Jaggery: ಸಕ್ಕರೆ ಬೆನ್ನಲ್ಲೇ ಬೆಲ್ಲದ ಬೆಲೆ ಗಗನದತ್ತ! ಹೆಚ್ಚು ಸಿಹಿ ಉತ್ಪಾದನೆಯ ಭಾರತದಲ್ಲೇ ಏಕೆ ದರ ಹೆಚ್ಚಳ?
ಕಳೆದ ಕೆಲವು ವಾರಗಳಿಂದ, ಸಕ್ಕರೆ ಬೆಲೆ ವಿಪರೀತವಾಗಿ ಏರುತ್ತಿದೆ. ಈ ದರ ಏರಿಕೆ ಸಾಮಾನ್ಯ ಜನರ ಬಜೆಟ್ ಅನ್ನೇ ಹಾಳು ಮಾಡುತ್ತಿದೆ. ಜನ ಸಕ್ಕರೆ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ಇದೀಗ ಬೆಲ್ಲದ ಬೆಲೆ ಕೂಡಾ ವಿಪರೀತವಾಗಿ ಹೆಚ್ಚುತ್ತಿದೆ.ಬೆಲ್ಲದ ಬೆಲೆ ಸಕ್ಕರೆಯನ್ನು ಮೀರುತ್ತಿದೆ. 15-20 ದಿನಗಳ ಹಿಂದೆ 40 ರಿಂದ 50 ರೂ.ಗೆ ಸಿಗುತ್ತಿದೆ. ಒಂದು ಕೆಜಿ ಬೆಲ್ಲದ ಬೆಲೆ ಇದೀಗ 75 ರಿಂದ 90 ರೂಪಾಯಿಗೆ ತಲುಪಿದೆ.
ಗ್ರಾಹಕರಲ್ಲಿ ಮೂಡಿದೆ ಕಳವಳ
ಭಾರತ ವಿಶ್ವದ ಅತಿದೊಡ್ಡ ಬೆಲ್ಲ ಉತ್ಪಾದಕ ರಾಷ್ಟ್ರ. ವಿಶ್ವದ ಒಟ್ಟು ಬೆಲ್ಲ ಉತ್ಪಾದನೆಯಲ್ಲಿ ಭಾರತವೊಂದೇ ಶೇ. 70 ರಷ್ಟು ಬೆಲ್ಲವನ್ನು ಉತ್ಪಾದಿಸುತ್ತದೆ. 2025-26 ರ ಆರ್ಥಿಕ ವರ್ಷದಲ್ಲಿ, ಭಾರತವು 471.9 ಮೆಟ್ರಿಕ್ ಟನ್ ಬೆಲ್ಲ ಮತ್ತು ಬೆಲ್ಲ ಉತ್ಪನ್ನಗಳನ್ನು ರಫ್ತು ಮಾಡಿದೆ. ದೇಶದ ಕಬ್ಬಿನ 30% ರಷ್ಟನ್ನು ಬೆಲ್ಲ ಉತ್ಪಾದನೆಗೆ ಬಳಸಲಾಗುತ್ತದೆ. ಬೆಲ್ಲವು 2.5 ಮಿಲಿಯನ್ ರೈತರು, ಕಾರ್ಮಿಕರು ಮತ್ತು ಸಣ್ಣ ಗ್ರಾಮೀಣ ಉದ್ಯಮಿಗಳ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಬ್ಬದ ಸೀಸನ್ ಹತ್ತಿರದಲ್ಲಿದೆ. ದೇಶೀಯ ಮಾರುಕಟ್ಟೆಗಳಲ್ಲಿ ಬೆಲ್ಲದ ಬೆಲೆಯಲ್ಲಿನ ಏರಿಕೆ ಗ್ರಾಹಕರಲ್ಲಿ ಕಳವಳವನ್ನು ಉಂಟು ಮಾಡಿದೆ.

