IMD Weather: ತಮಿಳುನಾಡಿಗೆ ಅಪ್ಪಳಿಸಿದ ಸೈಕ್ಲೋನ್, ಈ ಭಾಗಗಳಲ್ಲಿ ಜೋರು ಮಳೆ, ರೆಡ್ ಅಲರ್ಟ್ ಘೋಷಣೆ
"ದಿತ್ವಾ" (Ditwah) ಚಂಡಮಾರುತವು ಸದ್ಯ ತಮಿಳುನಾಡು ಕರಾವಳಿ ತೀರಕ್ಕೆ ತಲುಪಿದ್ದು, ಉತ್ತರಕ್ಕೆ ಚಲಿಸುವ ಸಾಧ್ಯತೆಗಳಿವೆ. ಶ್ರೀಲಂಕಾದ ಕರಾವಳಿ ಮತ್ತು ಪಕ್ಕದ ನೈರುತ್ಯ ಬಂಗಾಳ ಕೊಲ್ಲಿಯ ಮೇಲೆ ಬೀಸಿರುವ ದಿತ್ವಾ ಚಂಡಮಾರುತವು ಗಂಟೆಗೆ 7 ಕಿ.ಮೀ ವೇಗದಲ್ಲಿ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸಿದೆ. ಇದರ ಪರಿಣಾಮದಿಂದ ಇಂದು ಮತ್ತು ನಾಳೆ ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿ ಜೋರಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಾರೈಕಲ್‌ನಿಂದ ಆಗ್ನೇಯಕ್ಕೆ 240 ಕಿ.ಮೀ. ದೂರದಲ್ಲಿ, ಪುದುಚೇರಿಯ ಆಗ್ನೇಯಕ್ಕೆ 350 ಕಿ.ಮೀ. ಮತ್ತು ಚೆನ್ನೈನಿಂದ ದಕ್ಷಿಣಕ್ಕೆ 450 ಕಿ.ಮೀ. ದೂರದಲ್ಲಿ ಇದು ನೆಲೆಸಿದೆ. ಇದು ಶ್ರೀಲಂಕಾದ ಕರಾವಳಿ ಮತ್ತು ಪಕ್ಕದ ನೈರುತ್ಯ ಬಂಗಾಳ ಕೊಲ್ಲಿಯ ಮೂಲಕ ಉತ್ತರ-ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದೆ. ನವೆಂಬರ್ 30ರ ಬೆಳಗಿನ ಜಾವ ಉತ್ತರ ತಮಿಳುನಾಡು, ಪುದುಚೇರಿ ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶ ಕರಾವಳಿಯ ಬಳಿ ನೈರುತ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ರೆಡ್ ಅಲರ್ಟ್ ಘೋಷಣೆ
ದಿತ್ವಾ ಚಂಡಮಾರುತದಿಂದಾಗಿ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದೆ. ನಾಗಪಟ್ಟಣಂನಲ್ಲಿ ಭಾರೀ ಮಳೆಯಾಗಿದ್ದು, ನಗರದ ಕೆಲವು ಭಾಗಗಳಲ್ಲಿ ನೀರು ನಿಂತಿದೆ. ದಿತ್ವಾ ಚಂಡಮಾರುತವು ತಂಜಾವೂರು, ತಿರುವಿಡೈಮರುದೂರು, ಕುಂಭಕೋಣಂ, ಪಾಪನಾಸಂ, ತಿರುವೈಯಾರು, ಒರತನಾಡು, ಪಟ್ಟುಕೊಟ್ಟೈ ಮತ್ತು ಪೆರವುರಾಣಿಯಾದ್ಯಂತ ಲಘುವಾಗಿ ಸಾಧಾರಣ ಮಳೆಯನ್ನು ತರುತ್ತಿರುವುದರಿಂದ ಕಾವೇರಿ ಡೆಲ್ಟಾದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲೆಗಳಿಗೆ ರಜೆ ನೀಡಲಾಗಿದೆ. ತಮಿಳುನಾಡು ಕರಾವಳಿಗೆ ಚಂಡಮಾರುತ ಅಪ್ಪಳಿಸುತ್ತಿದ್ದಂತೆ ಐಎಂಡಿಯಿಂದ ರೆಡ್ ಅಲರ್ಟ್ ಘೋಷಣೆಯಾಗಿದೆ. ಚೆನ್ನೈನಿಂದ 50ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದೆ.
