ಭಾರತೀಯ ಮಹಿಳೆಯರ ಸೀರೆಗೆ ಬ್ಲೌಸ್ ಕಂಡುಹಿಡಿದಿದ್ದು ಯಾರು? ರವಿಕೆಗಿದೆ 150 ವರ್ಷಗಳ ರೋಚಕ ಇತಿಹಾಸ
ಭಾರತದಲ್ಲಿ ಸಾಂಪ್ರಾದಾಯಿಕ ಉಡುಗೆ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಪುರುಷರಿಗೆ ಪಂಚೆ-ಶರ್ಟು, ಹಾಗೆಯೇ ಮಹಿಳೆಯರ ವಿಷಯಕ್ಕೆ ಬಂದರೆ ಸುಂದರವಾದ ಸೀರೆ ಮತ್ತು ಅದಕ್ಕೆ ಹೊಂದುವ ಚೆಂದದ ಬ್ಲೌಸ್ ಅಂದರೆ ರವಿಕೆ. ಕೆಲವರು ಈ ಸೀರೆ ಮತ್ತು ರವಿಕೆ ಶತಮಾನಗಳಿಂದಲೂ ಜೊತೆ ಜೋತೆಯಾಗಿಯೇ ಬಂದಿದೆ ಎಂದುಕೊಂಡಿರುತ್ತಾರೆ. ಆದರೆ ವಾಸ್ತವದಲ್ಲಿ ಇಂದು ನಾವೆಲ್ಲರು ನೋಡುತ್ತಿರುವ ಈ ಹೊಲಿದ ಬ್ಲೌಸ್‌ಗೆ ಕೇವಲ 150 ವರ್ಷಗಳ ಇತಿಹಾಸ ಇರುವುದಷ್ಟೇ ಎನ್ನುವುದು ಹಲವರಿಗೆ ಗೊತ್ತೇಯಿಲ್ಲ.
ಭಾರತದ ಫ್ಯಾಷನ್ ಎನ್ನುವ ಲೋಕದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದ ಈ ಬದಲಾವಣೆಯ ಹಿಂದೆ ರವೀಂದ್ರನಾಥ್ ಟ್ಯಾಗೋರ್ ಅವರ ಕುಟುಂಬದ ಮಹಿಳೆಯೊಬ್ಬರ ರೋಚಕ ಕಥೆಯಿದೆ ಎನ್ನುವುದು ನಿಮಗೆ ಗೊತ್ತಾ? ಹಾಗಾದರೆ, ಭಾರತೀಯ ಮಹಿಳೆಯರ ಉಡುಪಿನಲ್ಲಿ ಈ ಮಹತ್ವದ ಕ್ರಾಂತಿಗೆ ಕಾರಣವಾಗಿದ್ದು ಯಾರು? ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಶತಮಾನಗಳ ಕಾಲ ರವಿಕೆ ಇಲ್ಲದೆಯೇ ನಡೆಯುತ್ತಿತ್ತು ಸೀರೆ ಉಡುವ ಶೈಲಿ
ಪ್ರಾಚೀನ ಕಾಲದಲ್ಲಿ ಭಾರತೀಯ ಮಹಿಳೆಯರು ಹೊಲಿದ ರವಿಕೆ ಹಾಗೂ ಒಳಲಂಗ ಅಂದರೆ ಪೆಟಿಕೋಟ್ ಇಲ್ಲದೆನೇ ಸೀರೆ ಉಡುತ್ತಿದ್ದರು. ಸಾಂಚಿ, ಭಾರ್ಹುತ್ ಮತ್ತು ಅಮರಾವತಿಯ ಪ್ರಾಚೀನ ಶಿಲ್ಪಕಲೆಗಳನ್ನ ಗಮನಿಸಿದರೆ, ಸಹಜವಾಗಿ ಮಹಿಳೆಯರು ಹೊಲಿಗೆಯಿಲ್ಲದ ಬಟ್ಟೆಗಳನ್ನ ಧರಿಸುತ್ತಿದ್ದುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಂದಿನ ಕಾಲದಲ್ಲಿ ಇದೇ ರೀತಿಯಾಗಿ ಬಟ್ಟೆ ಧರಿಸಬೇಕು ಎನ್ನುವ ಯಾವುದೇ ರೀತಿಯ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಇರಲಿಲ್ಲ. ಬದಲಿಗೆ ಅವರು ತೊಡುತ್ತಿದ್ದ ಉಡುಗೆ ಪ್ರಮುಖವಾಗಿ ಹವಾಮಾನ, ಅಲ್ಲಿನ ಪ್ರಾದೇಶಿಕ ಸಂಪ್ರದಾಯ ಹಾಗೂ ಅವರ ಅನುಕೂಲತೆಗೆ ತಕ್ಕಂತೆ ನಿರ್ಧಾರವಾಗುತ್ತಿತ್ತೇ ಹೊರತು ಬೇರೆ ಏನು ಇರುತ್ತಿರಲಿಲ್ಲ. ಆದರೆ ಭಾರತಕ್ಕೆ ಯಾವಾಗ ಬ್ರಿಟಿಷರ ಎಂಟ್ರಿ ಕೊಟ್ರೋ ಆಗಿನಿಂದ ಜನರಲ್ಲಿ ಉಡುಗೆ-ತೊಡುಗೆಗಳ ಕುರಿತಾದ ದೃಷ್ಟಿಕೋನ ಬದಲಾಗತೊಡಗಿತು ನೋಡಿ.
