ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ಬುಕ್ಕಿಂಗ್ ವೇಳೆ 'ವೇಟಿಂಗ್ ಲಿಸ್ಟ್' ವ್ಯವಸ್ಥೆಗೆ ಬ್ರೇಕ್: ರೈಲ್ವೆ ಇಲಾಖೆ
ನವದೆಹಲಿ, ನವೆಂಬರ್ 17: ಭಾರತೀಯ ರೈಲ್ವೆ ಇಲಾಖೆಯು ತನ್ನ ಪ್ರಮಾಣಿಕರಿಗೆ ಪರಿಣಾಮಕಾರಿ ಸೇವೆ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯಲ್ಲಿ ಕನ್ಫರ್ಮ್ ವಿಧಾನವನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದೆ.
ರೈಲ್ವೇ ಸಚಿವಾಲಯವು ಮುಂದಿನ 4-5 ವರ್ಷಗಳಲ್ಲಿ ಟಕೆಟ್ ಬುಕ್ಕಿಂಗ್ ಸಂದರ್ಭದಲ್ಲಿನ 'ವೇಟಿಂಗ್ ಲಿಸ್ಟ್'ಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಮಹತ್ವಾಕಾಂಕ್ಷೆಯ ಗುರಿಯನ್ನು ಘೋಷಿಸಿದೆ. ರೈಲ್ವೆ ಪ್ರಯಾಣಕ್ಕೆ ಭಾರೀ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರೈಲ್ವೆ ಸಚಿವಾಲಯವು ಅಗತ್ಯ ಬೇಡಿಕೆ ಪೂರೈಸಲು ಉದ್ದೇಶಿತ ಸಮಗ್ರ ಯೋಜನೆಯನ್ನು ಬಹಿರಂಗಪಡಿಸಿದೆ.

ರೈಲ್ವೆ ಸಚಿವಾಲಯವು ಎಲ್ಲ ಪ್ರಯಾಣಿಕರ ಪೈಕಿ ಸಾಮಾನ್ಯ ಮತ್ತು ಸ್ಲೀಪರ್-ವರ್ಗದ ಪ್ರಯಾಣಿಕರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅಂದರೆ ಈ ವರ್ಗದ ಪ್ರಯಾಣಿಕರ ಸಂಖ್ಯೆ 2023ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಗಮನಾರ್ಹ ಏರಿಕೆ ಆಗಿದೆ ಎಂದು ರೈಲ್ವೆ ಅಂಕಿ ಅಂಶಗಳು ತಿಳಿಸಿವೆ.
ವೇಟಿಂಗ್ ಲಿಸ್ಟ್ ವ್ಯವಸ್ಥೆಗೆ ಬ್ರೇಕ್
ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಎಲ್ಲ ಟಿಕೆಟ್‌ಗಳು ಕನ್ಫರ್ಮ್ ಆಗುವುದಿಲ್ಲ ಬದಲಾಗಿ ಕೆಲವು ಟಿಕೆಟ್‌ಗಳು ವೇಟಿಂಗ್ ಲಿಸ್ಟ್‌ಗೆ ಹೋಗುತ್ತವೆ. ರೈಲ್ವೆ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣ ಮುಂದಿನ ಕೆಲವು ವರ್ಷಗಳಲ್ಲಿ ಈ ವೇಟಿಂಗ್ ವ್ಯವಸ್ಥೆಯನ್ನು ಕೈ ಬಿಡಲಿದೆ. ಬುಕ್ಕಿಂಗ್ ಮಾಡುವ ಎಲ್ಲ ಟಿಕೆಟ್‌ಗಳು ಖಾತರಿಯಾಗುವ ವಿಧಾನವನ್ನು ಅಳವಡಿಸಿಕೊಳ್ಳುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ ಎಂದು ET ವರದಿ ಮಾಡಿದೆ.
ಹೆಚ್ಚಾದ ರೈಲ್ವೆ ಪ್ರಯಾಣಿಕರ ವಿವರ
ಜನರಲ್ ಮತ್ತು ಸ್ಲೀಪರ್ ತರಗತಿಗಳನ್ನು ಒಳಗೊಂಡಂತೆ ನಾನ್-ಎಸಿ ಕೋಚ್‌ಗಳು ಒಟ್ಟು ಪ್ರಯಾಣಿಕರಲ್ಲಿ ಈ ವರ್ಷ ಶೇಕಡಾ 95.3 ರಷ್ಟು ಹೆಚ್ಚಾಗಿದೆ. ಅಂದರೆ ಒಟ್ಟು 372 ಕೋಟಿ ಪ್ರಯಾಣಿಕರು ಈ ವರ್ಗದಲ್ಲಿ ಪ್ರಯಾಣಿಸಿದ್ದಾರೆ. ಹಿಂದಿನ ವರ್ಷಕ್ಕಿಂತಲೂ ಈ ವರ್ಷ 38 ಕೋಟಿ ಹೆಚ್ಚು ಪ್ರಯಾಣಿಕರು ಸಂಚಾರಕ್ಕೆ ರೈಲ್ವೆಯನ್ನು ಬಳಸಿದ್ದಾರೆ. ಇದು ರೈಲ್ವೆ ಸಚಿವಾಲಯದ ಉತ್ತಮ ಸೇವೆಗೆ ಸಾಕ್ಷಿಯಾಗಿದೆ.

