Language Dispute: ಏನಿದು ದ್ವಿಭಾಷಾ - ತ್ರಿಭಾಷಾ ಸೂತ್ರ, ಕನ್ನಡಿಗರಿಗೆ ಅನ್ಯಾಯವಾಗಿದ್ದು ಎಲ್ಲಿ ?
Language Dispute: ದೇಶದಲ್ಲಿ ಈಗ ದ್ವಿಭಾಷಾ ಹಾಗೂ ತ್ರಿಭಾಷಾ ಸೂತ್ರದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ತಮಿಳುನಾಡು ಸರ್ಕಾರವು ಯಾವುದೇ ಕಾರಣಕ್ಕೂ ನಾವು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಪ್ರಸ್ತಾಪಿಸಲಾದ ತ್ರಿಭಾಷಾ ಸೂತ್ರವನ್ನು ನಾವು ಅಳವಡಿಸಿಕೊಳ್ಳುವುದಿಲ್ಲ ಎಂದು ತಮಿಳುನಾಡಿನ ಆಡಳಿತ ರೂಢ ಪಕ್ಷ ಡಿಎಂಕೆ ಹೇಳಿದೆ. ಇದು ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳದೆ ಇರುವ ಏಕೈಕ ರಾಜ್ಯವಾಗಿ ತಮಿಳುನಾಡು ಸರ್ಕಾರ ಉಳಿದಿದೆ. ಇಷ್ಟಕ್ಕೂ ಏನಿದು ದ್ವಿಭಾಷಾ - ತ್ರಿಭಾಷಾ ಸೂತ್ರ, ಶಿಕ್ಷಣದ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ. ಕರ್ನಾಟಕಕ್ಕೆ ಈ ವಿಚಾರದಲ್ಲಿ ಅನ್ಯಾಯವಾಗಿದ್ದು ಹೇಗೆ ಎನ್ನುವ ವಿವರ ಇಲ್ಲಿದೆ.
ಕೇಂದ್ರ ಬಿಜೆಪಿ ಸರ್ಕಾರ ಹಾಗೂ ತಮಿಳುನಾಡಿನ ನಡುವೆ ಭಾಷಾ ವಿಚಾರವಾಗಿ ಸಮರವೇ ನಡೆದಿದೆ. ಈ ವಿವಾದ ಇದೀಗ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಹಿಂದಿ ಹೇರಿಕೆ, ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ತಮಿಳುನಾಡಿನ ಸರ್ಕಾರವು ತನ್ನ ಪಟ್ಟು ಸಡಿಲಿಸುತ್ತಿಲ್ಲ. ಅಷ್ಟೇ ಅಲ್ಲ ಈ ವಿಚಾರದಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಒಂದಾಗುತ್ತಿವೆ. ದಕ್ಷಿಣ ಭಾರತದಲ್ಲಿ ವಿವಿಧ ರಾಜ್ಯಗಳು ಒಂದಾಗುವುದಕ್ಕೆ ಇದು ವೇದಿಕೆ ಕಲ್ಪಿಸಿದಂತೆ ಆಗಿದೆ.

ತ್ರಿಭಾಷಾ ಸೂತ್ರ ಎಂದರೇನು: ತ್ರಿಭಾಷಾ ಸೂತ್ರವು ಭಾರತದಲ್ಲಿ ಸ್ವಾತಂತ್ರ್ಯ ನಂತರದಿಂದ ಸಂಘರ್ಷದ ಹಾದಿಯಾಗಿಯೇ ಉಳಿದಿದೆ. ಇನ್ನು ಹಿಂದಿ ಭಾಷೆಯ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಒಂದೇ ಎನ್ನುವ ಆರೋಪವೂ ಇದೆ. ಇದೀಗ 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ತ್ರಿಭಾಷಾ ಸೂತ್ರ ಅಂದರೆ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕು ಎಂದು ಶಿಫಾರಸ್ಸು ಮಾಡುತ್ತದೆ. ಇದರಲ್ಲಿ ಎರಡು ಭಾಷೆಗಳು ಭಾರತದ್ದಾಗಿರಬೇಕು. ಈ ಸೂತ್ರವು ಸಮಾನವಾಗಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಅನ್ವಯಿಸುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿದ್ದು. ಇದು ಯಾವುದೇ ರಾಜ್ಯಗಳ ಮೇಲೆ ಹೇರಿಕೆಯಿಲ್ಲದೆ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕೊಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶದಲ್ಲಿ ತ್ರಿಭಾಷಾ ಸೂತ್ರ ಪ್ರಾರಂಭವಾಗಿದ್ದು ಯಾವಾಗ: ದೇಶದಲ್ಲಿ ತ್ರಿಭಾಷಾ ಸೂತ್ರ ಪ್ರಾರಂಭಕ್ಕೆ ದೊಡ್ಡ ಇತಿಹಾಸವೇ ಇದೆ. ಮೂರು ಭಾಷಾ ಸೂತ್ರವನ್ನು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಶಿಕ್ಷಣ ಆಯೋಗವು 1964-66ರಲ್ಲಿ ಪ್ರಸ್ತಾಪಿಸಿತ್ತು. ಆಗ ಆಯಾ ರಾಜ್ಯದ ಪ್ರಾದೇಶಿಕ ಭಾಷೆ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಸೇರಿದ್ದವು. 1968ರಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರು ಶಿಕ್ಷಣ ನೀತಿಯನ್ನು ಔಪಚಾರಿಕವಾಗಿ ಜಾರಿ ಮಾಡಿದ್ದರು.
