India Rain alert: ದಕ್ಷಿಣ ಭಾರತದ ಈ ರಾಜ್ಯಗಳಲ್ಲಿ ಬಿರುಗಾಳಿ ಸಹಿತ 2 ದಿನ ಭಾರೀ ಮಳೆ
ನವದೆಹಲಿ, ಅಕ್ಟೋಬರ್ 27: ಭಾರತದ ದಕ್ಷಿಣ ಭಾಗದ ರಾಜ್ಯಗಳು ಮತ್ತೊಮ್ಮೆ ಭಾರೀ ಮಳೆಯಾರ್ಭಟಕ್ಕೆ ಸಾಕ್ಷಿ ಆಗಲಿವೆ. ಚಂಡಮಾರುತ ಮತ್ತು ಹಿಂಗಾರು ಮಳೆಯ ಚುರುಕಿನ ಪ್ರಭಾವದಿಂದಾಗಿ ಅಕ್ಟೋಬರ್ 29-30 ರಂದು ವಿವಿಧೆಡೆ ಭಾರಿ ಮಳೆಯಾಗುವ ನಿರೀಕ್ಷೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಅಕ್ಟೋಬರ್ 21ರಿಂದ ಹಿಂಗಾರು ಮಾರುತ (ಈಶಾನ್ಯ ಮಾನ್ಸೂನ್) ಆರಂಭವಾಗಿದೆ. ಇತ್ತ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿದೆ. ಇದೆಲ್ ವೈಪರಿತ್ಯಗಳಿಂದ ಬಿಸಿಲಿನ ಬೇಗೆಗೆ ತತ್ತರಿಸಿರುವ ದಕ್ಷಿಣ ಭಾರತವು ಮುಂದಿನ ದಿನಗಳಲ್ಲಿ ಬರುವ ಮಳೆ ತಂಪೆರೆಯಲಿದೆ.

ಮುನ್ಸೂಚನೆ ಪ್ರಕಾರ, ಮುಂದಿನ ವಾರ ದಕ್ಷಿಣ ಭಾರತಲ್ಲಿ ಉತ್ತರ ಕೆಲವು ಭಾಗಗಳನ್ನು ಹೊರತುಪಡಿಸಿ ಉಳಿದೆಡೆ ಗುರುಡು, ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ. ಉತ್ತರ ವ್ಯಾಪ್ತಿಯಲ್ಲಿ ಮಳೆ ಪ್ರಭಾವ ಅಷ್ಟಾಗಿಲ್ಲ. ಬದಲಾಗಿ ಇಲ್ಲಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವೆಡೆ ಬಿರುಗಾಳಿ ಸಹಿತಿ ಮಳೆ
ಸದ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹ್ಯಾಮೂನ್ ಚಂಡಮಾರುತದ ತೀವ್ರತೆ ಇನ್ನಷ್ಟು ದಿನ ಮುಂದುವರಿಯಲಿದೆ. ಹೀಗಾಗಿ ದಕ್ಷಿಣ ಭಾರತವು ಬಿರುಗಾಳಿ ಸಹಿತ ಸಾಕಷ್ಟು ಮಳೆಗೆ ಸಾಕ್ಷಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ದೊರೆತ ಮುನ್ಸೂಚನೆ ಪ್ರಕಾರ, ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ಮಾಹೆ ಸೇರಿದಂತೆ ದಕ್ಷಿಣ ಭಾರತದಲ್ಲಿ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಅನೇಕ ಕಡೆಗಳಲ್ಲಿ ಧಾರಾಕಾರ ಮಳೆ ಆಗಲಿದೆ. ಹಲವೆಡೆ ಸಾಧಾರಣ ಮಳೆಯೂ ಸುರಿಯಲಿದೆ. ಇನ್ನೂ ಕರ್ನಾಟಕದ ದಕ್ಷಿಣ ಒಳನಡು ಜಿಲ್ಲೆಗಳು ಮತ್ತು ಕರಾವಳಿ ಪ್ರದೇಶಗಳು ಭಾರಿ ಮಳೆಗೆ ಸಾಕ್ಷಿಯಾಗಲಿವೆ. ಉತ್ತರ ಒಳನಾಡಿನಲ್ಲಿ ಬಿರು ಬಸಿಲಿನ ವಾತಾವರಣ ಮುಂದುವರಿಯಲಿದೆ.

ಒಟ್ಟಾರೆ ಅಕ್ಟೋಬರ್ 29ರಿಂದ ಎರಡು ಮೂರು ದಿನ ಕೇರಳ, ಕರ್ನಾಟಕ, ತಮಿಳುನಾಡು, ಪುದುಚೇರಿ, ಕಾರೈಕಲ್, ಮತ್ತು ಮಾಹೆಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರೀ ಮಳೆ ಸಂಭವವಿದೆ. ಚುರುಕಾಗಿರುವ ಹಿಂಗಾರು ಮಳೆ ಹೆಚಚು ತೇವಭರಿಸ ಗಾಳಿ ತರಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನವೆಂಬರ್ ಮೊದಲ ವಾರದವರೆಗೆ ಮಳೆಯ ವಾತಾವರಣ ಕಂಡು ಬರಲಿದೆ ಎಂದು ವರದಿ ತಿಳಿಸಿದೆ.
ದೆಹಲಿಯಲ್ಲಿ ಮಂಜಿನ ವಾತಾವರಣ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆ ಮಂಜಿನ ವಾತಾವರಣ ಕಂಡು ಬರುತ್ತಿದೆ, ಇದು ಅಕ್ಟೋಬರ್ 31 ರವರೆಗೆ ಮುಂದುವರಿಯಲಿದೆ. ದೆಹಲಿಯು ಗುರುವಾರ ಗರಿಷ್ಠ 31.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ. ಇನ್ನೂ ಗಾಳಿಯ ಗುಣಮಟ್ಟ ಕಳೆದ ನಾಲ್ಕೈದು ದಿನಗಳಿಂದ 'ಕಳಪೆ' ಆಗಿದೆ. ಇಲ್ಲಿ ಕನಿಷ್ಠ 15.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ಸದ್ಯಕ್ಕೆ ಇಲ್ಲಿಗೆ ಮಳೆಯ ಲಕ್ಷಣಗಳು ಇಲ್ಲ ಎನ್ನಲಾಗಿದೆ.












Click it and Unblock the Notifications