IMD Forecasts: ಕರ್ನಾಟಕ ಸೇರಿ ಈ ಭಾಗದಲ್ಲಿ 3 ದಿನ ಭಾರೀ ಮಳೆ: ಐಎಂಡಿ ಯೆಲ್ಲೋ ಅಲರ್ಟ್, ನೈಋತ್ಯ ಮಾನ್ಸೂನ್‌ಗೆ ಕ್ಷಣಗಣನೆ
IMD Forecasts: ಕರ್ನಾಟಕ ಸೇರಿದಂತೆ ಭಾರತದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಬೆಂಗಳೂರಿನಲ್ಲೂ ಮುಂದಿನ ಮೂರು ದಿನಗಳ ಅವಧಿಗೆ ಭಾರೀ ಮಳೆ ಆಗಲಿದ್ದು, ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವುದರಿಂದ ಈ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೇರಳ ರಾಜ್ಯಕ್ಕೆ ಮಾನ್ಸೂನ್ ಪ್ರವೇಶ ಚುರುಕಾಗುತ್ತಿರುವುದು ಕಂಡುಬಂದಿದ್ದು, ಮಳೆ ಶೀಘ್ರ ಆರಂಭವಾಗುವ ಸಾಧ್ಯತೆ ಇದೆ. ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿದ ಬೆನ್ನಲ್ಲೇ ಕರ್ನಾಟಕಕ್ಕೂ ನೈರುತ್ಯ ಮಾನ್ಸೂನ್ ಪ್ರವೇಶವಾಗಲಿದೆ. ಇದರ ನಡುವೆ ಕರ್ನಾಟಕದಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಹವಾಮಾನ ಮುನ್ಸೂಚನೆ ವಿವರ ಇಲ್ಲಿದೆ.
INSAT-3DS ಉಪಗ್ರಹ ಚಿತ್ರಗಳ ಪ್ರಕಾರ ಉತ್ತರ ಭಾರತದಲ್ಲಿ ಭಾರೀ ಮೋಡ ಕವಿದವಾತಾವರಣವಿದ್ದು, ಮುಂದಿನ 24 ಗಂಟೆ ಅವಧಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಭಾಗಗಳಲ್ಲಿ ದಟ್ಟವಾದ ಮೋಡ ಕವಿದ ವಾತಾವರಣ ಇದೆ.

ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ದಟ್ಟ ಮೋಡಗಳು ಕಾಣಿಸಿಕೊಂಡಿದ್ದು, ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಪೂರ್ವ ಮಾನ್ಸೂನ್ ಪ್ರಭಾವವು ಈ ಭಾಗದಲ್ಲಿ ಹೆಚ್ಚಾಗಿದೆ. ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಮಿಂಚು - ಗುಡುಗು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ, ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ.
ಅರೇಬಿಯನ್ ಸಮುದ್ರ ಹಾಗೂ ದಕ್ಷಿಣ ಭಾರತದ ಪರ್ಯಾಯ ದ್ವೀಪ ಭಾಗದಲ್ಲಿ, ವಿಶೇಷವಾಗಿ ಕೇರಳ ಮತ್ತು ಲಕ್ಷದ್ವೀಪದ ಬಳಿ ದೊಡ್ಡ ಪ್ರಮಾಣದ ಮೋಡಗಳ ಪರಿಚಲನೆ ಇದೆ. ಇದು ಮಾನ್ಸೂನ್ ಚಟುವಟಿಕೆ ಮತ್ತಷ್ಟು ಬಲವಾಗುತ್ತಿರುವ ಸೂಚನೆ ನೀಡುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ತಿಳಿಸಿದೆ. ಮೋಡ ಕವಿದ ವಾತಾವರಣವು ಸಮಭಾಜಕ ಹಿಂದೂ ಮಹಾಸಾಗರದಿಂದ ಕೇರಳ ಕರಾವಳಿಗೆ ತೇವಾಂಶಭರಿತ ಮೋಡಗಳ ಪರಿಚಲನೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಲಾಗಿದೆ. ಇದು ನೈಋತ್ಯ ಮಾನ್ಸೂನ್ ಆಗಮನದ ಸ್ಪಷ್ಟ ಆರಂಭಿಕ ಮುನ್ಸೂಚನೆ ಎಂದು ಹೇಳಲಾಗಿದೆ.
IMD Forecasts: ದಕ್ಷಿಣ ಭಾರತದಲ್ಲಿ ಭಾರೀ ಮಳೆ
ಇನ್ನು ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮುಂದಿನ 3 ದಿನಗಳ ವರೆಗೆ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಈಗಾಗಲೇ ಕೇರಳದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ. ನೈರುತ್ಯ ಮಾನ್ಸೂನ್ ಪ್ರಾರಂಭವಾಗುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಜೂನ್ 1ರ ಒಳಗೆ ಮಾನ್ಸೂನ್ ಪ್ರವೇಶವಾದರೆ, ಇದು ಇತ್ತೀಚಿನ ವರ್ಷಗಳಲ್ಲಿ ಶೀಘ್ರ ಮುಂಗಾರು ಪ್ರವೇಶಗಳಲ್ಲಿ ಒಂದಾಗಿದೆ. ಕೇರಳದ ನೈಋತ್ಯ ಪ್ರವೇಶಕ್ಕೆ ಸಂಬಂಧಿಸಿದಂತೆ ದಟ್ಟ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಬಲವಾದ ಮೋಡ ಕವಿದ ವಾತಾವರಣವೂ ಇದೆ.
ಮಾನ್ಸೂನ್ ಪ್ರವಾಹವು ಮತ್ತಷ್ಟು ಬಲಗೊಳ್ಳುತ್ತಿದ್ದಂತೆ ಮೇ 28 ಮತ್ತು ಜೂನ್ 3 ರ ನಡುವೆ ಕೇರಳದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಸಿದೆ. ಇನ್ನು ಬೆಂಗಳೂರು ಹಾಗೂ ಕರ್ನಾಟಕದಲ್ಲೂ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ವಾಯುವ್ಯ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗದಲ್ಲಿ ಇನ್ನೂ ಬಿಸಿಲು ಹೆಚ್ಚಾಗಿದೆ.












Click it and Unblock the Notifications