಿರ್ಧಾರದ ಪ್ರಕಾರ, 0ರಿಂದ 79 ವರ್ಷದೊಳಗಿನ ಫಲಾನುಭವಿಗಳಿಗೆ ಮಾಸಿಕ ₹375 ಹಾಗೂ 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಫಲಾನುಭವಿಗಳಿಗೆ ತಿಂಗಳಿಗೆ ₹625 ನೆರವು ನೀಡಲಾಗುತ್ತದೆ ಎಂದು ಪ್ರಕಟಿತ ಮಾಹಿತಿಯಲ್ಲಿ ತಿಳಿಸಲಾಗಿದೆ.
ಯೋಜನೆಯಡಿ ನೆರವು ಪಡೆಯಲು ಅವಕಾಶ
ಇದರ ಜೊತೆಗೆ, ಪಿಂಚಣಿಗೆ ಅರ್ಹರಾಗಲು ಅಗತ್ಯವಿದ್ದ ಕನಿಷ್ಠ ಅಂಗವೈಕಲ್ಯ ಪ್ರಮಾಣವನ್ನು ಶೇ.80ರಿಂದ ಶೇ.40ಕ್ಕೆ ಇಳಿಸಲಾಗಿದೆ. ಈ ಬದಲಾವಣೆಯಿಂದ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಯೋಜನೆಯಡಿ ನೆರವು ಪಡೆಯಲು ಅವಕಾಶ ಸಿಗಲಿದೆ.
ಇದುವರೆಗೆ ಇದ್ದ ಕನಿಷ್ಠ ವಯಸ್ಸಿನ ಮಾನದಂಡವನ್ನೂ ತೆಗೆದುಹಾಕಲು ನಿರ್ಧರಿಸಲಾಗಿದೆ. ಹೀಗಾಗಿ, ಯೋಜನೆಯ ಇತರ ಅರ್ಹತಾ ಷರತ್ತುಗಳನ್ನು ಪೂರೈಸುವ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಜನನದಿಂದಲೇ ನೆರವು ಪಡೆಯಲು ಅರ್ಹರಾಗಬಹುದು.
ಆದರೆ, ಹೊಸ ಅರ್ಹತಾ ಮಾನದಂಡಗಳು, ಫಲಾನುಭವಿಗಳ ವ್ಯಾಪ್ತಿ ಮತ್ತು ನೆರವಿನ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಮುಂದಿನ ಮೂರು ತಿಂಗಳೊಳಗೆ ಹೊರಡಿಸಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವೃದ್ಧಾಪ್ಯ, ವಿಧವಾ ಪಿಂಚಣಿ ಯೋಜನೆಗಳಲ್ಲಿ ಏನು ಬದಲಾವಣೆ?
ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಹಾಗೂ ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆಗಳನ್ನು ಅವುಗಳ ಪ್ರಸ್ತುತ ಸ್ವರೂಪದಲ್ಲೇ ಮುಂದುವರಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಗಳ ಹೆಸರು ಬದಲಾವಣೆಯ ಹೊರತಾಗಿ, ಅವುಗಳ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡುವ ಬಗ್ಗೆ ಪ್ರಕಟಣೆಯಲ್ಲಿ ಪ್ರಸ್ತಾಪಿಸಲಾಗಿಲ್ಲ.
ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 3.20 ಕೋಟಿ ಫಲಾನುಭವಿಗಳಿಗೆ ಈ ನಿರ್ಧಾರದಿಂದ ಪ್ರಯೋಜನವಾಗುವ ನಿರೀಕ್ಷೆಯಿದೆ.
ಐದು ವರ್ಷಕ್ಕೆ ₹53,428 ಕೋಟಿ ಅನುದಾನ
ಬಡವರು, ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವೈಕಲ್ಯ ಹೊಂದಿರುವವರಂತಹ ದುರ್ಬಲ ವರ್ಗಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು 1995ರಲ್ಲಿ ಆರಂಭಿಸಲಾಗಿತ್ತು.
ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿನ 41ನೇ ವಿಧಿಯ ಆಶಯಕ್ಕೆ ಅನುಗುಣವಾಗಿ, ವೃದ್ಧಾಪ್ಯ, ಅನಾರೋಗ್ಯ ಮತ್ತು ಅಂಗವೈಕಲ್ಯದಂತಹ ಸಂದರ್ಭಗಳಲ್ಲಿ ಸಾರ್ವಜನಿಕ ನೆರವು ಒದಗಿಸುವ ಜವಾಬ್ದಾರಿಯ ಭಾಗವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದೀಗ 2026-27ರಿಂದ 2030-31ರವರೆಗೆ ಐದು ವರ್ಷಗಳ ಕಾಲ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಅವಧಿಯಲ್ಲಿ ₹53,428 ಕೋಟಿ ವೆಚ್ಚ ಮಾಡಲು ಅನುಮೋದನೆ ನೀಡಿದೆ.


Click it and Unblock the Notifications
