ಭಾರತೀಯರೇ ಕೊರೊನಾವೈರಸ್ ಎಕ್ಸ್ಇ ರೂಪಾಂತರದ ಬಗ್ಗೆ ಭಯವೇ ಬೇಡ: ಎನ್ ಕೆ ಅರೋರಾ
ಮುಂಬೈ, ಏಪ್ರಿಲ್ 11: ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ವರದಿ ಆಗಿರುವ ಕೋವಿಡ್-19 ಸೋಂಕಿನ ಎಕ್ಸ್ಇ ಹೊಸ ರೂಪಾಂತರದ ಬಗ್ಗೆ ಜನರು ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಎನ್ ಕೆ ಅರೋರಾ ಹೇಳಿದ್ದಾರೆ. ಕೊರೊನಾವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ ಎಕ್ಸ್ ತಳಿಯು ಹೆಚ್ಚು ಅಪಾಯಕಾರಿ ಆಗಿರುವುದಿಲ್ಲ. ಅಲ್ಲದೇ ಭಾರತದ ಅಂಕಿ-ಅಂಶಗಳ ಪ್ರಕಾರ ಈ ತಳಿಯು ಅತಿ ವೇಗದಲ್ಲಿ ಹರಡುವುದಿಲ್ಲ ಎಂದಿದ್ದಾರೆ.
"ಓಮಿಕ್ರಾನ್ ರೂಪಾಂತರವು ಹಲವು ತಳಿಗಳ ಬೆಳವಣಿಗೆಗೆ ಕಾರಣವಾಗಿರುತ್ತದೆ. ಎಕ್ಸ್ ಮತ್ತು ಎಕ್ಸ್ಇ ಎಂಬ ತಳಿಗಳು ಅದೇ ರೂಪಾಂತರದ ಭಾಗವಾಗಿವೆ. ಈ ರೂಪಾಂತರ ತಳಿಗಳು ಹಾಗೆಯೇ ಮುಂದುವರಿಯುತ್ತವೆ. ಆದರೆ ಭಾರದ ಅಂಕಿ-ಅಂಶಗಳನ್ನು ಗಮನಿಸಿದಾಗ ಈ ತಳಿಗಳು ಅತಿಹೆಚ್ಚು ಅಪಾಯಕಾರಿ ಎನ್ನುವುದಾಗಲಿ ಅಥವಾ ಅತಿವೇಗವಾಗಿ ಹರಡುತ್ತದೆ ಎಂಬುದಕ್ಕಾಗಲಿ ಯಾವುದೇ ಸಾಕ್ಷ್ಯಗಳಿಲ್ಲ. ಹೀಗಾಗಿ ಭಾರತೀಯರು ಎಕ್ಸ್ಇ ರೂಪಾಂತರ ತಳಿಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಎನ್ ಕೆ ಅರೋರಾ ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈನಲ್ಲಿ ಮೊದಲ ಪ್ರಕರಣ ಪತ್ತೆ:
ಮಹಾರಾಷ್ಟ್ರದ ಮುಂಬೈನಲ್ಲಿ ಓಮಿಕ್ರಾನ್‌ನ ಉಪ-ರೂಪಾಂತರವಾದ ಎಕ್ಸ್‌ಇ ಮೊದಲ ಪ್ರಕರಣ ಪತ್ತೆಯಾಗಿತ್ತು. ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದ 67 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಹೊಸ ರೂಪಾಂತರ ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಬಿಎಂಸಿ ದೃಢಪಡಿಸಿತ್ತು.

ಗುಜರಾತ್‌ನಲ್ಲಿ ಎರಡನೇ ಸೋಂಕಿತ ಪ್ರಕರಣ:
ಗುಜರಾತ್‌ನಲ್ಲಿ ಒಬ್ಬ ರೋಗಿಯು ಕೊರೊನಾವೈರಸ್‌ನ XE ರೂಪಾಂತರದಿಂದ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉನ್ನತ ಮೂಲಗಳು ತಿಳಿಸಿದ್ದವು. ಈ ರೋಗಿಗೆ ಮಾರ್ಚ್ 13ರಂದು ಕೋವಿಡ್ -19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ತದನಂತರದಲ್ಲಿ ಅವರ ಆರೋಗ್ಯ ಚೇತರಿಕೆಯಾಗಿತ್ತು ಎಂದು ತಿಳಿದು ಬಂದಿದೆ.
ಕೊರೊನಾವೈರಸ್ ಹೊಸ ರೂಪಾಂತರಿ ಎಕ್ಸ್ಇ ಕುರಿತು ತಿಳಿಯಿರಿ:
ಹೊಸ ರೂಪಾಂತರ, XE, Omicron ನ ಎರಡು ಆವೃತ್ತಿಗಳ ರೂಪಾಂತರಿತ ಹೈಬ್ರಿಡ್ ಆಗಿದೆ - BA.1 ಮತ್ತು BA.2. ಇದು ಈ ಸಮಯದಲ್ಲಿ ಜಗತ್ತಿನಾದ್ಯಂತ ಸಣ್ಣ ಪ್ರಮಾಣದ ಪ್ರಕರಣಗಳಿಗೆ ಮಾತ್ರ ಕಾರಣವಾಗಿದೆ. "XE ಮರುಸಂಯೋಜಕ (BA.1-BA.2), ಜನವರಿ 19 ರಂದು ಯುಕೆನಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. 600 ಕ್ಕಿಂತ ಕಡಿಮೆ ಅನುಕ್ರಮಗಳು ವರದಿಯಾಗಿವೆ ಮತ್ತು ದೃಢೀಕರಿಸಲ್ಪಟ್ಟಿವೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಯುಎಸ್ ನೆಲದಲ್ಲಿ ಭಯ ಹುಟ್ಟಿಸಿರುವ ಎಕ್ಸ್ಇ ತಳಿ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಅತಿಹೆಚ್ಚು ರೂಪಾಂತರಗಳು ಆಗಾಗ ಸದ್ದು ಮಾಡಿ ಸುದ್ದಿ ಆಗುತ್ತವೆ. ಅದೇ ರೀತಿ ಜಗತ್ತಿನ ಅದೆಷ್ಟೋ ರಾಷ್ಟ್ರಗಳಲ್ಲಿ ಕೊವಿಡ್ ಮೂರನೇ ಅಲೆಗೆ ಕಾರಣವಾಗಿದ್ದು ಇದೇ ಓಮಿಕ್ರಾನ್ ರೂಪಾಂತರಿ. ಈ ಓಮಿಕ್ರಾನ್ ರೂಪಾಂತರದ ಪೈಕಿ ಇದುವರೆಗೂ BA.2 ಉಪ ತಳಿಯು ಅತಿಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿತ್ತು. ಆದರೆ ಈಗ ಓಮಿಕ್ರಾನ್ ರೂಪಾಂತರಿಯಲ್ಲೇ ಎಕ್ಸ್ಇ ತಳಿಯು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ ಎಂದು ಗೊತ್ತಾಗಿದೆ. ಯುಎಸ್ ನೆಲದ ಹಲವು ಪ್ರದೇಶಗಳಲ್ಲಿ ಈಗಾಗಲೇ ಎಕ್ಸ್ಇ ತಳಿಯು ಪತ್ತೆಯಾಗಿದ್ದು, ಹರಡುವಿಕೆಯ ವೇಗವನ್ನು ಹೆಚ್ಚಿಸಿದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ.












Click it and Unblock the Notifications