IMD Weather Forecast: ಚಂಡಮಾರುತ ಪ್ರಸರಣ: ಈ ಭಾಗಗಳಲ್ಲಿ 5 ದಿನ ಶೀತ ಗಾಳಿ, ದಟ್ಟ ಮಂಜು ಅಲರ್ಟ್
ದೇಶಾದ್ಯಂತ ಮಿಶ್ರ ವಾತಾವರಣ ದಾಖಲಾಗಿದೆ. ಕರ್ನಾಟಕ, ತೆಲಂಗಾಣ ಸೇರಿ ಕೆಲವು ರಾಜ್ಯಗಳಲ್ಲಿ ಶೀತಗಾಳಿ ಪ್ರಭಾವ ಕಂಡು ಬರುತ್ತಿದೆ. ಕಣಿವೆ ರಾಜ್ಯಗಳಲ್ಲಿ ಕೆಲವೆಡೆ ಗುಡುಗು ಸಹಿತ ಮಳೆ ದಾಖಲಾಗಿದೆ. ಉಳಿದಂತೆ ಒಣಹವೆ ಹಾಗೂ ಹೆಚ್ಚಿನ ಚಳಿ ಕಂಡು ಬರುತ್ತಿದೆ. ಮುಂದಿನ ಐದು ದಿನ ಇದೇ ರೀತಿಯ ವಾತಾವರಣ ದೇಶದ ವಿವಿಧ ಭಾಗಗಳಲ್ಲಿ ಮುಂದುವರಿಯಲಿದೆ. ಚಳಿ ಮೇಲುಗೈ ಸಾಧಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದೆ.
ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಮಳೆ, ಚಳಿ, ಒಣಹವೆ ವಾತಾವರಣ ದಾಖಲಾಗಿದೆ. ದಕ್ಷಿಣದ ಭಾಗದ ಹಿಂದೂ ಮಹಾಸಾಗರ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಚಂಡಮಾರುತದ ತೀವ್ರ ಸುಳಿಗಾಳಿ (Cyclonic Circulation) ವಾತಾವರಣ ನಿರ್ಮಾಣವಾಗಿದೆ. ಇದು ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿದೆ. ಇದರ ಪ್ರಭಾವವು ದಕ್ಷಿಣ ಭಾರತದ ವಿವಿಧ ರಾಜ್ಯಗಳ ಹವಾಮಾನದ ಮೇಲಾಗಲಿದೆ.

ಉತ್ತರ ಭಾರತದ ಪಶ್ಚಿಮದ ಹವಾಮಾನದಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಇಲ್ಲಿ ಮಳೆ ಸುರಿಸುವ ಮಾರುತಗಳು ಸಕ್ರಿಯವಾಗಿವೆ. ಅವು ಸಮುದ್ರ ಮಟ್ಟದಿಂದ ಸುಮಾರು 5.8 ಕಿ.ಮೀ ಎತ್ತರದಲ್ಲಿವೆ. ಇವು ವಾಯುವ್ಯ ಭಾರತದ ಮೇಲೆ ಗಂಟೆಗೆ ಸುಮಾರು 130 ವೇಗದಲ್ಲಿ ಬೀಸುವ ನಿರೀಕ್ಷೆ ಇದೆ. ಇದರಿಂದ ಮಳೆ ಬರಬಹುದು. ಇಲ್ಲವೇ ವಾತಾವರಣದಲ್ಲಿ ಚಳಿ ಸೃಷ್ಟಿಗೆ ಕಾರಣವೂ ಆಗಬಹುದೆಂದು ಅಂದಾಜಿಸಲಾಗಿದೆ. ಈ ಎರಡು ವಿದ್ಯಮಾನಗಳಿಂದ ಭಾರತದ ದಕ್ಷಿಣ ಹಾಗೂ ಉತ್ತರದ ಭಾಗಗಳಲ್ಲಿ ಶೀತಗಾಳಿ ನಿರ್ಮಾಣವಾಗಲಿದೆ.
ಈ ಭಾಗಗಳಲ್ಲಿ 05 ದಿನ ಶೀತ ಅಲೆ ಎಚ್ಚರಿಕೆ
ಕರ್ನಾಟಕದ ಉತ್ತರ ಒಳನಾಡು ಹಾಗೂ ತೆಲಂಗಾಣದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ಅಲೆಯ ಪ್ರಭಾವ ಹೆಚ್ಚಾಗಿದೆ. ಇದರೊಂದಿಗೆ ಮುಂದಿನ 05 ದಿನ ಬಿಹಾರ, ಹರಿಯಾಣ, ಚಂಡೀಗಢ, ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟ ಮಂಜು, ಶೀತ ಅಲೆಯ ಎಚ್ಚರಿಕೆ ನೀಡಲಾಗಿದೆ. ಇಲ್ಲಿ ವಾರದಿಂದಲೂ ಕನಿಷ್ಠ ತಾಪಮಾನದಲ್ಲಿ ಕುಸಿತ ಕಂಡು ಬಂದಿದೆ ಮೈಕೊರೆವ ಚಳಿಯು ಜನರಿಗೆ ಸಂಕಷ್ಟ ತಂದೊಡ್ಡಿದೆ.
ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಬಿಹಾರ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಒಡಿಶಾ ಮತ್ತು ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ ಬೆಳಗ್ಗೆ ದಟ್ಟವಾದ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟ ಹಾಗೂ ಅತ್ಯಧಿಕ ಮಂಜಿನ ವಾತಾವರಣ ಮುಂದುವರಿಯಲಿದೆ. ಇಲ್ಲಿ ವಾಡಿಕೆಗಿಂತಲೂ ತೀರಾ ಕಡಿಮೆ ತಾಪಮಾನ ದಾಖಲಾತಿ ನಿರೀಕ್ಷಿಸಲಾಗಿದೆ. ಮನ್ನಾರ್ ಕೊಲ್ಲಿ ಮತ್ತು ಪಕ್ಕದ ಕೊಮೊರಿನ್ ಪ್ರದೇಶದ ಮೇಲೆ ಗಂಟೆಗೆ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಗಾಳಿಯ ವೇಗ 65 ಕಿ.ಮೀ.ವರೆಗೆ ಹೆಚ್ಚಾದರೂ ಆಗಬಹುದೆಂದು ಊಹಿಸಲಾಗಿದೆ.
ಕಣಿವೆ ರಾಜ್ಯಕ್ಕೆ ಮಳೆ ಮುನ್ಸೂಚನೆ
ಜಮ್ಮು ಕಾಶ್ಮೀರ, ಲದಾಖ್, ಶ್ರಿನಗರ ವ್ಯಾಪ್ತಿಯಲ್ಲಿ ಪಹಲ್ಗಾಮ್, ಗುಲಮಾರ್ಗ್, ಕುಪವಾರ್ ಸೇರಿದಂತೆ ಈ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ದಾಖಲಾಗಿದೆ. ಮುಂದಿನ ಮೂರು ದಿನಗಳ ಕಾಲ ಇದೇ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications