Gujarat Election Result 2022 : ಪ್ರಮುಖ ಸೋಲು, ಗೆಲುವು, ಅಚ್ಚರಿಯ ಫಲಿತಾಂಶಗಳಿವು
ಅಹಮದಾಬಾದ್, ಡಿಸೆಂಬರ್ 8: ಬಹು ನಿರೀಕ್ಷಿತ ಗುಜರಾತ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 182 ಸ್ಥಾನಗಳಲ್ಲಿ ಬಿಜೆಪಿ 156 ಸ್ಥಾನಗಳನ್ನು ವಶಪಡಿಸಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. ಆಮ್ ಆದ್ಮಿ ಪಕ್ಷ 5 ಸ್ಥಾನಗಳಲ್ಲಿ ಗೆದ್ದಿದ್ದರೆ, ಸ್ವತಂತ್ರ ಅಭ್ಯರ್ಥಿಗಳು 3 ಕಡೆ ಜಯ ಸಾಧಿಸಿದ್ದು, ಕಾಂಗ್ರೆಸ್ 17 ಸ್ಥಾನಗಳನ್ನು ಮಾತ್ರ ಉಳಿಸಿಕೊಂಡಿದೆ, ಸಮಾಜವಾದಿ ಪಕ್ಷ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸ್ಪರ್ಧೆಯಿಂದಾಗಿ ಹಲವು ಅಚ್ಚರಿಯ ಫಲಿತಾಂಶಗಳು ಕೂಡ ಬಂದಿವೆ. ಪೋರಬಂದರ್‌ನಲ್ಲಿ ಹಾಲಿ ಬಿಜೆಪಿ ಶಾಸಕ ಬಾಬುಭಾಯ್ ಬೋಖಿರಿಯಾ ಕಾಂಗ್ರೆಸ್‌ನ ಅರ್ಜುನ್ ಮೊದ್ವಾಡಿಯಾ ವಿರುದ್ಧ 8181 ಮತಗಳ ಅಂತರದಿಂದ ಸೋತಿದ್ದಾರೆ. ಕಾಂಗ್ರೆಸ್‌ನ ಮೊದ್ವಾಡಿಯಾ 81,395 ಮತಗಳನ್ನು ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಬೊಖಿರಿಯಾ 73,388 ಮತಗಳನ್ನು ಪಡೆದು ಸೋಲನುಭವಿಸಿದರು. ಬೊಖಿರಿಯಾ 2014 ರಲ್ಲಿ ಆನಂದಿಬೆನ್ ಪಟೇಲ್ ಅಧಿಕಾರಾವಧಿಯಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.
ಬಿಜೆಪಿ ಪಕ್ಷಕ್ಕೆ ವಘೋಡಿಯಾ ಕ್ಷೇತ್ರದಲ್ಲಿ ಮತ್ತೊಂದು ಆಘಾತ ಎದುರಾಗಿದೆ. ಅಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಮಾಜಿ ಬಿಜೆಪಿ ಸದಸ್ಯ ಧರ್ಮೇಂದ್ರಸಿನ್ಹ ವಘೇಲಾ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಅಶ್ವಿನ್ ಪಟೇಲ್ ವಿರುದ್ಧ ಜಯ ಗಳಿಸಿದ್ದರು. ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಶಾಸಕ ಮಧು ಶ್ರೀವಾಸ್ತವ್ ಕೂಡ ಸೋತು ನಿರಾಸೆ ಅನುಭವಿಸಿದ್ದಾರೆ. ಧರ್ಮೇಂದ್ರಸಿನ್ಹ 77,667 ಮತಗಳನ್ನು ಪಡೆದರೆ, ಪಟೇಲ್ 63,781 ಮತ್ತು ಶ್ರೀವ್ತಾಸ್ತವ್ ಕೇವಲ 14,586 ಮತಗಳನ್ನು ಪಡೆದಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಹೆಚ್ಚಿನ ಆಘಾತ
ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ) ಸಂಸ್ಥಾಪಕ ಮತ್ತು ರಾಷ್ಟ್ರೀಯ ಸಂಚಾಲಕ ಛೋಟುಭಾಯಿ ವಾಸವ ಬಿಜೆಪಿ ಅಭ್ಯರ್ಥಿ ರಿತೇಶ್ ವಾಸವ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಅಮ್ರೇಲಿಯಲ್ಲಿ ಬಿಜೆಪಿಯ ಕೌಶಿಕ್ ವೆಕಾರಿಯಾ, ಕಾಂಗ್ರೆಸ್‌ನ ಹಾಲಿ ಶಾಸಕ ಹಾಗೂ ವಿರೋಧ ಪಕ್ಷದ ಮಾಜಿ ನಾಯಕ ಪರೇಶ್ ಧನಾನಿ ಅವರನ್ನು ಸುಮಾರು 47,000 ಮತಗಳಿಂದ ಸೋಲಿಸಿದ್ದಾರೆ. ಪ್ರಸ್ತುತ ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ ಅವರು ಬಿಜೆಪಿಯ ಜಯಂತಿ ರಥ್ವಾ ವಿರುದ್ಧ ಸೋಲನುಭವಿಸಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಭಾರಿ ನಷ್ಟವಾಗಿದ್ದು, ಕಟರ್ಗಾಮ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಸೋಲು. ಮಾತ್ರವಲ್ಲದೆ ಆಪ್‌ನ ಪ್ರಮುಖ ಅಭ್ಯರ್ಥಿಗಳಾದ ಇಶುದನ್ ಗಾಧವಿ, ಅಲ್ಪೇಶ್ ಕಥಿರಿಯಾ, ಸಾಗರ್ ರಬಾರಿ ಸೇರಿದಂತೆ ಹಲವು ಅಭ್ಯರ್ಥಿಗಳು ಎಲ್ಲರೂ ಬಿಜೆಪಿ ಅಭ್ಯರ್ಥಿಗಳ ಎದುರು ಸೋಲನುಭವಿಸಿದ್ದಾರೆ.

ಬಿಜೆಪಿಗೆ ಶಾಕ್ ನೀಡಿದ ಕಾಂಗ್ರೆಸ್
ಉತ್ತರ ಗುಜರಾತ್‌ನ ವಿಜಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಮತ್ತೊಬ್ಬ ಹಾಲಿ ಶಾಸಕ ರಮಣ್ ಪಟೇಲ್ ಅವರು ಕಾಂಗ್ರೆಸ್‌ನ ಸಿಜೆ ಚಾವ್ಡಾ ಅವರ ವಿರುದ್ಧ ಸುಮಾರು 7,000 ಮತಗಳ ಅಂತರದಿಂದ ಸೋತಿದ್ದಾರೆ. ಪಟೇಲ್ 70,954 ಮತಗಳನ್ನು ಪಡೆದರೆ ಚಾವ್ಡಾ 77,806 ಮತಗಳನ್ನು ಪಡೆದರು.
ಏತನ್ಮಧ್ಯೆ, ರಾಜ್ಯ ಚುನಾವಣೆಗೆ ಮುನ್ನ ಸೇತುವೆ ಕುಸಿದ ಘಟನೆಯಿಂದ 135 ಜನರು ಸಾವನ್ನಪ್ಪಿದ ಪಾಟಿದಾರ್ ಪ್ರಾಬಲ್ಯವಿರುವ ಮೋರ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಿದೆ. ಐದು ಬಾರಿ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿ ಕಾಂತಿಭಾಯಿ ಅಮೃತಯ್ಯ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಹಾಲಿ ಶಾಸಕ ಪಟೇಲ್ ಜಯಂತಿಲಾಲ್ ವಿರುದ್ಧ ಜಯ ಗಳಿಸಿದ್ದಾರೆ.












Click it and Unblock the Notifications