ವೈದ್ಯರ ಮಾನಸಿಕ ಆರೋಗ್ಯಕ್ಕೆ ಹೊಸ ಅಭಿಯಾನ; ಕೈಜೋಡಿಸಿದ ಭಾರತ-ಯುಕೆಯ 6 ಸಂಸ್ಥೆಗಳು
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಚರ್ಚೆಗಳು ಕೇವಲ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಸೀಮಿತವಾಗದೆ ಅದರಾಚೆಗೂ ವಿಸ್ತರಿಸುತ್ತಿರುವ ಈ ಸಮಯದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಕ್ಷೇಮದ ಕುರಿತು ಹೆಚ್ಚು ಮುಕ್ತವಾದ ವಾತಾವರಣ ಹಾಗೂ ಸಂಸ್ಕೃತಿಯನ್ನು ರೂಪಿಸಲು ಭಾರತ ಮತ್ತು ಯುಕೆಯ ಆರು ಪ್ರಮುಖ ಮಾನಸಿಕ ಆರೋಗ್ಯ ಹಾಗೂ ವೈದ್ಯಕೀಯ ಸಂಸ್ಥೆಗಳು ಕೈಜೋಡಿಸಿವೆ.
ಅಭಿಯಾನದಲ್ಲಿ ಭಾಗವಹಿಸಿರುವ ಸಂಸ್ಥೆಗಳು
* ಇಂಡಿಯಾ ಮೆಂಟಲ್ ಹೆಲ್ತ್ ಅಲಯನ್ಸ್ (IMHA)
* ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ (IPS)
* ಇಂಡಿಯನ್ ಟೀಚರ್ಸ್ ಆಫ್ ಸೈಕಿಯಾಟ್ರಿ (IToP)
* ವರ್ಲ್ಡ್ ಸೈಕಿಯಾಟ್ರಿಕ್ ಅಸೋಸಿಯೇಷನ್ ಝೋನ್ 15 (WPA Zone 15)
* ಡರ್ಬಿಷೈರ್ ಹೆಲ್ತ್‌ಕೇರ್ ಎನ್‌ಎಚ್‌ಎಸ್ ಫೌಂಡೇಶನ್ ಟ್ರಸ್ಟ್, ಯುಕೆ
* ಎಕ್ಸೆಪ್ಟ್ ಸಪೋರ್ಟ್ ಹೆಲ್ಪ್ ಅನದರ್ (ಆಶಾ ಕೇರಳ - ASHA)

ವೈದ್ಯಕೀಯ ವೃತ್ತಿಪರರಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಕಾರ್ಯಭಾರದ ಆಯಾಸ ಮತ್ತು ಮಾನಸಿಕ ಆರೋಗ್ಯದ ಸವಾಲುಗಳ ಕುರಿತು ಕಳವಳಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ವೈದ್ಯರು ರೋಗಿಗಳಿಗೆ ಹಿಂಜರಿಕೆಯಿಲ್ಲದೆ ಮಾನಸಿಕ ನೆರವು ಪಡೆಯಲು ಸಲಹೆ ನೀಡುತ್ತಾರೆ. ಆದರೂ ಸಮಾಜದಲ್ಲಿರುವ ಮುಜುಗರ/ಸಾಮಾಜಿಕ ಕಳಂಕದ ಭಯ ಹಾಗೂ ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆಯಾಗಬಹುದು ಎಂಬ ಆತಂಕದಿಂದಾಗಿ, ತಮ್ಮದೇ ಆದ ಮಾನಸಿಕ ಆರೋಗ್ಯದ ಸಮಸ್ಯೆಗಳು ಹಾಗೂ ಸಂಕಷ್ಟಗಳನ್ನು ಮುಕ್ತವಾಗಿ ಒಪ್ಪಿಕೊಳ್ಳಲು ಸ್ವತಃ ವೈದ್ಯರೇ ಹಿಂಜರಿಯುತ್ತಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಐಎಮ್‌ಹೆಚ್‌ಎ ಸಂಸ್ಥೆಯ ಸ್ಥಾಪಕ ಸಮಿತಿಯ ಸದಸ್ಯೆ ಹಾಗೂ ಮಕ್ಕಳ ಮಾನಸಿಕ ತಜ್ಞೆ ಡಾ.ಕವಿತಾ ಅರೋರಾ ಮಾತನಾಡಿ, 'ವೈದ್ಯರು ಯಾವುದೇ ಮುಜುಗರ ಅಥವಾ ವಿಮರ್ಶೆಯ ಭಯವಿಲ್ಲದೆ ತಮ್ಮ ಮಾನಸಿಕ ತೊಂದರೆಗಳು, ಅಂಗವಿಕಲತೆ, ಒತ್ತಡ, ಆರೈಕೆದಾರರ ಸವಾಲುಗಳು ಹಾಗೂ ದುಃಖ-ಸಂಕಟಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅನುಕೂಲಕರವಾದ ವಾತಾವರಣ ನಿರ್ಮಿಸುವುದು ನಮ್ಮ ಮುಖ್ಯ ಉದ್ದೇಶ,' ಎಂದಿದ್ದಾರೆ.
