ದೇಶದಲ್ಲಿ ಮತ್ತೆ ಲಕ್ಷ ದಾಟಿದ ಕೊರೊನಾ; 1,15,736 ಹೊಸ ಪ್ರಕರಣ ದಾಖಲು
ನವದೆಹಲಿ, ಏಪ್ರಿಲ್ 7: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಲಕ್ಷ ದಾಟಿದೆ. ಭಾನುವಾರವಷ್ಟೆ ಕೊರೊನಾ ಪ್ರಕರಣಗಳು ಲಕ್ಷ ದಾಟಿದ್ದು, 1,03,558 ಪ್ರಕರಣಗಳು ದಾಖಲಾಗಿದ್ದವು. ಇದೀಗ ಎರಡು ದಿನಗಳ ಅಂತರದಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,15,736 ಹೊಸ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮಂಗಳವಾರ ಒಂದೇ ದಿನ 59,856 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಈವರೆಗೂ 1,17,92,135 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 630 ಮಂದಿ ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದೆ. ಮಂಗಳವಾರ 1,15,736 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ದೇಶದಲ್ಲಿ ಇದುವರೆಗೂ ಒಟ್ಟಾರೆ 1,28,01,785 ಸೋಂಕಿನ ಪ್ರಕರಣಗಳು ದಾಖಲಾಗಿವೆ. ಸದ್ಯಕ್ಕೆ 8,43,473 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಸೋಂಕಿನಿಂದ ಒಟ್ಟು 1,66,177 ಮಂದಿ ಸಾವನ್ನಪ್ಪಿದ್ದಾರೆ. ಜನವರಿ 16ರಿಂದ ಇದುವರೆಗೂ 8,70,77,474 ಮಂದಿಗೆ ಲಸಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ಪ್ರಕರಣ: ಕರ್ನಾಟಕದಲ್ಲಿ ಮಂಗಳವಾರ 6150 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ 39 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ 45107 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications