ಇಎಂಐ ಕಟ್ಟಲು 100ಕ್ಕೂ ಹೆಚ್ಚು ಮಂದಿಗೆ ಹನಿಟ್ರ್ಯಾಪ್ ಮಾಡಿ ಸುಲಿಗೆ: ದಂಪತಿ ಬಂಧನ
ಸುಮಾರು 100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿ, ಅವರ ಖಾಸಗಿ ಕ್ಷಣಗಳ ವೀಡಿಯೊ ಚಿತ್ರೀಕರಣ ಮಾಡಿ ಹಣ ವಸೂಲಿ ಮಾಡುತ್ತಿದ್ದ ಕರೀಂನಗರದ ದಂಪತಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಜನವರಿ 14ರಂದು ಬೆಳಕಿಗೆ ಬಂದಿದ್ದು, ಆರ್ಥಿಕ ಸಂಕಷ್ಟದಿಂದ ಇಎಂಐ ಪಾವತಿ ಮಾಡಲು ಈ ದಂಧೆಗೆ ಇಳಿದಿದ್ದಾಗಿ ತಿಳಿದುಬಂದಿದೆ.
ಕರೀಂನಗರ ಗ್ರಾಮೀಣ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯಂತೆ ಬಂಧಿತ ದಂಪತಿ ಮೂಲತಃ ಮಂಚೇರಿಯಲ್ ಜಿಲ್ಲೆಯವರು. ಕಳೆದ ಕೆಲವು ವರ್ಷಗಳಿಂದ ಕರೀಂನಗರದಲ್ಲಿ ವಾಸವಾಗಿದ್ದರು. ಪತಿಯ ಮಾರ್ಬಲ್ ಹಾಗೂ ಇಂಟೀರಿಯರ್ ಡೆಕೋರೇಷನ್ ವ್ಯವಹಾರ ನಷ್ಟಕ್ಕೆ ಒಳಗಾಗಿದ್ದು, ಮನೆಯ ಫ್ಲಾಟ್‌ಗೆ ಕಟ್ಟಬೇಕಾದ ಇಎಂಐ ಪಾವತಿ ಮಾಡಲು ತೀವ್ರ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದೆ. ಈ ಆರ್ಥಿಕ ಸಂಕಷ್ಟದ ಕಾರಣ, ದಂಪತಿ ಅಪರಾಧದ ದಾರಿಯನ್ನು ಹಿಡಿದಿದ್ದಾರೆ ಎನ್ನಲಾಗಿದೆ.

ಪತಿಯಿಂದಲೇ ಪತ್ನಿಯ ನಗ್ನ ಫೋಟೋ ಅಪ್‌ಲೋಡ್
ಪತಿಯೇ ತನ್ನ ಪತ್ನಿಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಜನರನ್ನು ಆಕರ್ಷಿಸುವುದು ಇವರ ಮೊದಲ ಹೆಜ್ಜೆಯಾಗಿತ್ತು. ಬಳಿಕ ಮನೆಗೆ ಬಂದವರೊಂದಿಗೆ ಪತ್ನಿಯ ಖಾಸಗಿ ಕ್ಷಣಗಳನ್ನು ಕೊಠಡಿಯಲ್ಲಿ ಅಡಗಿಸಿದ್ದ ಕ್ಯಾಮೆರಾ ಮೂಲಕ ಪತಿ ಚಿತ್ರೀಕರಿಸುತ್ತಿದ್ದ ಎಂಬ ಆಘಾತಕಾರಿ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.
ನಂತರ ಆ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ, ಹಣ ವಸೂಲಿ ಮಾಡಲಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ದಂಪತಿ ಬರೋಬ್ಬರಿ 60 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ಹಣದಿಂದ ಅವರು ಒಂದು ಫ್ಲಾಟ್ ಹಾಗೂ ಕಾರು ಖರೀದಿಸಿದ್ದು, ಇವೆರಡನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?
ಇತ್ತೀಚೆಗೆ ಈ ದಂಪತಿ ಈ ಹಿಂದೆ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಒಬ್ಬ ವ್ಯಕ್ತಿಯನ್ನು ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದರು. ಈಗಾಗಲೇ ಆತನಿಂದ 12 ಲಕ್ಷ ರೂಪಾಯಿ ವಸೂಲಿ ಮಾಡಿದ್ದ ಅವರು, ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ಕೊಡದಿದ್ದರೆ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮಾನಸಿಕವಾಗಿ ನೊಂದ ಆ ವ್ಯಕ್ತಿ ತನ್ನ ಸ್ನೇಹಿತರಿಗೆ ಈ ಬಗ್ಗೆ ತಿಳಿಸಿದ್ದು, ಅವರ ಸಲಹೆಯಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದಿಂದ ಹನಿಟ್ರ್ಯಾಪ್ ಅಪರಾಧಗಳ ಗಂಭೀರತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಆಮಿಷಗಳಿಗೆ ಬಲಿಯಾಗಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಬೆಳಕಿಗೆ ಬಂದ ಹನಿಟ್ರ್ಯಾಪ್ ಪ್ರಕರಣಗಳು, ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಆಮಿಷಗಳಿಗೆ ಬಲಿಯಾಗುವುದು ಅಪಾಯಕಾರಿಯಾಗಿದೆ. ಕ್ಷಣಿಕ ಆಕರ್ಷಣೆ, ಕುತೂಹಲ ಅಥವಾ ರಹಸ್ಯ ಸಂಬಂಧಗಳು ನಿಮ್ಮ ಮಾನ, ಹಣ ಮತ್ತು ಭವಿಷ್ಯವನ್ನು ಅಪಾಯಕ್ಕೆ ತಳ್ಳಬಹುದು ಎಂದು ತೆಲಂಗಾಣ ಪೊಲೀಸರು ಈ ಪ್ರಕರಣ ಉಲ್ಲೇಖಿಸಿ ಎಚ್ಚರಿಸಿದ್ದಾರೆ.












Click it and Unblock the Notifications