ಅಯೋಧ್ಯೆಯಲ್ಲಿ ದೇಶದ ಮೊದಲ ಐಷಾರಾಮಿ 7 ಸ್ಟಾರ್ ಸಸ್ಯಹಾರಿ ಹೋಟೆಲ್, ಏನೆಲ್ಲ ಸೌಲಭ್ಯಗಳಿರಲಿವೆ ಗೊತ್ತಾ?
ಉತ್ತರಪ್ರದೇಶ, ಜನವರಿ, 16: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಆಗಲಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಇನ್ನು ಇದಕ್ಕೂ ಮುನ್ನವೇ ಆಯೋಧ್ಯೆಯಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಐಷಾರಾಮಿ 7 ಸ್ಟಾರ್ ಸಸ್ಯಹಾರಿ ಹೋಟೆಲ್ ಆರಂಭ ಆಗಲಿದೆ. ಹಾಗಾದರೆ ಇಲ್ಲಿ ಏನೆಲ್ಲ ಆಹಾರ ಲಭ್ಯವಿರಲಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಹತ್ತು ಹಲವು ವಿಶೇಷತೆಗಳು ಕಂಡುಬರುತ್ತಿವೆ. ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆ ಐಷಾರಾಮಿ 7 ಸ್ಟಾರ್ ಹೋಟೆಲ್ ತೆರೆಯಲಾಗುತ್ತಿದ್ದು, ಇಲ್ಲಿ ಸಂಪೂರ್ಣ ಸಸ್ಯಹಾರಿ ಆಹಾರ ಪದಾರ್ಥವನ್ನು ಮಾತ್ರ ಪೂರೈಸಲಾಗುತ್ತದೆ. ಇದು ದೇಶದ ಮೊದಲ ಸಸ್ಯಹಾರಿ ಐಷಾರಾಮಿ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇನ್ನು ಇದೇ ಜನವರಿ 22ರಂದು ರಾಮಮಂದಿರ ಉದ್ಘಾಟನೆ ಆಗುತ್ತಿರುವುದರಿಂದ ಅಯೋಧ್ಯೆಯಲ್ಲಿ ಹಲವು ವೈವಿದ್ಯಮಯ ಚಟುವಟಿಕೆಗಳು ಆರಂಭ ಆಗಲಿವೆ. ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯು ಅಯೋಧ್ಯೆಯಲ್ಲಿ ಪಂಚತಾರಾ ಹೋಟೆಲ್ ಅನ್ನೂ ಸ್ಥಾಪನೆ ಮಾಡಲಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
ಅಯೋಧ್ಯೆ ಉದ್ಘಾಟನೆಯು ಹಲವು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದು, ಈ ಹಿನ್ನೆಲೆ ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಕೇಂದ್ರಗಳನ್ನೂ ಕೂಡ ನಿರ್ಮಿಸಲಾಗುತ್ತಿದೆ. ಈಗಾಗಲೇ ನವೀಕರಿಸಿದ ರೈಲು ನಿಲ್ದಾಣ ಕಾರ್ಯಪ್ರವೃತ್ತವಾಗಿದ್ದು, ಇದೇ ಶುಕ್ರವಾರದಿಂದ ವಿಮಾನ ನಿಲ್ದಾಣ ಸೇವೆಯೂ ಆರಂಭ ಆಗಲಿದೆ. ಅಲ್ಲದೆ ಅಯೋಧ್ಯೆ ನಗರವನ್ನು ಸ್ಮಾರ್ಟ್ ಸಿಟಿ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಹಾಗೆಯೇ ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ಮನೆ ಮಾಡಲು ನಿರ್ಧರಿಸಿದ್ದು, ನಿವೇಶನ ಖರೀದಿ ಮಾಡಿದ್ದಾರೆ. ಮುಂಬೈ ಮೂಲದ ಡೆವಲಪರ್ ಕಂಪೆನಿಯಿಂದ ಈ ನಿವೇಶನ ಖರೀದಿ ಮಾಡಿದ್ದು, ನಿವೇಶನದ ಮೌಲ್ಯ 14.5 ಕೋಟಿ ರೂಪಾಯಿ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
ಈಗಾಗಲೇ ಸಾಮಾಜಿಕ ಜಾಲತಣಗಳಲ್ಲಿ ಅಯೋಧ್ಯೆಯ ಆವರಣದ ಫೋಟೋ ಬಿಡುಗಡೆ ಆಗಿದ್ದು, ಇದಕ್ಕೆ ಭಾರೀ ಪ್ರತಿಕ್ರಿಯೆಗಳು ಬರುತ್ತಿವೆ. ಹಾಗೆಯೇ ಈ ಫೋಟೋಗಳನ್ನು ನೋಡಿಯೇ ಕೆಲವರು ಈಗಿನಿಂದಲೇ ರೈಲು, ವಿಮಾನ, ಬಸ್ ಟಿಕೆಟ್ ಬುಕ್ ಮಾಡಲು ಆರಂಭಿಸಿದ್ದಾರೆ. ಹಾಗೆಯೇ ಈಗಾಗಲೇ ಕರ್ನಾಟಕದ ವಿವಿಧ ಭಾಗಗಳಿಂದಲೂ ವಿಶೇಷ ರೈಲುಗಳನ್ನು ಕೂಡ ಕಲ್ಪಿಸಲಾಗಿದೆ.












Click it and Unblock the Notifications