ದೇಶಾದ್ಯಂತ ಬೆಲ್ಲದ ಬೆಲೆ ಕೆಜಿಗೆ 80 ರಿಂದ 90 ರೂಪಾಯಿಗೆ ತಲುಪಿದೆ. ಪ್ರೀಮಿಯಂ ಮತ್ತು ಸಾವಯವ ಬೆಲ್ಲದ ಬೆಲೆಗಳು ಸಹ ಏರಿಕೆಯಾಗಿವೆ. ಸಾವಯವ ಬೆಲ್ಲದ ಬೆಲೆ 150 ರೂ.ಗೆ ಏರಿದೆ.
ಬೆಲ್ಲದ ಬೆಲೆ ಏರಿಕೆಗೆ ಕಾರಣವೇನು
ಕಬ್ಬಿನ ದಾಸ್ತಾನು ಖಾಲಿಯಾಗುವ ಹಂತದಲ್ಲಿದೆ. ಹೊಸ ಕಬ್ಬು ಅರೆಯುವ ಮತ್ತು ಬೆಲ್ಲದ ಕಾರ್ಖಾನೆಗಳು ಅಕ್ಟೋಬರ್-ನವೆಂಬರ್‌ನಲ್ಲಿ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಚಳಿಗಾಲದಲ್ಲಿ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಆದ್ದರಿಂದ ಸಗಟು ವ್ಯಾಪಾರಿಗಳು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಬೆಲ್ಲವನ್ನು ಖರೀದಿಸುತ್ತಿದ್ದಾರೆ. ಸಕ್ಕರೆ ಬೆಲೆಗಳು ಏರುತ್ತಿರುವುದು ಬೆಲ್ಲದ ಬೇಡಿಕೆ ಮತ್ತು ಬೆಲೆಗಳ ಮೇಲೂ ಪರಿಣಾಮ ಬೀರಿದೆ. ಇದಲ್ಲದೆ, ಈ ವರ್ಷ ಕಬ್ಬಿನ ಉತ್ಪಾದನೆ ಕೂಡಾ ಕಡಿಮೆಯಾಗಿದೆ. ಇದು ಬೆಲ್ಲ ಉತ್ಪಾದನೆಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ.
ಬೆಲ್ಲ ರಫ್ತಿನಲ್ಲಿ ದಾಖಲೆಯ ಏರಿಕೆ
ಕಳೆದ ಕೆಲವು ವರ್ಷಗಳಿಂದ ದೇಶದ ಕಬ್ಬಿನ ಉತ್ಪಾದನೆಯಲ್ಲಿ ಏರಿಕೆ ಕಾಣುತ್ತಿದೆ. ಇದರಿಂದ ಬೆಲ್ಲ ಉತ್ಪಾದನೆಯಲ್ಲಿ ಕೂಡಾ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ದೇಶೀಯ ಬಳಕೆ ಮತ್ತು ಭಾರತೀಯ ಬೆಲ್ಲಕ್ಕೆ ಅಂತರರಾಷ್ಟ್ರೀಯಮಟ್ಟದಲ್ಲಿಯೂ ಬೇಡಿಕೆ ಹೆಚ್ಚಾಗಿದೆ. 2015-16 ಮತ್ತು 2024-25ರ ನಡುವೆ, ಭಾರತದ ಬೆಲ್ಲ ಮತ್ತು ಅದರಿಂದ ಉತ್ಪಾದಿಸುವ ಸಾಂಪ್ರದಾಯಿಕ ಸಿಹಿ ತಿಂಡಿಗಳ ರಫ್ತು ಮೌಲ್ಯವು 106.5% ರಷ್ಟು ಹೆಚ್ಚಳವಾಗಿದೆ.
2015-16ರಲ್ಲಿ, ಬೆಲ್ಲದ ರಫ್ತು ಮೌಲ್ಯ 197 ಮಿಲಿಯನ್ ಡಾಲರ್ ಆಗಿದ್ದು, ಭಾರತವು 292.8 ಮೆಟ್ರಿಕ್ ಟನ್‌ಗಳನ್ನು ರಫ್ತು ಮಾಡಿದೆ. 2024-25ರಲ್ಲಿ, ಈ ರಫ್ತು 471.9 ಮೆಟ್ರಿಕ್ ಟನ್‌ಗಳಿಗೆ ಏರಿದೆ. 2025-26ರ ಏಪ್ರಿಲ್‌ನಿಂದ ಜನವರಿವರೆಗೆ ಬೆಲ್ಲ, ಬೆಲ್ಲದ ಸಿಹಿ ತಿಂಡಿಗಳ ರಫ್ತು 450.1 ಮೆಟ್ರಿಕ್ ಟನ್‌ಗಳಷ್ಟಾಗಿದೆ.
