24 ಲಕ್ಷದ ಕಾರ್ಪೊರೇಟ್ ಕೆಲಸಕ್ಕೆ ಗುಡ್‌ಬೈ ಹೇಳಿ ಹಿಮಾಚಲದ ಗುಡ್ಡಗಾಡಿನಲ್ಲಿ ಹೋಂಸ್ಟೇ ತೆರೆದ ಯುವತಿ

ಕೆಲವೊಮ್ಮೆ ಈ ಬೆಂಗಳೂರಿನಂತಹ ಮಹಾನಗರಗಳಲ್ಲಿ ಟ್ರಾಫಿಕ್‌ ಗದ್ದಲ ನಡುವೆ ಇರುವುದಕ್ಕಿಂತ ಯಾವುದಾದ್ರೂ ಹಳ್ಳಿಗಳಿಗೆ ಹೋಗಿ ತಾವು ಪ್ರಕೃತಿಯಲ್ಲಿ ಮಡಿಲಿನಲ್ಲಿ ಸಮಯ ಕಳೆಯಬೇಕು ಎಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬರು ಕಾರ್ಪೊರೇಟ್ ಜಗತ್ತಿನ ಯಾಂತ್ರಿಕ ಬದುಕಿನಿಂದ ಹೊರಬಂದು, ಪ್ರಕೃತಿಯ ಮಡಿಲಲ್ಲಿ ತಮ್ಮದೇ ಆದ ಸ್ವಂತ ಉದ್ಯಮ ಶುರು ಮಾಡಬೇಕು ಎಂದುಕೊಂಡಿದ್ದಾರೆ.

ಆದ್ರೆ ಎನನ್ನಾದರೂ ಅಂದುಕೊಳ್ಳುವುದು ತುಂಬ ಸುಲಭ.ಏಕೆಂದರೆ ಕೈತುಂಬಾ ಸಂಬಳ ತರುವ ಐಷಾರಾಮಿ ಕೆಲಸವನ್ನ ಬಿಟ್ಟು ಆ ಕನಸನ್ನು ನನಸು ಮಾಡುವ ಧೈರ್ಯ ಕೆಲವರಿಗೆ ಮಾತ್ರ ಇರುತ್ತದೆ. ಹಿಮಾಚಲ ಪ್ರದೇಶದ 33 ವರ್ಷದ ಯುವತಿ ತರಾನಾ ಚೌಹಾಣ್ ಅವರು ಅಂತಹದ್ದೇ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ವರ್ಷಕ್ಕೆ 24 ಲಕ್ಷ ರೂಪಾಯಿ ಆದಾಯ ತರುತ್ತಿದ್ದ ಕಾರ್ಪೊರೇಟ್ ಕೆಲಸಕ್ಕೆ ವಿದಾಯ ಹೇಳಿದ ಅವರು, ಹಿಮಾಚಲ ಪ್ರದೇಶದ ರೋಹ್ರು ಎಂಬಲ್ಲಿ ತಮ್ಮ ಶತಮಾನದಷ್ಟು ಹಳೆಯದಾದ ಪೂರ್ವಜರ ಮನೆಯನ್ನ ನವೀಕರಿಸಿ ಒಂದೊಳ್ಳೆ 'ಹೋಂಸ್ಟೇ' ಆಗಿ ಪರಿವರ್ತಿಸಿದ್ದಾರೆ.

Himachal Woman Leaves 24 LPA Corporate Job to Start Ancestral Homestay in the Mountains

ತರಾನಾ ಚೌಹಾಣ್ ಅವರು ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಟಿಸಿಎಸ್ ಕಂಪನಿಯಲ್ಲಿ ಸೀನಿಯರ್ ಬಿಸಿನೆಸ್ ಅನಲಿಸ್ಟ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಬಳಿಕ ಪ್ರಾಡಕ್ಟ್ ಮ್ಯಾನೇಜರ್ ಆಗಿ ಬಡ್ತಿ ಪಡೆದು, ಆರು ವರ್ಷಗಳ ಕಾಲ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದರು. ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೇರಿದರೂ, ಕೇವಲ ವೀಕೆಂಡ್‌ಗಾಗಿ ಬದುಕುವ ಜೀವನಶೈಲಿ ಅವರಿಗೆ ತೃಪ್ತಿ ನೀಡಲಿಲ್ಲ.

