ಮೋದಿ ಭೇಟಿಯಾಗಬೇಕಿದ್ದ ಹಿಮಾಚಲ ಸಿಎಂಗೆ ಕೊರೊನಾ, ಸಭೆ ಮುಂದಕ್ಕೆ
ಶಿಮ್ಲಾ, ಡಿ. 19: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಕ್ತಾರರು ಡಿಸೆಂಬರ್ 19 ರಂದು ಶಿಮ್ಲಾದಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 19ರ ಸೋಮವಾರ ನವದೆಹಲಿಯಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ, ಸಿಎಂ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಈಗ ಪ್ರಧಾನಿ ಜೊತೆಗಿನ ಸಭೆಯನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಧಾನ ಮಂತ್ರಿಯನ್ನು ಭೇಟಿ ಮಾಡುವ ಮೊದಲು ವಾಡಿಕೆಯ ಪರೀಕ್ಷೆ ಕಡ್ಡಾಯದ ಸಮಯದಲ್ಲಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಸಿಎಂಗೆ ಕೊರೊನಾ ಸೋಂಕು ಲಕ್ಷಣರಹಿತರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಂಡಿದ್ದಾರೆ. ಅವರ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಹೊಸದಾಗಿ ಚುನಾಯಿತ 38 ಶಾಸಕರು ಡಿಸೆಂಬರ್ 16 ರಂದು ರಾಜಸ್ಥಾನದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಭಾಗವಹಿಸಿದ್ದರು.

ಸದ್ಯಕ್ಕೆ ಸುಖ್ವಿಂದರ್ ಸಿಂಗ್ ಸುಖು ಅವರು ನವದೆಹಲಿಯಲ್ಲಿದ್ದು, ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ.












Click it and Unblock the Notifications