Cyclone Arnab: ಇಂದಿನಿಂದ 'ಚಂಡಮಾರುತ' ಆರ್ಭಟ: ಅ.28ಕ್ಕೆ ಕರಾವಳಿಗೆ..! ಈ ರಾಜ್ಯಗಳಿಗೆ ಬಿರುಗಾಳಿ ಮಳೆ
IMD Weather Forecast: ಮುನ್ಸೂಚನೆಯಂತೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ತೀವ್ರಗೊಂಡು ಹವಾಮಾನ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆಯಾಗಿದೆ. ವೈಪರೀತ್ಯವು ತೀವ್ರ ಸ್ವರೂಪದೊಂದಿಗೆ 'ಅರ್ನಾಬ್' ಚಂಡಮಾರುತವಾಗಿ (Arnab Cyclone) ಬದಲಾಗಿದೆ. ಇದರ ಪರಿಣಾಮವಾಗಿ ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆಗಳಿವೆ ಎಂದು ಐಎಂಡಿ ತಿಳಿಸಿದೆ.
ಹವಾಮಾನ ಇಲಾಖೆ ನಿಗದಿಯಂತೆ ಸೋಮವಾರ (ಅಕ್ಟೋಬರ್ 26) ಚಂಡಮಾರುತದ ಅಬ್ಬರ ಶುರುವಾಗಿದೆ. ಪುದುಚೆರಿ, ಆಂಧ್ರ ಪ್ರದೇಶ, ಓಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿದಂತೆ ಕರಾವಳಿ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ಚಂಡಮಾರುತ ಪರಿಸ್ಥಿತಿ ಹೇಗಿದೆ?
ಪೂರ್ವ-ಮಧ್ಯ ಮತ್ತು ಹೊಂದಿಕೊಂಡಿರುವ ಆಗ್ನೇಯ ಬಂಗಾಳಕೊಲ್ಲಿಯಲ್ಲಿದ್ದ 'ಆಳವಾದ ವಾಯುಭಾರ ಕುಸಿತ ಇಂದು 'ಅರ್ನಾಬ್' (Arnab) ಎಂಬ ಚಂಡಮಾರುತವಾಗಿ ತೀವ್ರಗೊಂಡಿದೆ. ಇಂದು ಬೆಳಗ್ಗೆಯಿಂದ ಚಂಡಮಾರುತ ಗಾಳಿಯು ಗಂಟೆಗೆ ಸುಮಾರು 15 ಕಿ.ಮೀ ವೇಗದಲ್ಲಿ ಪಶ್ಚಿಮ ದಿಕ್ಕಿನತ್ತ ಚಲಿಸುತ್ತಿದ್ದು, ಸದ್ಯ ಬಂಗಾಳಕೊಲ್ಲಿಯಲ್ಲಿ ನೆಲೆಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಇದರ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಂಭವವಿದ್ದು, ಆಂಧ್ರ ಪ್ರದೇಶ, ಓಡಿಶಾ ಭಾಗದಲ್ಲಿ ಅಪ್ಪಳಿಸುವ ಲಕ್ಷಣಗಳು ಇವೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 28ಕ್ಕೆ ಕರಾವಳಿಗೆ ಅಪ್ಪಳಿಸುತ್ತೆ 'ಅರ್ನಾಬ್' ಬಿರುಗಾಳಿ
ನಾಳೆ ಮಂಗಳವಾರ (ಅ.27) ಬೆಳಗ್ಗೆ ಈ ಚಂಡಮಾರುತ 'ತೀವ್ರ ಚಂಡಮಾರುತ'ವಾಗಿ ಮತ್ತು ಮಂಗಳವಾರ ಸಂಜೆಯ ವೇಳೆಗೆ 'ಅತ್ಯಂತ ತೀವ್ರ ಚಂಡಮಾರುತ'ವಾಗಿ ಬದಲಾಗಲಿದೆ. ಮುಂದೆ ಅಕ್ಟೋಬರ್ 28ಕ್ಕೆ ಕರಾವಳಿಗೆ ಅಪ್ಪಳಿಸಲಿದೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ನೇರ ಪರಿಣಾಮ ಬೀರುವುದಿಲ್ಲ. ದೆಹಲಿಯಲ್ಲಿ ತಕ್ಕಮಟ್ಟಿಗಿನ ಬದಲಾವಣೆ ಆಗಲಿದ್ದು, ವ್ಯಾಪಕ ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.
