ಗುಜರಾತ್ ನಲ್ಲಿ 126ರ ಅಜ್ಜಿ ಮತದಾನ, ರೇಷ್ಮಾಗೆ ಧಿಕ್ಕಾರ!
ಅಹ್ಮದಾಬಾದ್, ಡಿಸೆಂಬರ್ 09 : ಎಂಬತ್ತೊಂಬತ್ತು ವಿಧಾನಸಭೆ ಸ್ಥಾನಗಳಿಗಾಗಿ ಗುಜರಾತ್ ನಲ್ಲಿ ಮೊದಲ ಹಂತದ ಮತದಾನ ಸಾಗಿದ್ದು, 977 ಅಭ್ಯರ್ಥಿಗಳ ಹಣಬರಹವನ್ನು 2.12 ಕೋಟಿ ಜನರು ನಿರ್ಧರಿಸಲಿದ್ದಾರೆ. ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು ನಡೆಯಲಿದೆ.
ಜನರು ಕೂಡ ಅತ್ಯಂತ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಗುಜರಾತ್ ಪಶ್ಚಿಮದಲ್ಲಿರುವ ರಾಜಕೋಟ್ ನಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕಣಕ್ಕಿಳಿದಿದ್ದು, ಮತ್ತೊಮ್ಮೆ ಜಯಭೇರಿ ಬಾರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಇದೇ ರಾಜಕೋಟ್ ಬಳಿಯ ಉಪ್ಲೇಟಾ ಎಂಬಲ್ಲಿ ವಾಸವಾಗಿರುವ 126 ವರ್ಷ ವಯಸ್ಸಿನ ಹಿರಿಯಜ್ಜಿ ಅಜಿಬಾ ಎಂಬುವವರು ಇಂದು ಮತದಾನ ಮಾಡಿ ಲಕ್ಷಾಂತರ ಕಿರಿಯ ಮತದಾರರಿಗೆ ಮಾದರಿಯಾದರು. ಅಜಿಬಾ ಅವರು ಗುಜರಾತ್ ಮಾತ್ರವಲ್ಲ ವಿಶ್ವದ ಅತ್ಯಂತ ಹಿರಿಯ ನಾಗರಿಕ.
ಬೂತ್ ನಲ್ಲಿ ಮತದಾನಕ್ಕೆ ವಿಶೇಷ ವ್ಯವಸ್ಥೆ ಮಾಡಿದ್ದರಿಂದ ಅಜಿಬಾ ಅವರು ಹೆಚ್ಚು ಹೆಚ್ಚು ಸರತಿ ಸಾಲಿನಲ್ಲಿ ನಿಲ್ಲಬೇಕಾದಂಥ ಪ್ರಸಂಗ ಬರಲಿಲ್ಲ. ತಮ್ಮ ಜೀವನದಲ್ಲಿ ಹಲವಾರು ಚುನಾವಣೆಗಳನ್ನು ನೋಡಿರುವ ಅಜಿಬಾ ಅವರಿಗೆ ಸಾಕಷ್ಟು ವಯಸ್ಸಾಗಿದ್ದರೂ ಇನ್ನೂ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ.
ರೇಷ್ಮಾಗೆ ಪ್ರತಿಭಟನೆ : ಪಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರೊಂದಿಗೆ ಗುರುತಿಸಿಕೊಂಡಿದ್ದ, ಈಗ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿರುವ ರೇಷ್ಮಾ ಪಟೇಲ್ ಅವರು ಮತದಾನಕ್ಕೆ ಬರುತ್ತಿದ್ದಂತೆ ಕೆಲ ವಿರೋಧಿಗಳಿಂದ ಪ್ರತಿಭಟನೆ ಎದುರಿಸಿದ್ದಾರೆ.

ಅಚ್ಚುಕಟ್ಟಾಗಿ ಗುಲಾಬಿ ಬಣ್ಣದ ಸೀರೆಯುಟ್ಟು ಬಂದಿದ್ದ ಚೆಲುವೆ ರೇಷ್ಮಾ ಪಟೇಲ್ ಅವರು ಜುನಾಗಢ್ ನಲ್ಲಿ ಬೂತ್ ಬಳಿ ಬರುತ್ತಿದ್ದಂತೆ ಬೆರಳೆಣಿಕೆಯಷ್ಟಿದ್ದ ಕಾಂಗ್ರೆಸ್ ಮತ್ತು ಪಟೀದಾರ್ ಸಮುದಾಯಕ್ಕೆ ಸೇರಿದ ಕಾರ್ಯಕರ್ತರು ಆಕೆಯ ವಿರುದ್ಧ ಧಿಕ್ಕಾರ ಕೂಗಿದರು.
ರೇಷ್ಮಾ ಪಟೇಲ್ ಅವರು ಪಕ್ಷ ಬದಲಿಸಿ ಬಿಜೆಪಿ ಸೇರಿದ ನಂತರ ಅವರ ಕೆಲವು ಅಶ್ಲೀಲ ಚಿತ್ರಗಳು ಸಾಮಾಜಿಕ ತಾಣದಲ್ಲಿ ಹರಿದಾಡಿ ಮುಜುಗರಕ್ಕೆ ಕಾರಣವಾಗಿದ್ದವು. ಅಶ್ಲೀಲ ಚಿತ್ರಗಳು ಕಾಣಿಸಿಕೊಂಡ ನಂತರ ಅವರು ಪೊಲೀಸರಿಗೆ ದೂರು ನೀಡಿದ್ದರು. ಸೈಬರ್ ಕ್ರೈಂ ಪೊಲೀಸರ ಮೂಲಕ ತನಿಖೆ ನಡೆಸಲು ಕೋರ್ಟ್ ಆದೇಶ ನೀಡಿದೆ.












Click it and Unblock the Notifications