"ನಾನು ಎಂತಹ ಜೀವನವನ್ನು ಕಟ್ಟಿಕೊಳ್ಳುತ್ತಿದ್ದೇನೆ?" ಎಂಬ ಪ್ರಶ್ನೆ ಅವರನ್ನ ಪದೇ ಪದೇ ಕಾಡತೊಡಗಿತ್ತಂತೆ. ಬೇರೆಯವರ ಕನಸುಗಳಿಗಾಗಿ ತಮ್ಮ ಅಮೂಲ್ಯ ಸಮಯವನ್ನ ವ್ಯರ್ಥ ಮಾಡಿಕೊಳ್ಳುವ ಬದಲು, ತನ್ನದೇ ಆದ ಸ್ವಂತ ಉದ್ಯಮ ಕಟ್ಟುವ ಉದ್ದೇಶದಿಂದ ಅವರು ಈ ದೊಡ್ಡ ನಿರ್ಧಾರ ಕೈಗೊಂಡರು.

ನಿರ್ವಾಣ ಹೋಂಸ್ಟೇ ಶುರುವಾಗಿದ್ದು ಹೇಗೆ?

2020ರ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ತಮ್ಮ ಊರಿಗೆ ಮರಳಿದಾಗ ತರಾನಾ ಅವರಿಗೆ ಪರ್ವತ, ಬೆಟ್ಟ ಗುಡ್ಡಗಳ ಮೇಲಿನ ಪ್ರೀತಿ ಹೆಚ್ಚಾಯಿತು. ನಗರದ ಕಾಂಕ್ರೀಟ್ ಕಾಡಿಗಿಂತ ಪ್ರಕೃತಿಯ ಮಡಿಲು ಅವರಿಗೆ ಹೆಚ್ಚು ಆಪ್ತವಾಯಿತು. ತಮ್ಮ ಕಾರ್ಪೊರೇಟ್ ಕೆಲಸವನ್ನು ಮನೆಯಿಂದಲೇ ಮಾಡುತ್ತಾ, ಜೊತೆಜೊತೆಗೆ ತಮ್ಮ ಶತಮಾನದಷ್ಟು ಹಳೆಯದಾದ ಮನೆಯನ್ನ ನವೀಕರಿಸಲು ಶುರುಮಾಡಿದರು.

ಈ ಐಡಿಯಾ ನಿಜಕ್ಕೂ ವರ್ಕ್ ಔಟ್ ಆಗುತ್ತದೆ ಎಂಬ ಭರವಸೆ ಮೂಡಿದ ಮೇಲಷ್ಟೇ ಅವರು ತಮ್ಮ ಕೆಲಸಕ್ಕೆ ರಿಸೈನ್‌ ಮಾಡಿ, 'ನಿರ್ವಾಣ ಹೋಂಸ್ಟೇ' ಆರಂಭಿಸಿದರು.

ಹ್ವಾಸ್ಪಿಟಾಲಿಟಿ ಕ್ಷೇತ್ರದ ಯಾವುದೇ ಪೂರ್ವಾಪರ ಜ್ಞಾನವಿಲ್ಲದ ತರಾನಾ ಅವರಿಗೆ ಆರಂಭಿಕ ದಿನಗಳು ಅಷ್ಟು ಸುಲಭವಾಗಿರಲಿಲ್ಲ. ಅತಿಥಿಗಳನ್ನ ಸತ್ಕರಿಸುವುದರಿಂದ ಹಿಡಿದು, ಅಡುಗೆ, ಪ್ಲಂಬಿಂಗ್, ಹಾಗೂ ಸೋಶಿಯಲ್ ಮೀಡಿಯಾ ನಿರ್ವಹಣೆವರೆಗೂ ಎಲ್ಲವನ್ನೂ ಅವರೊಬ್ಬರೇ ನಿಭಾಯಿಸಬೇಕಿತ್ತು.

