CISCE ಬೋರ್ಡ್ ಫಲಿತಾಂಶ ಪ್ರಕಟ: ಐಸಿಎಸ್‌ಇಯಲ್ಲಿ ಶೇ 99.77, ಐಎಸ್‌ಸಿಯಲ್ಲಿ ಶೇ 99.96 ಸಾಧನೆ ಮಾಡಿದ ಕರುನಾಡಿನ ವಿದ್ಯಾರ್ಥಿಗಳು
ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ (CISCE) ಐಸಿಎಸ್‌ಇ (10ನೇ ತರಗತಿ) ಮತ್ತು ಐಎಸ್‌ಸಿ (12ನೇ ತರಗತಿ) ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿಯ ಫಲಿತಾಂಶದಲ್ಲಿಯೂ ಕರ್ನಾಟಕದ ವಿದ್ಯಾರ್ಥಿಗಳು ತಮ್ಮ ಅದ್ಭುತ ಶೈಕ್ಷಣಿಕ ಸಾಧನೆಯನ್ನು ಮುಂದುವರಿಸಿದ್ದು, ರಾಷ್ಟ್ರಮಟ್ಟದಲ್ಲಿ ರಾಜ್ಯದ ಹೆಸರನ್ನು ಮಂಚೂಟಿಗೆ ತಂದಿದ್ದಾರೆ. ಐಸಿಎಸ್‌ಇಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಶೇಕಡಾ 99.77 ರಷ್ಟು ಬಂಪರ್ ಫಲಿತಾಂಶ ಪಡೆದರೆ, ಐಎಸ್‌ಸಿ ವಿಭಾಗದಲ್ಲಿ ಶೇಕಡಾ 99.96 ರಷ್ಟು ಅತ್ಯುನ್ನತ ಸಾಧನೆ ದಾಖಲಿಸಿದ್ದಾರೆ.
ಶೇಕಡಾವಾರು ಫಲಿತಾಂಶದ ಸಂಪೂರ್ಣ ವಿವರ
ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಐಸಿಎಸ್‌ಇ ಪರೀಕ್ಷೆಗೆ ಒಟ್ಟು 31,018 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 30,948 ವಿದ್ಯಾರ್ಥಿಗಳು ಉತ್ತೀರ್ಣರಗಿದ್ದಾರೆ. ಈ ಪೈಕಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 15,510 (ಶೇ 99.88) ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಹಾಗೆಯೇ ಪರೀಕ್ಷೆ ಬರೆದಿದ್ದ 15,438 ಬಾಲಕರಲ್ಲಿ ಶೇ 99.67 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಇನ್ನು 12ನೇ ತರಗತಿಗೆ ಸಮಾನವಾದ ಐಎಸ್‌ಸಿ ಪರೀಕ್ಷೆಯ ಅಂಕಿ-ಅಂಶಗಳನ್ನು ಗಮನಿಸುವುದಾದರೆ, ರಾಜ್ಯದ 2,673 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 2,672 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಶೇಷವೆಂದರೆ, ಪರೀಕ್ಷೆ ಬರೆದಿದ್ದ ಎಲ್ಲಾ 1,283 (ಶೇ 100) ಬಾಲಕರೂ ಪಾಸ್ ಆಗುವ ಮೂಲಕ ಗಮನ ಸೆಳೆದಿದ್ದಾರೆ. ಅದೇ ರೀತಿ 1,389 ಬಾಲಕಿಯರು (ಶೇ 99.93) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಬಾರಿ ರಾಜ್ಯಾದ್ಯಂತ ಒಟ್ಟು 454 ಶಾಲೆಗಳ ವಿದ್ಯಾರ್ಥಿಗಳು ಐಸಿಎಸ್‌ಇ ಮತ್ತು 67 ಶಾಲೆಗಳ ವಿದ್ಯಾರ್ಥಿಗಳು ಐಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರು.
ರಾಜ್ಯಮಟ್ಟದ ಸಾಧಕರು
ರಾಜ್ಯಮಟ್ಟದ ಸಾಧಕರ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ವಿದ್ಯಾರ್ಥಿಗಳು ಮಿಂಚಿದ್ದಾರೆ. ಕಾಡುಗೋಡಿಯ ವಿಬ್‌ಗ್ಯೋರ್ ಶಾಲೆಯ ವಿದ್ಯಾರ್ಥಿನಿ ಶಾಗವಿ ಭಗವಾನ್ ಅವರು ಐಸಿಎಸ್‌ಇ ಪರೀಕ್ಷೆಯಲ್ಲಿ ಬರೋಬ್ಬರಿ ಶೇ 99.80 ರಷ್ಟು ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಮ್ಮ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಶಾಗವಿ, "ನಿರಂತರ ಅಧ್ಯಯನ, ವಿಷಯಗಳ ಸ್ಪಷ್ಟ ಅರಿವು ಮತ್ತು ಸಮತೋಲನ ಜೀವನಶೈಲಿಯೇ ನನ್ನ ಈ ಸಾಧನೆಗೆ ಪ್ರಮುಖ ಕಾರಣ. ಮುಂದಿನ ದಿನಗಳಲ್ಲಿ ಖಗೋಳ ಭೌತಶಾಸ್ತ್ರ ಮತ್ತು ಅಂತರಿಕ್ಷ ವಿಜ್ಞಾನದಲ್ಲಿ ಭವಿಷ್ಯ ಕಂಡುಕೊಳ್ಳುವ ಗುರಿ ಹೊಂದಿದ್ದೇನೆ" ಎಂದು ತಿಳಿಸಿದ್ದಾರೆ.
ಇದೇ ವಿಭಾಗದಲ್ಲಿ ಗ್ರೀನ್‌ವುಡ್ ಹೈ ಇಂಟರ್‌ನ್ಯಾಷನಲ್ ಶಾಲೆಯ ಕಾಶ್ವಿ ಪೋಗ್ಲಾ ಅವರು ಶೇ 99.40 ಅಂಕ ಗಳಿಸಿದ್ದಾರೆ. ಮತ್ತೊಂದೆಡೆ, ಐಎಸ್‌ಸಿ ವಿಜ್ಞಾನ ವಿಭಾಗದಲ್ಲಿ ಕೆಂಗೇರಿ ಉಪನಗರದ ಬೆಥೆಸ್ಡಾ ಇಂಟರ್‌ನ್ಯಾಷನಲ್ ಶಾಲೆಯ ತನಿಷ್ಕಾ ಬಿ. ಮಾಜ ಶೇ 99.6 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದರೆ, ಗ್ರೀನ್‌ವುಡ್ ಹೈ ಶಾಲೆಯ ತನಿಷ್ಕಾ ಕಿಲಾರು ವಿಜ್ಞಾನ ವಿಭಾಗದಲ್ಲಿ ಶೇ 99.25 ಅಂಕ ಪಡೆದಿದ್ದಾರೆ. ಎಲ್ಲಾ ಉತ್ತೀರ್ಣ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ಶಿಕ್ಷಕರು ಶುಭಕೋರಿದ್ದಾರೆ.












Click it and Unblock the Notifications