ಭಾರತದ ಬೆಲ್ಲಕ್ಕಿದೆ ಭಾರೀ ಬೇಡಿಕೆ
ಭಾರತವು ಬೆಲ್ಲದ ಅತಿದೊಡ್ಡ ರಫ್ತುದಾರ ರಾಷ್ಟ್ರ. ಇಡೀ ಜಗತ್ತಿನಲ್ಲಿ ಭಾರತೀಯ ಬೆಲ್ಲಕ್ಕೆ ಭಾರೀ ಬೇಡಿಕೆ ಇದೆ. ಭಾರತೀಯ ಬೆಲ್ಲದ ಪ್ರಮುಖ ಖರೀದಿದಾರರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ), ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಇಂಡೋನೇಷ್ಯಾ, ನೈಜೀರಿಯಾ ಮತ್ತು ನೇಪಾಳ ಸೇರಿವೆ.ಭಾರತೀಯ ಬೆಲ್ಲಕ್ಕೆ ಜಾಗತಿಕ ಮನ್ನಣೆ ಇದೆ.
ಈ ಪ್ರದೇಶಗಳ ಬೆಲ್ಲಕ್ಕೆ ಜಿಐ ಟ್ಯಾಗ್ ಸಿಕ್ಕಿದೆ
ಬೆಲ್ಲದ ವಿಶಿಷ್ಟ ಗುಣಮಟ್ಟ ಮತ್ತು ಸಾಂಪ್ರದಾಯಿಕ ವಿಧಾನಗಳನ್ನು ರಕ್ಷಿಸಲು, ಭಾರತ ಸರ್ಕಾರವು ದೇಶದ ಹಲವಾರು ಪ್ರಸಿದ್ಧ ಪ್ರದೇಶಗಳಿಂದ ಬೆಲ್ಲಕ್ಕೆ ಜಿಐ ಟ್ಯಾಗ್‌ಗಳನ್ನು ನೀಡಿದೆ.
ಸಕ್ಕರೆ vs ಬೆಲ್ಲ
ಬೆಲ್ಲ ಒಂದು ಸೂಪರ್‌ಫುಡ್. ಸಂಸ್ಕರಿಸಿದ ಸಕ್ಕರೆಯು ಹಲವಾರು ರಾಸಾಯನಿಕ ಪ್ರಕ್ರಿಯೆಗಳು ಮತ್ತು ಬ್ಲೀಚಿಂಗ್‌ಗೆ ಒಳಪಡುತ್ತದೆ. ಹೀಗಾಗಿಯೇ ಅದು ಹೆಚ್ಚು ಬಿಳಿ ಮತ್ತು ಹೊಳೆಯುವಂತೆ ಆಗುತ್ತದೆ. ಇದರಿಂದಾಗಿ ಕಬ್ಬಿನಲ್ಲಿರುವ ನೈಸರ್ಗಿಕ ಖನಿಜಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಬೆಲ್ಲವನ್ನು ನೈಸರ್ಗಿಕ ಸೂಪರ್‌ಫುಡ್ ಎಂದೇ ಕರೆಯಲಾಗುತ್ತದೆ. ಬೆಲ್ಲದ ಪೌಷ್ಟಿಕಾಂಶದ ಮೌಲ್ಯವು ಜೇನುತುಪ್ಪದ ಮೌಲ್ಯಕ್ಕೆ ಬಹುತೇಕ ಸಮಾನವಾಗಿರುತ್ತದೆ. ಇದರ ಸೂಕ್ಷ್ಮ ಪೋಷಕಾಂಶಗಳು ದೇಹದ ಚಯಾಪಚಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.


Click it and Unblock the Notifications