ಹಿಂದಿ ಬೇಡ ಎನ್ನುವ ಕೂಗು ಆಗಲೇ ಪ್ರಾರಂಭವಾಗಿತ್ತು. ಇದರ ವಿರುದ್ಧ ಗಟ್ಟಿಯಾಗಿ ನಿಂತಿದ್ದು ತಮಿಳುನಾಡು ಸರ್ಕಾರ ಮಾತ್ರ. ಅಂದಿನಿಂದಲೂ ತಮಿಳಿಗರು ತಮ್ಮ ಅಸ್ತಿತ್ವದ ಬಗ್ಗೆ ಸ್ಪಷ್ಟವಾಗಿದ್ದಾರೆ. ಮುಂದುವರಿದು 1986ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರು ತ್ರಿಭಾಷಾ ಅಥವಾ ಶಿಕ್ಷಣ ನೀತಿಯ ಬಗ್ಗೆ ಪುನರುಚ್ಚರಿಸಿದ್ದರು. 1992ರಲ್ಲಿ ನರಸಿಂಹ ರಾವ್ ಅವರ ಕಾಂಗ್ರೆಸ್ ಸರ್ಕಾರವು ತ್ರಿಭಾಷಾ ಸೂತ್ರಕ್ಕೆ ಬಂದಿತು. ಈ ಸೂತ್ರದ ಅನ್ವಯ ಮೂರು ಭಾಷೆಗಳನ್ನು ಶಿಕ್ಷಣದಲ್ಲಿ ಸೇರಿಸಲಾಗುತ್ತದೆ.

ಹಿಂದಿ ವಿರೋಧ ಸುದೀರ್ಘ ಇತಿಹಾಸ: ತಮಿಳುನಾಡಿನಲ್ಲಿ ಹಿಂದಿ ವಿರೋಧಕ್ಕೆ ಸುದೀರ್ಘ ಇತಿಹಾಸವಿದೆ. ಅಲ್ಲಿನ ಜಸ್ಟೀಸ್ ಪಾರ್ಟಿ ಹಾಗೂ ಪೆರಿಯಾರ್ ಅವರಂತಹ ದ್ರಾವಿಡ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಇಲ್ಲಿ ಹಿಂದಿ ನೀತಿ ಜಾರಿ ಸಾಧ್ಯವಾಗಲಿಲ್ಲ. ಆದರೆ, ಹಿಂದಿ ವಿರೋಧ ಭಾವ ಭದ್ರವಾಗಿ ನೆಲೆಯೂರಿತು. ಇಲ್ಲವೇ ತಮಿಳು ಅಸ್ತಿತ್ವದ ಭಾವ ಹೆಚ್ಚಾಯಿತು ಎಂದೇ ಹೇಳಬಹುದು.
1968ರಲ್ಲಿ ತ್ರಿಭಾಷಾ ಸೂತ್ರವನ್ನು ಸಹ ತಮಿಳುನಾಡು ಸರ್ಕಾರ ಉಗ್ರವಾಗಿ ವಿರೋಧಿಸಿತ್ತು. ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಸಿ.ಎನ್ ಅಣ್ಣಾದೊರೈ ಅವರು ನಾವು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳುತ್ತೇವೆ ಎಂದು ದ್ವಿಭಾಷ ಸೂತ್ರ ತಮಿಳು ಹಾಗೂ ಇಂಗ್ಲಿಷ್ ಭಾಷೆಯನ್ನು ಅಳವಡಿಸಿಕೊಂಡರು.
ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರ ಯಾವಾಗ: ಕರ್ನಾಟಕದಲ್ಲಿ ತ್ರಿಭಾಷ ಸೂತ್ರವನ್ನು ಅಂದರೆ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಾಗ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅವಧಿಯಲ್ಲಿ ಅಳವಡಿಸಿಕೊಳ್ಳಲಾಯಿತು. ತ್ರಿಭಾಷಾ ಸೂತ್ರಕ್ಕೆ ನಿಜಲಿಂಗಪ್ಪ ಅವರು ಸಹಿ ಹಾಕಿದ್ದರು. ಹೀಗಾಗಿ ಕರ್ನಾಟಕದಲ್ಲಿ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಸಲಾಗುತ್ತದೆ.
ಉತ್ತರದವರು ದಕ್ಷಿಣ ಭಾಷೆಯನ್ನು ಕಲಿಯಲಿಲ್ಲ
ಇನ್ನು ದಕ್ಷಿಣ ಭಾರತದಲ್ಲಿ ತಮಿಳುನಾಡು ರಾಜ್ಯವನ್ನು ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯಗಳು ತ್ರಿಭಾಷ ಸೂತ್ರವನ್ನು ಅಳವಡಿಸಿಕೊಂಡಂತೆ ಆಗಿದೆ. ಆದರೆ, ತಮಿಳುನಾಡು ಸರ್ಕಾರ ಮಾತ್ರ ತನ್ನ ಪಟ್ಟು ಬಿಡಲಿಲ್ಲ. ಮೂರು ಭಾಷೆಗಳು ಬಂದಾಗ ಮಕ್ಕಳು ಶಿಕ್ಷಣ ಕಲಿಯುವುದಕ್ಕೆ ಕಷ್ಟವಾಗುತ್ತದೆ. ಅಲ್ಲದೆ ನಮಗೆ ಹಿಂದಿ ಬೇಡ ಎನ್ನುವುದು ಅವರ ನಿಲುವಾಗಿದೆ. ಇನ್ನು ದಕ್ಷಿಣದಲ್ಲಿ ಹಿಂದಿ ಭಾಷೆಯನ್ನು ಅಳವಡಿಸಿಕೊಂಡಿರುವ ಹೊರತಾಗಿಯೂ ಉತ್ತರ ಭಾರತದ ಯಾವೊಂದು ರಾಜ್ಯದಲ್ಲೂ ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಭಾಷೆಯನ್ನು ಅಳವಡಿಸಿಕೊಂಡಿಲ್ಲ. ಉತ್ತರ ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯನ್ನು ಮಾತ್ರ ಕಲಿಸಲಾಗುತ್ತಿದೆ. ಇಲ್ಲಿ ಅನ್ಯಯವಾಗಿರುವುದು ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಕೆಲವು ಪ್ರಮುಖ ರಾಜ್ಯಗಳಿಗೆ ಎನ್ನುವ ಮಾತಿದೆ.
ಸಮರಕ್ಕೂ ಸಿದ್ಧವೆಂದ ತಮಿಳುನಾಡು!
ಹಿಂದಿ ಹೇರಿಕೆಯ ವಿರುದ್ಧ ಸಮರ ಸಾರಿರುವ ತಮಿಳುನಾಡು ಸರ್ಕಾರವು ಈ ವಿಚಾರದಲ್ಲಿ ಯಾವುದೇ ಸಂಘರ್ಷಕ್ಕೂ ಸಿದ್ಧ ಎಂದು ಹೇಳಿದೆ. ಕೇಂದ್ರ ಸರ್ಕಾರ ಹಾಗೂ ತಮಿಳುನಾಡಿನ ನಡುವೆ ಈ ವಿಚಾರವಾಗಿ ವಾಕ್ಸಮರ ಮುಂದುವರಿದಿದೆ. ಹೊಸ ಶಿಕ್ಷಣ ನೀತಿ ಮಾತ್ರವಲ್ಲ ರೂಪಾಯಿ ಚಿಹ್ನೆಯನ್ನೂ ಸಹ ತಮಿಳುನಾಡು ಸರ್ಕಾರವು ಬಜೆಟ್‌ನಲ್ಲಿ ಕೈಬಿಟ್ಟಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲೂ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಬೇಕು ಎನ್ನುವ ಆಗ್ರಹವು ಇದೀಗ ಹೆಚ್ಚಾಗಿದೆ. ತ್ರಿಭಾಷಾ ಸೂತ್ರದ ಬಗ್ಗೆ ಪರ - ವಿರೋಧ ಚರ್ಚೆಗಳು ಮುಂದುವರಿದಿವೆ.












Click it and Unblock the Notifications