ಗುಜರಾತ್ ಚುನಾವಣೆಗೆ ದಿನಾಂಕ ಪ್ರಕಟಿಸದ ಆಯೋಗದ ನಡೆ ಸುತ್ತ ಅನುಮಾನದ ಹುತ್ತ
ನವದೆಹಲಿ, ಅ.14: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ದಿನಾಂಕಗಳನ್ನು ಇಂದು ಪ್ರಕಟಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿತ್ತು. ಆದರೆ, ಎಲ್ಲರ ನಿರೀಕ್ಷೆಗಳನ್ನೂ ಹುಸಿಗೊಳಿಸಿ ಕೇವಲ ಹಿಮಾಚಲ ಪ್ರದೇಶ ಚುನಾವಣಾ ದಿನಾಂಕವನ್ನು ಘೋಷಿಸಿದೆ.
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, 'ಹಿಮಾಚಲ ಪ್ರದೇಶದ ವಿಧಾನಸಭೆಗೆ ನವೆಂಬರ್ 12 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು' ಎಂದು ತಿಳಿಸಿದ್ದಾರೆ.
ಗುಜರಾತ್ ಚುನಾವಣಾ ದಿನಾಂಕಗಳನ್ನು ಪ್ರಕಟಿಸದೇ ಇರುವುದರ ಕುರಿತು ಮಾತನಾಡಿದ ರಾಜೀವ್ ಕುಮಾರ್, '2017 ರಲ್ಲಿ ಎರಡೂ ರಾಜ್ಯಗಳಿಗೆ ಪ್ರತ್ಯೇಕ ದಿನಾಂಕಗಳಂದು ಚುನಾವಣೆ ನಡೆಸಲಾಗಿತ್ತು. ಅದರಂತೆಯೇ ಈ ಬಾರಿಯೂ ನಡೆಸಲಾಗುವುದು' ಎಂದು ತಿಳಿಸಿದ್ದಾರೆ.

'ಎರಡು ರಾಜ್ಯಗಳ ವಿಧಾನಸಭೆಗಳ ಅವಧಿ ಅಂತ್ಯದ ನಡುವೆ 40 ದಿನಗಳ ಅಂತರವಿದೆ. ನಿಯಮದ ಪ್ರಕಾರ, ಒಂದು ಫಲಿತಾಂಶವು ಇನ್ನೊಂದರ ಮೇಲೆ ಪರಿಣಾಮ ಬೀರದಂತೆ ತಡೆಯಲು ಕನಿಷ್ಠ 30 ದಿನಗಳು ಇರಬೇಕು' ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.
ಹವಾಮಾನದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಚುನಾವಣೆ ದಿನಾಂಕವನ್ನು ಮೊದಲು ಘೋಷಿಸಲು ನಿರ್ಧರಿಸಿದೆವು. ಒಂದು ರಾಜ್ಯದ ಚುನಾವಣೆ ಇನ್ನೊಂದು ರಾಜ್ಯ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಗುಜರಾತ್ ವಿಧಾನಸಭೆಯು ಫೆಬ್ರುವರಿ 18ರಂದು ಕೊನೆಗೊಂಡರೆ, ಹಿಮಾಚಲ ಪ್ರದೇಶ ವಿಧಾನಸಭೆ ಜನವರಿ 8ರಂದು ಅಂತ್ಯವಾಗಲಿದೆ. ಈ ಎರಡೂ ವಿಧಾನಸಭೆ ಚುನಾವಣೆ ದಿನಾಂಕಗಳನ್ನು ಒಟ್ಟಿಗೆ ಘೋಷಿಸದ ಆಯೋಗ ನಡೆಯು ಅಚ್ಚರಿಗೆ ಕಾರಣವಾಗಿದೆ.
ಚುನಾವಣಾ ಆಯೋಗದ ನಡೆಯು ಹಲವು ಅನುಮಾನಗಳಿಗಳೂ ಎಡೆಮಾಡಿಕೊಟ್ಟಿದೆ. ಕಾರಣ, ಗೋವಾ ವಿಧಾನಸಭೆ ಹಾಗೂ ಉತ್ತರ ಪ್ರದೇಶ ವಿಧಾನಸಭೆ ಅಂತ್ಯದ ಅವಧಿಯ ನಡುವಿನ ಅಂತರ 60 ದಿನಗಳಿತ್ತು. ಆದರೆ, ಚುನಾವಣಾ ಆಯೋಗವು ಗೋವಾ ಮತ್ತು ಉತ್ತರ ಪ್ರದೇಶ ಚುನಾವಣೆಗಳನ್ನು ಒಂದೇ ಬಾರಿ ನಡೆಸಿತ್ತು. 2022 ರ ಮಾರ್ಚ್‌ನಲ್ಲಿ ಗೋವಾ ವಿಧಾನಸಭೆ ಅವಧಿ ಅಂತ್ಯವಾಗಿತ್ತು. ಉತ್ತರ ಪ್ರದೇಶ ವಿಧಾನಸಭೆ ಅವಧಿ ಮೇನಲ್ಲಿ ಕೊನೆಗೊಂಡಿತ್ತು

2017ರ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಈಗ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷವು ನೆಲೆಯನ್ನು ಕಂಡುಕೊಳ್ಳುತ್ತಿದ್ದು, ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವುದು ಕೇಸರಿ ಪಕ್ಷಕ್ಕೆ ಮುಜುಗುರ ಉಂಟುಮಾಡಲಿದೆ ಎಂಬುದು ವಿಶ್ಲೇಷಕರ ವಾದವಾಗಿದೆ.












Click it and Unblock the Notifications