ಗೂಗಲ್ ಮ್ಯಾಪ್‌ನಲ್ಲಿ ತಮ್ಮ ಲೊಕೇಶನ್ ಸೇರಿಸಲು ಅವರು ಬರೋಬ್ಬರಿ ಒಂದು ತಿಂಗಳು ಪರದಾಡಿದ್ದರು. ಪ್ರಸ್ತುತ ಹೋಂಸ್ಟೇ ಆದಾಯದ ಬಗ್ಗೆ ಮಾತನಾಡಿರುವ ಅವರು, "ಈಗ ನನ್ನ ಆದಾಯ ಕಾರ್ಪೊರೇಟ್ ಸಂಬಳದಂತೆ ನಿಗದಿತವಾಗಿಲ್ಲ. ಕೆಲವು ತಿಂಗಳು 5 ಲಕ್ಷ ರೂ. ಸಂಪಾದಿಸುತ್ತೇನೆ, ಇನ್ನು ಕೆಲವು ತಿಂಗಳು 1 ಲಕ್ಷ ರೂ. ಕೂಡ ಸಂಪಾದನೆ ಆಗುವುದಿಲ್ಲ. ಆದರೂ ನನಗೆ ಈ ಸವಾಲಿನಲ್ಲಿ ಒಂದು ರೀತಿ ನೆಮ್ಮದಿ ಇದೆ, ನನ್ನ ಸಮಯದ ಮೇಲೆ ನನಗೇ ಸಂಪೂರ್ಣ ನಿಯಂತ್ರಣವಿದೆ" ಎನ್ನುತ್ತಾರೆ.

ಉದ್ಯಮಶೀಲತೆ ಬಗ್ಗೆ ಯುವತಿಯ ಕಿವಿಮಾತು

ಯಾರೂ ಕೂಡ ಯಾವುದೇ ಪರ್ಯಾಯ ಯೋಜನೆ ಇಲ್ಲದೆ ದಿಢೀರ್ ಅಂತ ಕೆಲಸ ಬಿಡಬಾರದು ಎಂಬುದು ತರಾನಾ ಅವರ ಕಿವಿಮಾತು. "ಕೆಲಸ ಬಿಡುವ ಮೊದಲು ಹೊಸ ಕೌಶಲ್ಯ ಕಲಿಯಿರಿ, ಸೈಡ್ ಪ್ರಾಜೆಕ್ಟ್ ಶುರು ಮಾಡಿ, ಹಣ ಉಳಿತಾಯ ಮಾಡಿ. ಕನಸು ನಿಮ್ಮನ್ನ ಆರ್ಥಿಕವಾಗಿ ಸಾಕುವ ಹಂತಕ್ಕೆ ಬಂದಾಗ ಮಾತ್ರ ಭರವಸೆಯಿಂದ ಕೆಲಸವನ್ನು ಬಿಡಿ" ಎಂದು ಅವರು ಪ್ರಾಯೋಗಿಕವಾಗಿ ಯೋಚಿಸಲು ಸಲಹೆ ನೀಡಿದ್ದಾರೆ.

ಇಂದು ತರಾನಾ ಚೌಹಾಣ್ ಅವರು ತಮ್ಮ ಅತಿಥಿಗಳೊಂದಿಗೆ ಫೈರ್‌ ಕ್ಯಾಂಪ್‌ ಹಾಕಿ ಬೆಂಕಿಯ ಸುತ್ತ ಕುಳಿತು ಕಥೆಗಳನ್ನ ಹಂಚಿಕೊಳ್ಳುತ್ತಾ, ತಾವು ಆರಿಸಿಕೊಂಡ ಸ್ವತಂತ್ರ ಜೀವನವನ್ನ ಅತ್ಯಂತ ಖುಷಿಯಿಂದ ಕಳೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+