Gujarat Election Results 2022: ಎಎಪಿ ಸಿಎಂ ಅಭ್ಯರ್ಥಿ ಇಸುದಾನ್ ಗಧ್ವಿಗೆ ಸೋಲು
ಅಹಮದಾಬಾದ್, ಡಿಸೆಂಬರ್ 8: ಗುಜರಾತ್ ವಿಧಾನಸಭೆ ಚುನಾವಣೆಯ(Gujarat Assembly Elections 2022) ಮತ ಎಣಿಕೆ ಕಾರ್ಯ ಬಹುತೇಕ ಕೊನೆಯಾಗುವ ಹಂತಕ್ಕೆ ಬಂದು ತಲುಪಿದೆ. ಬಿಜೆಪಿ ದಾಖಲೆಯ ಗೆಲುವು ಸಾಧಿಸುವಲ್ಲಿ ಸಫಲವಾಗಿದೆ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದರೂ ದೊಡ್ಡ ನಷ್ಟವನ್ನು ಅನುಭವಿಸಿದೆ. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಒಂದಂಕಿ ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅಬ್ಬರದ ಪ್ರಚಾರ ಮಾಡಿತ್ತು. 40 ರಿಂದ 50 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಪಕ್ಷದ ನಾಯಕರು ಹೇಳಿಕೊಂಡಿದ್ದರು. ಸ್ವತಃ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‌ಗೆ ಹಲವು ಬಾರಿ ಭೇಟಿ ನೀಡಿದ್ದರು. ಸಾರ್ವಜನಿಕ ಸಭೆ ಹಾಗೂ ರೋಡ್ ಶೋಗಳನ್ನು ನಡೆಸಿದ್ದರು. ಗುಜರಾತ್‌ನಲ್ಲಿ ಎಎಪಿಗೆ ಜನಬೆಂಬಲವೂ ವ್ಯಕ್ತವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು.
ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಎಪಿ ನಾಯಕರು ಭರವಸೆಗಳು ಗುಜರಾತ್‌ನಲ್ಲಿ ಕೆಲಸ ಮಾಡಿಲ್ಲ. ಶಾಲೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯದಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಎಎಪಿ ನಾಯಕರು ಮಾತನಾಡಿದ್ದರು. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಗುಜರಾತ್‌ನಲ್ಲಿ ಪ್ರಚಾರ ಕೈಗೊಂಡಿದ್ದರು.

ಪ್ರಧಾನಿ ಮೋದಿ ವರ್ಚಸ್ಸು ಹಾಗೂ ಹಿಂದುತ್ವದ ಅಲೆಯು ಗುಜರಾತ್‌ನಲ್ಲಿ ಕೆಲಸ ಮಾಡಿದೆ ಎಂಬ ಅಭಿಪ್ರಾಯಗಳು ಈಗ ವ್ಯಕ್ತವಾಗಿವೆ. ಬಿಜೆಪಿಯ ಅಭೂತಪೂರ್ವ ಗೆಲುವು ಎಎಪಿ ಹಾಗೂ ಕಾಂಗ್ರೆಸ್ ದೊಡ್ಡ ಆಘಾತ ನೀಡಿದೆ ಎಂದೇ ಹೇಳಬಹುದು.
ಭೂಪೇಂದ್ರ ಪಟೇಲ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಅದೇ ರೀತಿ, ಪತ್ರಕರ್ತ ಇಸುದಾನ ಗಧ್ವಿ ಅವರನ್ನು ಎಎಪಿ ಚುನಾವಣಾ ಅಭ್ಯರ್ಥಿ ಎಂದು ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು.

ಖಂಭಾಲಿಯಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಇಸುದಾನ್ ಗಧ್ವಿ ಅವರು ಹೀನಾಯವಾಗಿ ಸೋಲು ಅನುಭವಿಸಿದ್ದಾರೆ. ಬಿಜೆಪಿಯ ಮುಲುಭಾಯ್ ಬೇರಾ ಅವರು ಗಧ್ವಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ 19,000 ಅಧಿಕ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.












Click it and Unblock the Notifications