ಭಾರತದಲ್ಲಿ 10,000ದ ಗಡಿ ದಾಟಿತು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ
ನವದೆಹಲಿ, ಏಪ್ರಿಲ್.14: ಕೊರೊನಾ ವೈರಸ್ ಕೂಪದಿಂದ ಪಾರಾಗಲು ಭಾರತ ಲಾಕ್ ಡೌನ್ ಘೋಷಿಸಿದ್ದರೂ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗಿತ್ತಿದೆ. ದೇಶಾದ್ಯಂತ ಕೊವಿಡ್-19 ಸೋಂಕಿತರ ಸಂಖ್ಯೆ 10,000ದ ಗಡಿ ದಾಟಿದೆ.
ಕಳೆದ 24 ಗಂಟೆಗಳಲ್ಲಿ 1,211 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಪತ್ತೆಯಾಗಿದ್ದು, ದೇಶಾದ್ಯಂತ 31 ಮಂದಿ ಮಾರಕ ಸೋಂಕಿಗೆ ಸಿಕ್ಕು ಪ್ರಾಣ ಬಿಟ್ಟಿದ್ದಾರೆ. ದೇಶಾದ್ಯಂತ ಈಗಾಗಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 10,363ಕ್ಕೆ ಏರಿಕೆಯಾಗಿದೆ.
ಇನ್ನು, ದೇಶದಲ್ಲಿ ಇದುವರೆಗೂ 339 ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದು, 1,036 ಮಂದಿ ಆರೋಗ್ಯದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ದೇಶದಲ್ಲಿ 8,988 ಮಂದಿಯಲ್ಲಿ ಕೊರೊನಾ ಸೋಂಕು:
ಭಾರತದಲ್ಲಿ 10,363 ಮಂದಿ ಕೊರೊನಾ ವೈರಸ್ ಸೋಂಕಿತರ ಪೈಕಿ 1,036 ಮಂದಿ ಗುಣಮುಖರಾಗಿದ್ದು, 339 ಮಂದಿ ಪ್ರಾಣ ಬಿಟ್ಟಿದ್ದಾರೆ. ಉಳಿದಂತೆ 8,988 ಕೊರೊನಾ ವೈರಸ್ ಸೋಂಕಿತರಿದ್ದು ದೇಶದ ಹಲವೆಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 2,334 ಮಂದಿ ಸೋಂಕಿತರಿದ್ದು ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಇರುವ ನವದೆಹಲಿಯಲ್ಲಿ 1,510 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. 1,173 ಸೋಂಕಿತರನ್ನು ಹೊಂದಿರುವ ತಮಿಳುನಾಡು ಮೂರನೇ ಸ್ಥಾನದಲ್ಲಿದೆ.












Click it and Unblock the Notifications