ಈ ಚಂಡಮಾರುತವು ದಕ್ಷಿಣದ ಕರಾವಳಿ ರಾಜ್ಯಗಳಿಂದ ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶ ಕೆಲವು ಪ್ರದೇಶಗಳವರೆಗೂ ತನ್ನ ಪ್ರಭಾವ ಉಂಟು ಮಾಡಲಿದೆ. ಸದ್ಯ ಈ 'ಅರ್ನಾಬ್' ಚಂಡಮಾರುತ ಅಂಡಮಾನ್ ದ್ವೀಪಗಳ ವಿಜಯ ಪುರಂನಿಂದ ವಾಯುವ್ಯಕ್ಕೆ ಸುಮಾರು 590 ಕಿ.ಮೀ, ವಿಶಾಖಪಟ್ಟಣದಿಂದ ಪೂರ್ವ-ಆಗ್ನೇಯಕ್ಕೆ 650 ಕಿ.ಮೀ, ಕಾಕಿನಾಡೆಯಿಂದ ಪೂರ್ವ-ಆಗ್ನೇಯಕ್ಕೆ 730 ಕಿ.ಮೀ, ಮಚಲಿಪಟ್ಟಣದಿಂದ ಪೂರ್ವಕ್ಕೆ 830 ಕಿ.ಮೀ ಹಾಗೂ ಆಂಧ್ರಪ್ರದೇಶದ ಬಾಪಟ್ಲಾದಿಂದ ಪೂರ್ವಕ್ಕೆ 910 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ.
ಅಕ್ಟೋಬರ್ 27ರಿಂದ ಪಶ್ಚಿಮ-ವಾಯುವ್ಯ ದಿಕ್ಕಿನತ್ತ 'ಅರ್ನಾಬ್' ಚಂಡಮಾರುತವು ಚಲಿಸಬಹುದು. ಆಗ ಇದರ ತೀವ್ರತೆ ಹೆಚ್ಚಿರಲಿದ್ದು, ಮುಂದೆ ವಾಯುವ್ಯ ದಿಕ್ಕಿನತ್ತ ಸಾಗಿ, ಅಕ್ಟೋಬರ್ 28ರ ಮುಂಜಾನೆ ಅಥವಾ ಮಧ್ಯಾಹ್ನದ ಒಳಗೆ ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿ ಪ್ರದೇಶಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ. ಈ ಹೊತ್ತಿಗೆ ಚಂಡಮಾರುತದ ಗಾಳಿಯ ವೇಗ ಗಂಟೆಗೆ 115-125 ಕಿ.ಮೀ.ಯಿಂದ ಕೆಲವೊಮ್ಮೆ ಗಂಟೆಗೆ 140 ಕಿ.ಮೀ.ವರೆಗೂ ಕಂಡು ಬರುವ ಸಂಭವವಿದೆ ಎಂದು ಐಎಂಡಿ ತಿಳಿಸಿದೆ.
ಸೈಕ್ಲೋನ್ ಎಫೆಕ್ಟ್: ಎಲ್ಲೆಲ್ಲಿ ಧಾರಾಕಾರ ಮಳೆ ಆಗುತ್ತೆ?