ಪ್ರಸ್ತಾವನೆಯಾದ ಪ್ರಮುಖ ಅಂಶಗಳು
* ಭಾರತದಲ್ಲಿ ನಡೆದ ಮೆಟಾ-ವಿಶ್ಲೇಷಣೆಯ ಪ್ರಕಾರ, ಪ್ರತಿ ಇಬ್ಬರು ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಲ್ಲಿ ಒಬ್ಬರು ಖಿನ್ನತೆಯ ಲಕ್ಷಣಗಳನ್ನು ಎದುರಿಸುತ್ತಿದ್ದಾರೆ.
* ತೃತೀಯ ಹಂತದ ಆಸ್ಪತ್ರೆಯೊಂದರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಶೇ 30.1 ರಷ್ಟು ವೈದ್ಯರಲ್ಲಿ ಖಿನ್ನತೆ, ಶೇ 16.7 ರಷ್ಟು ಜನರಲ್ಲಿ ಆತ್ಮಹತ್ಯೆಯ ಆಲೋಚನೆಗಳು ಹಾಗೂ ಶೇ. 90ಕ್ಕಿಂತ ಹೆಚ್ಚು ಜನರಲ್ಲಿ ತೀವ್ರ ಕಾರ್ಯಭಾರದ ಆಯಾಸ ಕಂಡುಬಂದಿದೆ.
ಮುಂದಿನ ಕಾರ್ಯಯೋಜನೆಗಳು
* ದೇಶವ್ಯಾಪಿ ಸಮೀಕ್ಷೆ: ವೈದ್ಯರ ಪ್ರತ್ಯಕ್ಷ ಅನುಭವಗಳು ಹಾಗೂ ಅವರು ನೆರವು ಪಡೆಯಲು ಇರುವ ತಡೆಗೋಡೆಗಳನ್ನು ತಿಳಿದುಕೊಳ್ಳಲು ಸಮೀಕ್ಷೆ.
* ರಾಷ್ಟ್ರೀಯ ವೆಬಿನಾರ್ ಸರಣಿ: ವೈದ್ಯರ ಕ್ಷೇಮದ ಕುರಿತು 3 ಭಾಗಗಳ ರಾಷ್ಟ್ರೀಯ ವೆಬಿನಾರ್.
* ಸಮ್ಮೇಳನ ಮತ್ತು ಕಾರ್ಯಾಗಾರ: ಜೂನ್ 2027ರಲ್ಲಿ ಮಧುರೈನಲ್ಲಿ ನಡೆಯಲಿರುವ 'ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ'ಯ ವಾರ್ಷಿಕ ಸಮ್ಮೇಳನದಲ್ಲಿ ನೇರ ಕಾರ್ಯಾಗಾರ.
ಪ್ರಮುಖ ಪ್ರತಿಜ್ಞೆಗಳ ವಿವರ
* 'ಕೇರ್ ಫಾರ್ ಸೆಲ್ಫ್ ಪ್ಲೆಡ್ಜ್' (ಸ್ವಯಂ ಆರೈಕೆಯ ಪ್ರತಿಜ್ಞೆ): ವೈದ್ಯರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಲು ಪ್ರೇರೇಪಿಸುವುದು.
* 'ಕಲ್ಚರ್ ಆಫ್ ಕೇರ್ ಚಾರ್ಟರ್': ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯದ ಕುರಿತು ಮುಕ್ತ ಚರ್ಚೆಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು.
IMHA ಸಂಸ್ಥೆಯ ಪಾತ್ರ ಏನು?
2023ರ ಕೊನೆಯಲ್ಲಿ ಸ್ಥಾಪನೆಯಾದ 'ಇಂಡಿಯಾ ಮೆಂಟಲ್ ಹೆಲ್ತ್ ಅಲಯನ್ಸ್' (IMHA) ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದ್ದು, ಭಾರತದ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 400 ಸಂಸ್ಥೆಗಳ ಜಾಲವನ್ನು ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ 135ಕ್ಕೂ ಹೆಚ್ಚು ನಗರಗಳ ಸುಮಾರು 3,380 ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಕಾರ್ಯನಿರ್ವಹಿಸಿದೆ.
ವಿಶ್ವ ಮಾನಸಿಕ ಆರೋಗ್ಯ ದಿನದಂದು ಹೊರಬಿದ್ದಿರುವ ಸಂದೇಶವು ಅತ್ಯಂತ ಸ್ಪಷ್ಟವಾಗಿದೆ. ಸಮಾಜಕ್ಕೆ ಉತ್ತಮ ಮಾನಸಿಕ ಆರೋಗ್ಯ ಸೇವೆಯನ್ನು ನೀಡಬೇಕೆಂದರೆ, ಮೊದಲು ಆ ಸೇವೆಯನ್ನು ನೀಡುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ತಮ್ಮ ಸ್ವಂತ ಕ್ಷೇಮದ ಕುರಿತು ಮುಕ್ತವಾಗಿ ಮಾತನಾಡಲು ಹಾಗೂ ನೆರವು ಪಡೆಯಲು ಸೂಕ್ತ ವಾತಾವರಣ ಕಲ್ಪಿಸುವುದು ಅತ್ಯಗತ್ಯವಾಗಿದೆ.


Click it and Unblock the Notifications