ಇನ್ನೂ ಎಸಿ ಕೋಚ್‌ಗಳು ಒಟ್ಟು ಪ್ರಯಾಣಿಕರ ಸಂಖ್ಯೆ ಶೇಕಡಾ 4.7ರಷ್ಟಿದೆ. ಅಂದರೆ 18.2 ಕೋಟಿ ಪ್ರಯಾಣಿಕರ ಈ ವರ್ಗದಲ್ಲಿ ಪ್ರಯಾಣ ಮಾಡಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಈ ವರ್ಷ ಎಸಿ ಕೋಚ್ ಬಳಕೆದಾರರು 3.1 ಕೋಟಿ ಹೆಚ್ಚಾಗಿರುವುದನ್ನು ಸೂಚಿಸುತ್ತದೆ.
ಸಾಮಾನ್ಯ-ಸ್ಟೀಪರ್ ಕೋಚ್ ಪ್ರಯಾಣಿಕರ ಸಂಖ್ಯೆ ಏರಿಕೆ
ಎಸಿ ಅಲ್ಲದೇ ಸಾಮಾನ್ಯ-ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸಿದವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈ ವರ್ಷ41.1 ಕೋಟಿಯಷ್ಟು ಪ್ರಯಾಣಿಕರು ಹೆಚ್ಚಾಗಿದ್ದಾರೆ. ಅಂದರೆ ಒಟ್ಟು ಶೇಕಡಾ 92.5ರಷ್ಟು ಹೆಚ್ಚಳವಾಗಿದ್ದಾರೆ. ಇದು ಆರ್ಥಿಕ ಸ್ನೇಹಿ ಪ್ರಯಾಣದ ಕಡೆಗೆ, ಕಡಿಮೆ ಹಣದಲ್ಲಿ ಸಿಗುವ ಉತ್ತಮ ಸಾರಿಗೆ ಸೌಲಭ್ಯದತ್ತ ಜನರು ಒಲವು ಹೆಚ್ಚಾಗಿದ್ದನ್ನು ಸೂಚಿಸುತ್ತದೆ.
ಮೇಲಿನ ಎಲ್ಲ ಕಾರಣದಿಂದ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಭಾರತೀಯ ರೈಲ್ವೇ ಸೇವೆಯನ್ನು ವಿಸ್ತರಿಸಲು, ಹೊಸ ವಿಧಾನ ಅಳವಡಿಕೆಗೆ ಮುಂದಾಗಿದೆ. ಕೋರೊನಾ ದಿನಗಳ ಪೂರ್ವದಲ್ಲಿದ್ದ ರೈಲುಗಳಿಗಿಂತಲೂ ಸದ್ಯ ಹೆಚ್ಚುವರಿಯಾಗಿ 562 ರೈಲುಗಳು ಕಾರ್ಯ ನಿರ್ವಹಿಸುತ್ತಿವೆ.
ಏರಿಕೆಯಾದ ರೈಲುಗಳ ಸಂಖ್ಯೆಯ ಮಾಹಿತಿ
ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಸದ್ಯ ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಸಂಖ್ಯೆ 1,768 ರಿಂದ 2,122 ಗೆ ಹೆಚ್ಚಳವಾಗಿವೆ. ಉಪನಗರ ರೈಲುಗಳು 5,626 ರಿಂದ 5,774ಗೆ ಏರಿದರೆ, ಪ್ಯಾಸೆಂಜರ್ ರೈಲುಗಳು ಸಂಖ್ಯೆ 2,792 ರಿಂದ 2,852 ಏರಿಕೆ ಆಗಿದೆ. ಭಾರತದಲ್ಲಿ ಪ್ರತಿದಿನ 10,748 ರೈಲುಗಳು ಓಡಾಡುತ್ತವೆ. ಕೋಟ್ಯಾಂತರ ಪ್ರಯಾಣಿಕರು ಈ ರೈಲುಗಳಲ್ಲಿ ನಿತ್ಯ ಸಂಚರಿಸುತ್ತಿದ್ದಾರೆ.
ಸದ್ಯ ವೇಟಿಂಗ್ ಲಿಸ್ಟ್ ವ್ಯವಸ್ಥೆ ತೆರವು ಮಾಡುವುದರಿಂದ ರೈಲ್ವೇ ಸಚಿವಾಲಯವು ರೈಲ್ವೆ ಪ್ರಯಾಣಕ್ಕೆ ಹೆಚ್ಚಾಗಿರುವ ಬೇಡಿಕೆಗೆ ತಕ್ಕ ಪೂರೈಕೆ ನೀಡಲು ಸಾಧ್ಯವಾಗುತ್ತದೆ. ಎಲ್ಲ ಟಿಕೆಟ್‌ಗಳು ಬುಕ್ ಆಗುವುದರಿಂದ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ. ಮತ್ತಷ್ಟು ಜನರು ರೈಲ್ವೆ ಪ್ರಯಾಣದತ್ತ ಮುಖ ಮಾಡುತ್ತಾರೆ.
ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ ಸುಗಮ ಮತ್ತು ಹೆಚ್ಚು ಪರಿಣಾಮಕಾರಿ ಪ್ರಯಾಣದ ಪ್ರಯಾಣದ ಅನುಭವವು ಖಾತರಿ (ಕನ್ಫರ್ಮ್) ಆಗುತ್ತದೆ. ಇದರಿಂದ ರೈಲ್ವೆ ಇಲಾಖೆಯ ಭವಿಷ್ಯ ಇನ್ನಷ್ಟು ಸುಧಾರಿಸಲಿದೆ.












Click it and Unblock the Notifications