IAF: ಕೇರಳ ಪ್ರವಾಹದ ರಕ್ಷಣಾ ಕಾರ್ಯಾಚರಣೆಗೆ ಕೋಟಿ.. ಕೋಟಿ ಕೇಳಿದ ಕೇಂದ್ರ ಸರ್ಕಾರ!
ಕೇರಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಲು.. ಸಾಲು ದುರಂತಗಳು ಸಂಭವಿಸಿವೆ. ಈಚೆಗೆ ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ದುರಂತದಿಂದ ಅಲ್ಲಿನ ಜನ ಸುಧಾರಿಸಿಕೊಂಡಿಲ್ಲ. ವಯನಾಡ್‌ನಲ್ಲಿ ಈಚೆಗೆ ತೀವ್ರ ಭೂಕುಸಿತಗಳು ಸಂಭವಿಸಿತ್ತು. ಆದರೆ, ಕೇಂದ್ರ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ ಎನ್ನುವ ಆರೋಪಗಳ ನಡುವೆಯೇ ಕೇರಳ ಸರ್ಕಾರದಿಂದಲೇ ರಕ್ಷಾಣಾ ಕಾರ್ಯಾಚರಣೆಯ ಪರಿಹಾರವನ್ನು ಕೇಂದ್ರ ಬಿಜೆಪಿ ಸರ್ಕಾರ ಕೇಳಿದೆ. ಕೇಂದ್ರ ಸರ್ಕಾರದ ಈ ನಡೆಯು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೇರಳದ ವಯನಾಡ್ ದುರಂತವು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ವಯನಾಡ್‌ನಲ್ಲಿ ನೂರಾರು ಜನ ಈ ದುರಂತ ಭೂಕುಸಿತದಲ್ಲಿ ಸಾವನ್ನಪ್ಪಿದ್ದರು. ಅಲ್ಲದೆ ಸಾವಿರಾರು ಜನ ಮನೆಗಳನ್ನು ಕಳೆದಕೊಂಡಿದ್ದರು. ಈ ದುರಂತದಿಂದ ವಯನಾಡ್‌ನ ಜನ ಇನ್ನೂ ಚೇತರಿಸಿಕೊಂಡಿಲ್ಲ. ಈ ರೀತಿ ಇರುವಾಗಲೇ ಕೇಂದ್ರ ಬಿಜೆಪಿ ಸರ್ಕಾರವು ಕೇರಳದ ಸರ್ಕಾರ ಹಾಗೂ ಅಲ್ಲಿನ ಜನರಿಗೆ ಶಾಕ್ ಕೊಟ್ಟಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸಲು 2,000 ಕೋಟಿ ರೂಪಾಯಿ ನೀಡುವಂತೆ ಕೇರಳ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡುತ್ತಲ್ಲೇ ಇದೆ. ಆದರೆ, ಕೇಂದ್ರ ಸರ್ಕಾರ ಈ ಪರಿಹಾರ ಮೊತ್ತವನ್ನು ನೀಡುವ ಬಗ್ಗೆ ಯಾವುದೇ ಉತ್ಸಾಹ ತೋರಿಸುತ್ತಿಲ್ಲ.

ಇದರ ನಡುವೆಯೇ ಕೇಂದ್ರ ಸರ್ಕಾರವು 2006 ರಿಂದ ಭಾರತೀಯ ವಾಯುಪಡೆ (IAF) ಕೇರಳದಲ್ಲಿ ನಡೆಸಿದ ವಿವಿಧ ಪರಿಹಾರ ಕಾರ್ಯಾಚರಣೆಗಳಿಗಾಗಿ 132.61 ಕೋಟಿ ರೂಪಾಯಿ ನೀಡುವಂತೆ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದು, ಇದು ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಕೇರಳದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, 2019ರ ಪ್ರವಾಹ ಮತ್ತು ವಯನಾಡ್ ಭೂಕುಸಿತ ಸೇರಿದಂತೆ ಹಲವಾರು ವಿಪತ್ತುಗಳನ್ನು ಪಟ್ಟಿ ಮಾಡಲಾಗಿದೆ. ಭಾರತೀಯ ವಾಯುಪಡೆಯು ಕೇರಳದ ಪ್ರವಾಹ ಹಾಗೂ ವಿಪತ್ತಿನ ಸಂದರ್ಭದಲ್ಲಿ ನಡೆಸಿದ ಏರ್‌ಲಿಫ್ಟಿಂಗ್ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಶುಲ್ಕ ನಿಗದಿ ಮಾಡಲಾಗಿದೆ. ಅಲ್ಲದೆ ಈ ಮೊತ್ತವನ್ನು ಸಾಧ್ಯವಾದಷ್ಟು ಬೇಗ ಪಾವತಿ ಮಾಡುವಂತೆ ಕೇರಳ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಭೂಕುಸಿತದಿಂದ ಹಾನಿಗೊಳಗಾದ ವಯನಾಡ್‌ನಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳಿಗಾಗಿ ಭಾರತೀಯ ವಾಯುಪಡೆಯು 8,91,23,500 ರೂಪಾಯಿ ಸೇರಿದಂತೆ ವಿವಿಧ ಪ್ರವಾಹ ಹಾಗೂ ವಿಪತ್ತು ಕಾರ್ಯಾಚರಣೆಗೆ ದರ ನಿಗದಿ ಮಾಡಲಾಗಿದೆ. ಇನ್ನು ಭಾರತೀಯ ವಾಯು ಪಡೆಯು ಕೇರಳದಲ್ಲಿನ ರಕ್ಷಣಾ ಕಾರ್ಯಾಚರಣೆಗಾಗಿ ಬಿಲ್ ಕಳುಹಿಸಿದ್ದು ಇದೇ ಮೊದಲಲ್ಲ ಎನ್ನಲಾಗಿದೆ. 2020ರಲ್ಲಿ, 2018ರ ಪ್ರವಾಹದ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಕೇರಳಕ್ಕೆ 113.69 ಕೋಟಿ ರೂಪಾಯಿ ಪಾವತಿ ಮಾಡಲು ಹೇಳಲಾಗಿತ್ತು. 2019 ರಲ್ಲಿ, 2018 ರ ಪ್ರವಾಹದ ಸಮಯದಲ್ಲಿ ಜನರ ರಕ್ಷಣೆಗಾಗಿ ಭಾರತೀಯ ವಾಯುಪಡೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿದ ಕಾರಣಕ್ಕಾಗಿ 102.6 ಕೋಟಿ ರೂಪಾಯಿ ಮೊತ್ತವನ್ನು ಪಾವತಿ ಮಾಡುವಂತೆ ಕೇರಳಕ್ಕೆ ಪತ್ರ ಬರೆಯಲಾಗಿತ್ತು.

ಸಂಕಷ್ಟದ ಸಮಯದಲ್ಲಿ ಆರ್ಥಿಕ ನೆರವು ನೀಡದೆ. ಈ ರೀತಿ ಪರಿಹಾರ ಕೇಳುತ್ತಿರುವುದಕ್ಕೆ ಕೇಂದ್ರ ಸರ್ಕಾರದ ನಡೆಗೆ ಕೇರಳದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.












Click it and Unblock the Notifications