ಗುಜರಾತ್ ನಲ್ಲಿ ಮನೆ ಮನೆ ಪ್ರಚಾರ ಅಭಿಯಾನಕ್ಕೆ ಶಾ ಚಾಲನೆ
ಅಹಮದಾಬಾದ್, ನವೆಂಬರ್ 7: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಗುಜರಾತ್ ನಲ್ಲಿ ಆರು ದಿನಗಳ 'ಗುಜರಾತ್ ಗೌರವ್ ಮಹಾ ಸಂಪರ್ಕ್ ಅಭಿಯಾನ'ಕ್ಕೆ ಚಾಲನೆ ನೀಡಿದ್ದಾರೆ.
ಮುಂದಿನ ತಿಂಗಳು ಗುಜರಾತ್ ನಲ್ಲಿ ಚುನಾವಣೆ ನಡೆಯಲಿದ್ದು ಈ ಹಿನ್ನಲೆಯಲ್ಲಿ ಮನೆ ಮನೆ ಪ್ರಚಾರಕ್ಕೆ ಶಾ ಚಾಲನೆ ನೀಡಿದ್ದಾರೆ. ತಾವು ಈ ಹಿಂದೆ ಶಾಸಕರಾಗಿದ್ದ ನಾರಾಣ್ಪುರ್ ಕ್ಷೇತ್ರದಿಂದ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರವನ್ನು ಮನೆ ಮನೆಗೆ ಹಂಚಲಾಯಿತು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾಣಿ, ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಹಾಗೂ ಬಿಜೆಪಿ ನಾಯಕರು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಮನೆ ಮನೆ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಡಿಸೆಂಬರ್ 9 ಮತ್ತು 14ರಂದು ಗುಜರಾತ್ ನಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಈ ಮಹಾ ಅಭಿಯಾನದಲ್ಲಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಜೆಪಿ ನಡ್ಡಾ, ನಿರ್ಮಲಾ ಸೀತರಾಮನ್, ವಿಕೆ ಸಿಂಗ್, ಮನ್ಸುಖ್ ಮಂಡವಿಯಾ, ಪ್ರಕಾಶ್ ಜಾವ್ಡೇಕರ್ ಮೊದಲಾದವರು ಭಾಗವಹಿಸಲಿದ್ದಾರೆ.












Click it and Unblock the Notifications