ಶ್ರೀಲಂಕಾದ ಕರಾವಳಿ ಪ್ರದೇಶಗಳು ಮತ್ತು ಬಂಗಾಳಕೊಲ್ಲಿಯ ಪಕ್ಕದ ನೈರುತ್ಯ ಭಾಗಗಳಲ್ಲಿ ಕೇಂದ್ರೀಕೃತವಾಗಿರುವ 'ದಿತ್ವಾ' ಚಂಡಮಾರುತದ ಪ್ರಭಾವದಿಂದ ತೂತುಕುಡಿಯ ಮೇಲೆ ಬೀಳುವ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ನೀರು ನಿಂತಿದೆ. ಚಂಡಮಾರುತವು ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಮತ್ತು 30 ನೇ ತಾರೀಖಿನ ಮುಂಜಾನೆ ಉತ್ತರ ತಮಿಳುನಾಡು ಕರಾವಳಿಯ ಬಳಿ ತಲುಪುವ ನಿರೀಕ್ಷೆಯಿದ್ದು, ಭಾರೀ ಮಳೆ ಮತ್ತು ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ. ದಿತ್ವಾ ಚಂಡಮಾರುತದಿಂದಾಗಿ ನವೆಂಬರ್ 30ರವರೆಗೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮತ್ತು ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಆಂಧ್ರಪ್ರದೇಶ ಮತ್ತು ರಾಯಲಸೀಮಾದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮೀನುಗಾರರಿಗೆ ಎಚ್ಚರಿಕೆ
ಮೀನುಗಾರರು ಡಿಸೆಂಬರ್ 1ರವರೆಗೆ ನೈರುತ್ಯ ಬಂಗಾಳ ಕೊಲ್ಲಿ, ಮನ್ನಾರ್ ಕೊಲ್ಲಿ, ಕೊಮೊರಿನ್ ಪ್ರದೇಶ ಮತ್ತು ತಮಿಳುನಾಡು, ಪುದುಚೇರಿ ಮತ್ತು ಶ್ರೀಲಂಕಾ ಕರಾವಳಿಗಳಲ್ಲಿ ಮತ್ತು ಹೊರಗೆ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ. ಬಂಗಾಳ ಕೊಲ್ಲಿಯ ಪಕ್ಕದ ಪ್ರದೇಶಗಳು ಮತ್ತು ಆಂಧ್ರಪ್ರದೇಶ ಕರಾವಳಿಯಲ್ಲಿ ಮತ್ತು ಹೊರಗೆ ಮೀನುಗಾರಿಕೆಗೆ ತೆರಳಬಾರದು ಎಂದು ಹೇಳಿದೆ.
ಆಗ್ನೇಯ ಅರೇಬಿಯನ್ ಸಮುದ್ರ, ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಕೇರಳ ಕರಾವಳಿಯಲ್ಲಿ ಮತ್ತು ಹೊರಗೆ ಮೀನುಗಾರಿಕೆಗೆ ನವೆಂಬರ್ 30ರವರೆಗೆ ಮೀನುಗಾರಿಕೆಗೆ ತೆರಳಬಾರದು. ಸಮುದ್ರದಲ್ಲಿರುವವರು ನವೆಂಬರ್ 30ರವರೆಗೆ ಬಂಗಾಳಕೊಲ್ಲಿ, ಮನ್ನಾರ್ ಕೊಲ್ಲಿ, ಕೊಮೊರಿನ್ ಪ್ರದೇಶ ಮತ್ತು ತಮಿಳುನಾಡು, ಪುದುಚೇರಿ, ದಕ್ಷಿಣ ಆಂಧ್ರಪ್ರದೇಶ ಮತ್ತು ಶ್ರೀಲಂಕಾ ಕರಾವಳಿಗಳಲ್ಲಿ ಮೀನುಗಾರಿಕೆಗೆ ತೆರಳಬಾರದು ಎಂದು ಎಚ್ಚರಿಕೆ ನೀಡಿದೆ.












Click it and Unblock the Notifications