Hindenburg Research: ಹಿಂಡೆನ್ ಬರ್ಗ್ ಹೆಸರು ಬಂದಿದ್ದು ಹೇಗೆ?
ಬೆಂಗಳೂರು, ಆಗಸ್ಟ್ 12: ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ ಬರ್ಗ್ ಭಾರತದಲ್ಲಿ ಮತ್ತೆ ಸದ್ದು, ಸುದ್ದಿ ಮಾಡುತ್ತಿದೆ. ಅದಾನಿ ಗ್ರೂಪ್ ಕುರಿತು ಕಂಪನಿ ಪ್ರಕಟಿಸಿದ್ದ ವರದಿ ಭಾರತದ ಷೇರುಪೇಟೆಯಲ್ಲಿ ತಲ್ಲಣ ಉಂಟು ಮಾಡಿತ್ತು. ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತವಾಗಿ ಹೂಡಿಕೆದಾರರು ಆತಂಕಗೊಳ್ಳುವಂತೆ ಆಗಿತ್ತು. ಈಗ ಮತ್ತೆ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಅದಾನಿ ಷೇರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹಿಂಡನ್ ಬರ್ಗ್ ವರದಿ ಆರೋಪಿಸಿದೆ.
ಎರಡು ದಿನಗಳಿಂದ ಮತ್ತೆ ಭಾರತದಲ್ಲಿ ಹಿಂಡನ್ ಬರ್ಗ್ ವರದಿಯ ಕುರಿತು ಚರ್ಚೆಗಳು ಆರಂಭವಾಗಿದೆ. ಇದು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ದಾರಿ ಮಾಡಿಕೊಟ್ಟಿದೆ. ಅಮೆರಿಕದ ಸಂಶೋಧನಾ ಸಂಸ್ಥೆಗೆ ಹಿಂಡನ್ ಬರ್ಗ್ ಎಂದು ಹೆಸರು ಬಂದಿದ್ದು ಹೇಗೆ?, ಇದರ ವರದಿ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಲು ಕಾರಣವೇನು? ಎಂಬ ವಿವರ ಇಲ್ಲಿದೆ.

ಹಿಂಡನ್ ಬರ್ಗ್ ವೆಬ್‌ಸೈಟ್ ಪ್ರಕಾರ ಕಂಪನಿ ಸಂಸ್ಥಾಪಕ ನಾಥನ್ ಆಂಡರ್ಸನ್. ಒಬ್ಬ ಚಾರ್ಟಡ್ ಅಕೌಂಟೆಂಟ್ ಆದ ಈತ, 2017ರಲ್ಲಿ ನ್ಯೂಯಾರ್ಕ್‌ನಲ್ಲಿ ಸಂಶೋಧನಾ ಸಂಸ್ಥೆ ಆರಂಭಿಸಿದರು. ಅಂತರಾಷ್ಟ್ರೀಯ ಬಿಸಿನೆಸ್ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರುವ ನಾಥನ್ ಇಸ್ರೇಲ್‌ನ ಮಾಧ್ಯಮ ಸಂಸ್ಥೆಯೊಂದರಲ್ಲಿ ಮೊದಲು ಕೆಲಸ ಮಾಡುತ್ತಿದ್ದರು. ಅಂಬ್ಯುಲೆನ್ಸ್ ಚಾಲಕರಾಗಿದ್ದರು.
ಹಿಂಡನ್ ಬರ್ಗ್ ಎಂಬ ಹೆಸರು: ಹಿಂಡನ್ ಬರ್ಗ್ ಎಂಬುದು ಏರ್ ಶಿಪ್ ಒಂದರ ಹೆಸರು. ಜರ್ಮನಿ ಮೂಲದ ಕಂಪನಿ ಹಿಂಡನ್ ಬರ್ಗ್ ಎಂಬ ಹೆಸರಿನ ವಿಮಾನವನ್ನು ಫ್ರಾಂಕ್ ಫರ್ಟ್‌ನಿಂದ ನ್ಯೂಜೆರ್ಸಿಗೆ ಹಾರಾಟ ಆರಂಭಿಸಿತ್ತು. 1937ರಲ್ಲಿ ಈ ಹಾರಾಟ ದುರಂತ ಅಂತ್ಯ ಕಂಡಿತ್ತು. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಸುಮಾರು 36 ಜನರು ಸಜೀವವಾಗಿ ದಹನವಾಗಿದ್ದರು. ಈ ದುರಂತದ ಬಳಿಕ ಹಿಂಡನ್ ಬರ್ಗ್ ಏರ್ ಶಿಪ್‌ಗಳ ಹಾರಾಟವನ್ನು ನಿಷೇಧಿಸಲಾಯಿತು.