ಜ್ಞಾನದಾನಂದಿನಿ ದೇವಿ ಫ್ಯಾಷನ್ ಕ್ರಾಂತಿ
ವಿಕ್ಟೋರಿಯನ್ ಸಂಸ್ಕೃತಿಯ ಪ್ರಭಾವ ಭಾರತದಲ್ಲಿ ಹೆಚ್ಚಾದಂತೆ, ಬಂಗಾಳದ ಉನ್ನತ ವರ್ಗದ ಮಹಿಳೆಯರ ಉಡುಗೆಯ ಶೈಲಿಯನ್ನ ಬ್ರಿಟಿಷರು ಅಸಭ್ಯ ಎಂದು ಟೀಕಿಸಲು ಶುರು ಮಾಡುತ್ತಾರೆ. ಇದೇ ಸಮಯದಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರ ನಾದಿನಿ ಅಂದರೆ ಸಹೋದರನ ಪತ್ನಿ ಜ್ಞಾನದಾನಂದಿನಿ ದೇವಿ ಅವರು ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ಸೀರೆ ಉಟ್ಟಿದ್ದ ಒಂದೇ ಕಾರಣಕ್ಕೆ ಇವರನ್ನಾ ಬ್ರಿಟಿಷ್ ಕ್ಲಬ್‌ವೊಂದಕ್ಕೆ ಪ್ರವೇಶ ನಿರಾಕರಿಸಲಾಯಿತು. ಈ ಘಟನೆಯಿಂದ ಹಿಂದೆ ಸರಿಯದ ಜ್ಞಾನದಾನಂದಿನಿ, ಸೀರೆಯನ್ನ ತ್ಯಜಿಸುವ ಬದಲಿಗೆ ಸೀರೆ ಉಡುವ ಶೈಲಿಯನ್ನೇ ಆಧುನೀಕರಣಗೊಳಿಸಲು ನಿರ್ಧರಿಸಿದರು.
ಬಾಂಬೆಯ ಪಾರ್ಸಿ ಮಹಿಳೆಯರು ಹೊಲಿದ ಬ್ಲೌಸ್, ಪೆಟಿಕೋಟ್ ಮತ್ತು ಹೆಗಲ ಮೇಲೆ ಸೆರಗು ಹಾಕಿಕೊಂಡು ಸೀರೆ ಉಡುತ್ತಿದ್ದ ಸುಂದರ ಶೈಲಿಯನ್ನಾ ನೋಡಿದ ಜ್ಞಾನದಾನಂದಿನಿ ದೇವಿ ಅವರು ತುಂಬ ಆಕರ್ಷಿತರಾದರು. ನಂತರ ಆ ಶೈಲಿಯನ್ನೇ ಬಂಗಾಳಿ ಮಹಿಳೆಯರಿಗೆ ಅನುಕೂಲವಾಗುವಂತೆ ಸ್ವಲ್ಪ ಮಾರ್ಪಡಿಸಿ ಹೊಸದೊಂದು ಫ್ಯಾಷನ್ ಪರಿಚಯಿಸಿದರು.
