ನಾನು ಬಿಜೆಪಿಯ ಐಟಂ ಗರ್ಲ್ - ಸಮಾಜವಾದಿ ನಾಯಕ ಅಜಂ ಖಾನ್
ಲಕ್ನೋ, ಜೂನ್ 29: "ನಾನು ಬಿಜೆಪಿ ಐಟಂ ಗರ್ಲ್. ಅವರಿಗೆ ನನ್ನನ್ನು ಬಿಟ್ಟು ಮಾತನಾಡಲು ಬೇರೆ ಯಾರೂ ಸಿಗುವುದಿಲ್ಲ," ಎಂದು ಎಸ್ಪಿ ನಾಯಕ ಅಜಂ ಖಾನ್ ಹೇಳಿದ್ದಾರೆ.
"ಅವರು (ಬಿಜೆಪಿ) ಇಲ್ಲಿ ಚುನಾವಣೆಯನ್ನೂ ನನ್ನನ್ನು ಗುರಿಯಾಗಿಸಿಕೊಂಡು ಎದುರಿಸಿದರು," ಎಂದು ಅಜಂ ಖಾನ್ ಹೇಳಿದ್ದಾರೆ.
ಸೇನೆ ಕುರಿತು ಬುಧವಾರ ಅಜಂ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ತದನಂತರ ಇಂದು ಮಾತನಾಡಿದ ಅಜಂ ಖಾನ್ ತಾವು ಬಿಜೆಪಿಯ ಪಾಲಿಗೆ 'ಐಟಂ ಗರ್ಲ್' ಎಂದು ಹೇಳಿದ್ದಾರೆ.
"ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ನನ್ನಿಂದಾಗಿ ಸೇನೆಯ ನೈತಿಕ ಸ್ಥೈರ್ಯ ಹೇಗೆ ಕುಸಿಯಲು ಸಾಧ್ಯ? ಪ್ರಧಾನಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗಲೇ ಸೈನಿಕರ ನೈತಿಕ ಸ್ಥೈರ್ಯ ಕುಸಿದಿದೆ," ಎಂದು ಅಜಂ ಖಾನ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಬುಧವಾರ ಮಾತನಾಡಿದ್ದ ಅಜಂ ಖಾನ್, "ಕಾಶ್ಮೀರ, ಅಸ್ಸಾಂ, ಜಾರ್ಖಂಡ್ ಗಳಲ್ಲಿ ಸೈನಿಕರ ಮೇಲೆ ಮಹಿಳೆಯರು ದಾಳಿ ನಡೆಸಿದ್ದಾರೆ. ಮಾತ್ರವಲ್ಲ ಅವರ ಗುಪ್ತಾಂಗಳನ್ನು ಕತ್ತರಿಸಿದ್ದಾರೆ. ಸತ್ಯ ಏನೆಂದರೆ ಮಹಿಳೆಯರು ಅನಿವಾರ್ಯವಾಗಿ ಸೇನೆಯ ಅತ್ಯಾಚಾರಿಗಳ ವಿರುದ್ಧ ತಿರುಗಿ ಬೀಳಬೇಕಾಗಿದೆ. ಇದು ಹಿಂದೂಸ್ಥಾನ ತಲೆ ತಗ್ಗಿಸುವ ವಿಚಾರ," ಎಂದು ಹೇಳಿದ್ದರು.