ಹಿಂಡನ್ ಬರ್ಗ್ ಮಾನವ ನಿರ್ಮಿತ ದುರಂತ ಎಂದು ಕರೆಯಲಾಗುತ್ತದೆ. ಇದೇ ಹೆಸರನ್ನು ನಾಥನ್ ಆಂಡರ್ಸನ್ ತಮ್ಮ ಕಂಪನಿಗೆ ಇಟ್ಟಿದ್ದಾರೆ. ವೆಬ್‌ಸೈಟ್ ಮಾಹಿತಿಯಂತೆ ಹಿಂಡನ್ ಬರ್ಗ್ ಅವ್ಯವಹಾರ, ಅನುಮಾನಸ್ಪದ ಚಟುವಟಿಕೆ, ಭ್ರಷ್ಟಾಚಾರದ ಬಗ್ಗೆ ಸಂಶೋಧನೆಯನ್ನು ನಡೆಸಿ ವರದಿಯನ್ನು ಪ್ರಕಟಿಸುತ್ತದೆ. ಅದಾನಿ ಗ್ರೂಪ್ ಕುರಿತು ಕಂಪನಿ 32,000 ಪದಗಳ ವರದಿಯನ್ನು ಪ್ರಕಟಿಸಿತ್ತು, ಬೇಕಾದರೆ ಗ್ರೂಪ್ ಅಮೆರಿಕದ ಕೋರ್ಟ್‌ನಲ್ಲಿ ಕಾನೂನು ಹೋರಾಟವನ್ನು ಮಾಡಲಿ ಎಂದು ಸವಾಲು ಹಾಕಿತ್ತು.
ಹಿಂಡನ್ ಬರ್ಗ್ ಮತ್ತು ನಾಥನ್ ಆಂಡರ್ಸನ್ ಅದಾನಿ ಗ್ರೂಪ್ ಬಗ್ಗೆ ಪ್ರಕಟಿಸಿದ ವರದಿ ಮೊದಲೇನಲ್ಲ. ಹಿಂದೆ ಈ ಮಾದರಿಯ ಅನೇಕ ವರದಿಗಳನ್ನು ಪ್ರಕಟಿಸಿ ತಲ್ಲಣವನ್ನು ಉಂಟು ಮಾಡಿತ್ತು. ಕಳೆದ ವಾರ something big soon India ಎಂದು ಟ್ವೀಟ್ ಮಾಡಿದ್ದ ಹಿಂಡನ್ ಬರ್ಗ್ ಮಾಧವಿ ಬುಚ್ ಮತ್ತು ಅವರ ಪತಿ ಅದಾನಿ ಷೇರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಬಿಡುಗಡೆ ಮಾಡಿ ಭಾರತದಲ್ಲಿ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ.
ಅಮೆರಿಕದ ನಿಕೋಲಾ ಆಟೊಮೊಬೈಲ್ ಕಂಪನಿ ಅಕ್ರಮದ ಕುರಿತು 2020ರಲ್ಲಿ ಹಿಂಡನ್ ಬರ್ಗ್ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಈ ವರದಿ ಬಳಿಕ ಕಂಪನಿ ಸ್ಥಾಪಕ ಟ್ರೆವರ್ ಮಿಲ್ಟನ್ ರಾಜೀನಾಮೆ ಕೊಟ್ಟರು. ಚೀನಾದ ವಿನ್ಸ್ ಫೈನಾನ್ಸ್, ಟೆಸ್ಲಾ ಸೇರಿದಂತೆ ವಿವಿಧ ಕಂಪನಿಗಳ ಬಗ್ಗೆ ಹಿಂಡನ್ ಬರ್ಗ್ ವರದಿಯನ್ನು ನೀಡಿದೆ. ಹಿಂಡನ್ ಬರ್ಗ್ ವರದಿ ಪಕ್ಷಪಾತಿಯಾಗಿರುತ್ತದೆ ಎಂದು ಕಂಪನಿಯ ವಿರುದ್ಧ ಸಹ ಆರೋಪಗಳಿವೆ.












Click it and Unblock the Notifications