ಸೋಮವಾರದವರೆಗೆ ಕರ್ನಾಟಕ, ತಮಿಳುನಾಡು, ಕೇರಳದ ಮೇಲೂ ಅತೀ ಹೆಚ್ಚಿನ ಮಳೆ ನಿರೀಕ್ಷೆ ಇತ್ತು. ಆದರೆ ಚಂಡಮಾರುತ ಸಾಗುವ ದಿಕ್ಕಿನ ಆಧಾರದಲ್ಲಿ ಸದ್ಯಕ್ಕೆ ಒಡಿಶಾ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಆಗಲಿದೆ. ಅಕ್ಟೋಬರ್ 28ರಂದು ಒಡಿಶಾದ ವಿವಿಧೆಡೆ ಮಳೆ ಆರ್ಭಟ ಹೆಚ್ಚರಲಿದ್ದು, ಇದರಿಂದ ಪ್ರವಾಹ ಉಂಟಾಗಬಹುದು. ಅನೇಕ ಸ್ಥಳಗಳಲ್ಲಿ ಹಾನಿ, ಬೆಳೆ ನಾಶ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಅಕ್ಟೋಬರ್ 28ರಂದೇ ಈ ಚಂಡಮಾರುತವು ಪೂರ್ವ ತೆಲಂಗಾಣ ಮತ್ತು ದಕ್ಷಿಣ ಛತ್ತೀಸ್‌ಗಢದ ಕೆಲವು ಭಾಗಗಳಿಗೆ ವಿಸ್ತರಣೆ ಆಗಲಿದೆ. ಆ ಭಾಗದಲ್ಲಿ ಸಾಧಾರಣದ ಭಾರೀ ಕೆಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ನಿರೀಕ್ಷೆ ಇದೆ. ಈ ವೇಳೆ ಬಿರುಗಾಳಿಯ ವೇಗ ಗಂಟೆಗೆ 60-80 ಕಿ.ಮೀ. ಕೆಲವೊಮ್ಮೆ ಗಂಟೆಗೆ 90 ಕಿ.ಮೀ. ತನಕ ವೇಗವಾಗಿ ಗಾಳಿ ಬೀಸಲಿದೆ.
ಅಕ್ಟೋಬರ್ 28 ರಿಂದ 30ರ ನಡುವಿನ ಮೂರು ದಿನಗಳಲ್ಲಿ ಚಂಡಮಾರುತ ಪರಿಣಾಮದಿಂದ ಮಧ್ಯ ಮತ್ತು ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆ ಆಗಲಿದೆ. ವಿದರ್ಭ, ಪೂರ್ವ ಮಧ್ಯಪ್ರದೇಶದಲ್ಲೂ ಅತ್ಯಧಿಕ ಮಳೆ ಆಗಲಿದೆ. ನಂತರ ಅಕ್ಟೋಬರ್ 30ಕ್ಕೆ ಬಿಹಾರ ರಾಜ್ಯದಲ್ಲಿ ಮಳೆ ಅಬ್ಬರ ಶುರುವಾಗಲಿದ್ದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ಪೂರ್ವ ಭಾಗದ ಒಂದೆರಡು ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.
ಇನ್ನೂ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಒಣ ಹವಾಮಾನ ಕಂಡು ಬರಲಿದೆ. ಜಮ್ಮು ಕಾಶ್ಮೀರ, ಲಡಾಖ್ ಪ್ರದೇಶಗಳಲ್ಲಿ ತಾಪಮಾನವು ಕಡಿಮೆಯಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಒಂದೆರಡು ಕಡೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೀನುಗಾರರಿಗೆ ಮುನ್ನೆಚ್ಚರಿಕೆ
ಪೂರ್ವ-ಮಧ್ಯ ಬಂಗಾಳಕೊಲ್ಲಿ ಮತ್ತು ಆಗ್ನೇಯ ಬಂಗಾಳಕೊಲ್ಲಿ ವ್ಯಾಪ್ತಿಯಲ್ಲಿನ ಮೀನುಗಾರರು ಮೀನುಗಾರರಿಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಭಾಗದ ಮೀನುಗಾರರು ಅಕ್ಟೋಬರ್ 27 ಮತ್ತು 28ರಂದು ಎರಡು ದಿನ ಸಮುದ್ರಕ್ಕೆ ಇಳಿಯಕೂಡದು ಎಂದು ಮುನ್ಸೂಚನೆ ನೀಡಲಾಗಿದೆ.


Click it and Unblock the Notifications