You probably own a saree with a blouse. But here's something no one tells you: the blouse isn't as old as the saree.
— The Better India (@thebetterindia) August 5, 2026
For centuries, women across India wore sarees without stitched blouses.
Then one woman from the Tagore family quietly sparked a fashion revolution that changed… pic.twitter.com/VJNTuTtTc0
ಬ್ರಾಹ್ಮಿಕಾ ಸೀರೆ ಶೈಲಿಯ ಉದಯ
ಜ್ಞಾನದಾನಂದಿನಿ ದೇವಿ ಅವರು ಪರಿಚಯಿಸಿದ ಈ ಹೊಸ ಶೈಲಿಯು ನಂತರದ ದಿನಗಳಲ್ಲಿ 'ಬ್ರಾಹ್ಮಿಕಾ ಸೀರೆ' ಎಂದು ಪ್ರಸಿದ್ಧಿ ಪಡೆಯಿತು. ಹೊಲಿದ ರವಿಕೆ, ಒಳಲಂಗ ಹಾಗೂ ಪಿನ್ ಮಾಡಿದ ಸೆರಗಿನ ಈ ಶೈಲಿಯು ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆತ್ಮವಿಶ್ವಾಸದಿಂದ ಓಡಾಡಲು ನೆರವಾಯಿತು ನೋಡಿ. ಸೀರೆಯನ್ನ ಪದೇ ಪದೇ ಸರಿಪಡಿಸಿಕೊಳ್ಳುವ ಕಿರಿಕಿರಿಯಿಲ್ಲದೆ ಮಹಿಳೆಯರು ಶಿಕ್ಷಣ ಪಡೆಯಲು, ಉದ್ಯೋಗಕ್ಕೆ ತೆರಳಲು ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನ ಪಾಲ್ಗೊಳ್ಳಲು ಈ ಶೈಲಿ ಸ್ವಾತಂತ್ರ್ಯ ನೀಡಿತು.
ಆಧುನಿಕ ಸೀರೆ ಬ್ಲೌಸ್ ಇತಿಹಾಸ: ಸಂಪ್ರದಾಯದಿಂದ ಫ್ಯಾಷನ್ ಸಿಂಬಲ್ ವರೆಗೆ
ಬಂಗಾಳದಲ್ಲಿ ಆರಂಭವಾದ ಈ ಶೈಲಿಯು ಬೇಗನೇ ಇಡೀ ದೇಶಾದ್ಯಂತ ಜನಪ್ರಿಯವಾಯಿತು. ಬ್ರಿಟಿಷ್ ವಸಾಹತುಶಾಹಿ ಸಮಾಜಕ್ಕೆ ಹೊಂದಿಕೊಳ್ಳಲು ಅನಿವಾರ್ಯವಾಗಿ ಆರಂಭವಾದ ಈ ಬದಲಾವಣೆ ಕಾಲಾಂತರದಲ್ಲಿ ಭಾರತೀಯ ಮಹಿಳೆಯರ 'ಸಾಂಪ್ರದಾಯಿಕ' ಶೈಲಿಯಾಗಿ ಬದಲಾಯಿತು.
ಒಂದು ಕಾಲದಲ್ಲಿ ಕೇವಲ ಸಭ್ಯತೆಯ ಸಂಕೇತವಾಗಿ ಪರಿಚಯವಾದ ಬ್ಲೌಸ್, ಇಂದು ಆಧುನಿಕ ಫ್ಯಾಷನ್ ಜಗತ್ತಿನ ಪ್ರಮುಖ ಭಾಗವಾಗಿದೆ. ಸಾಂಪ್ರದಾಯಿಕ ಕೈಮಗ್ಗದ ವಿನ್ಯಾಸಗಳಿಂದ ಹಿಡಿದು ಆಧುನಿಕ ಡಿಸೈನರ್ ಸಿಲೂಯೆಟ್‌ಗಳವರೆಗೆ ಬ್ಲೌಸ್ ಇಂದು ಮಹಿಳೆಯರ ಸೃಜನಶೀಲತೆಯ ಹಾಗೂ ಆತ್ಮವಿಶ್ವಾಸದ ಪ್ರತೀಕವಾಗಿ ಗುರುತಿಸಿಕೊಂಡಿದೆ.


Click it and Unblock the Notifications
